ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಂಗಾ ಸ್ನಾನ ತುಂಗಾ ಪಾನ ಇವೆರಡರಲ್ಲಿ ಒಂದನ್ನು ಮಾಡಿದರೂ ಅಗಣಿತ ಪುಣ್ಯ ಸಂಚಯವಾಗುತ್ತದೆ ಎಂಬುದು ಪ್ರತೀತಿ. ಅಂತೆಯೇ ರಾಜ್ಯದ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಶಿವನ ಅಭಿಷೇಕಕ್ಕಾಗಿ 35 ಕಿ.ಮೀ. ಬರಿಗಾಲಿನಲ್ಲಿ ಪಾದಯಾತ್ರೆ ಮೂಲಕ ಕಪಿಲಾ ಜಲ ತಂದು ಅಭಿಷೇಕಕ್ಕಾಗಿ ಬಳಸುವ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಹಿಂದಿನ ಪೀಳಿಗೆಯವರು ಅನುಸರಿಸುತ್ತಿದ್ದ ಕ್ರಮವನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಬರುವ ಮೂಲಕ 35 ಕಿ.ಮೀ.ದೂರ ಪಾದಯಾತ್ರೆ ಮೂಲಕ ಕಪಿಲ ಜಲ ತಂದು ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಿ, ಅಹೋರಾತ್ರಿ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಚೋಳರ ಕಾಲದ ದೇವಾಲಯ: ಹೆಗ್ಗೋಠಾರದಲ್ಲಿ ಸುಮಾರು 700 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ದರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ. ಶಿವರಾತ್ರಿಯಂದು ಸಿದ್ದರಾಮೇಶ್ವರ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ನಂತರ, ಕಪಿಲ ಜಲಕ್ಕೆ ಪೂಜೆ ಸಲ್ಲಿಸಿ, ಕಪಿಲೆಯಿಂದ ತಂದ ಹೊಸ ನೀರನ್ನು ಪ್ರತಿ ಮನೆಗಳಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಸಿದ್ದರಾಮೇಶ್ವರನಿಗೆ ಹೊಸ ನೀರು ತಂದು ಪೂಜೆ ಸಲ್ಲಿಸುವ ವಾಡಿಕೆ ಶತ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಈ ಪ್ರತೀತಿ ಇಂದಿನ ಆಧುನಿಕ ಕಾಲದಲ್ಲೂ ಆಚರಣೆಯಲ್ಲಿದ್ದು, ಪ್ರತಿ ವರ್ಷ ಶಿವರಾತ್ರಿಗೆ ಬೆಳಗಿನ ಜಾವವೇ ಗ್ರಾಮದಿಂದ ರಾಜಪ್ಪ, ಪ್ರಸಾದ್, ಕರಿಯಪ್ಪ ಮತ್ತು ಕುಮಾರ್ ಸುಮಾರು 35 ಕಿ.ಮೀ. ದೂರದವರಗೆ ಕಾಲ್ನಡಿಗೆ ಮೂಲಕ ನಂಜನಗೂಡು ತಾಲೂಕಿನ ತಗಡೂರು ಬಳಿ ಇರುವ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ಹೋಗಿ, ಅಲ್ಲಿ ಕಪಿಲೆಗೆ ಪೂಜೆ ಸಲ್ಲಿಸಿ, ತಾವು ತೆಗೆದುಕೊಂಡು ಹೋಗಿದ್ದ 4 ಬಿಂದಿಗೆಗೆ ಕಪಿಲ ಜಲ ತುಂಬಿಸಿಕೊಂಡು ನಂತರ ಕಾಲ್ನಡಿಗೆಯಲ್ಲಿ ಹಿಂತಿರುಗಿ ಅಭಿಷೇಕಕ್ಕೆ ಜಲ ತಂದರು.
ದಾರಿಯಲ್ಲಿ ಸಿಹಿಯೂಟ: ಕಾಲ್ನಡಿಗೆ ಮೂಲಕ ಕಪಿಲೆಗೆ ಜಲ ಹೊತ್ತು ತರುವರಿಗೆ ಆನಂಬಳ್ಳಿಯಲ್ಲಿ ಸಿಹಿಯೂಟ ಹಾಕುತ್ತಾರೆ. ಕಪಿಲ ಜಲವನ್ನು ತಲೆ ಮೇಲೆ ಹೊತ್ತು ಸಾಗುವ ವ್ಯಕ್ತಿಗಳು ದಾರಿಯಲ್ಲಿ ಸಿಗುವ ದೇವನೂರಿನ ಗುರುಮಲ್ಲೇಶ್ವರ ಗದ್ದಿಗೆಗೆ ಪೂಜೆ ಸಲ್ಲಿಸಿ ಸಂಜೆ ವೇಳೆಗೆ ಹೆಗ್ಗೋಠಾರ ಗ್ರಾಮಕ್ಕೆ ಆಗಮಿಸಿದರು. ಇವರ ಜೊತೆಗೆ ಗ್ರಾಮದ ಬಾವಿಯಿಂದ 101 ಬಿಂದಿಗೆ ನೀರು ಹೊತ್ತುಕೊಂಡು ಜನರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳುತ್ತಾರೆ. ಸಿದ್ದರಾಮೇಶ್ವರನ ಸನ್ನಿದಿಯಲ್ಲಿ ಕಪಿಲ ಜಲಕ್ಕೆ ವಿಶೇಷ ಪೂಜೆ ಸಲ್ಲುತ್ತದೆ. ನಂತರ ಕಪಿಲ ಜಲದೊಂದಿಗೆ ಬಿಲ್ವಪತ್ರೆ ಹಾಕಿ ಸಿದ್ದರಾಮೇಶ್ವರನಿಗೆ ರಾತ್ರಿಯಿಡಿ 5 ಬಾರಿ ಅಭಿಷೇಕ, ಪೂಜೆ ಸಲ್ಲಿಸುತ್ತಾರೆ. ಅಹೋರಾತ್ರಿ ಪೂಜೆ: ಗ್ರಾಮಸ್ಥರೆಲ್ಲ ಒಟ್ಟಾಗಿ ದೇವಸ್ಥಾನದಲ್ಲಿ ಜಾಗರಣೆ ಮಾಡುತ್ತಾ, ಶಿವಧ್ಯಾನದಲ್ಲಿ ನಿರತರಾಗುತ್ತಾರೆ. ಭಕ್ತಿಯಿಂದ ಧ್ಯಾನಿಸಿ ಜಾಗರಣೆ, ಉಪವಾಸ, ಅರ್ಚನೆ, ಅಭಿಷೇಕ ಶಿವನ ಭಜನೆ ಮಾಡುತ್ತಾರೆ ಎಂದು ಗ್ರಾಮದ ಮುಖಂಡ ಗೌಡಿಕೆ ಮಾದಪ್ಪ ಕನ್ನಡಪ್ರಭಕ್ಕೆ ತಿಳಿಸಿದರು.