35 ಸಾವಿರ ಬೆಳೆ ಕಟಾವು ಪ್ರಯೋಗ ಅಸಮರ್ಪಕ

KannadaprabhaNewsNetwork |  
Published : Nov 09, 2024, 01:12 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ: ಕಳೆದ ಬಾರಿ ರಾಜ್ಯದಾದ್ಯಂತ 1.35 ಲಕ್ಷ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಲಾಗಿದ್ದು, ವಿವಿಧ ಕಾರಣಗಳಿಂದಾಗಿ 35 ಸಾವಿರ ಬೆಳೆ ಕಟಾವು ಪ್ರಯೋಗಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿರ್ದೇಶಕ ಚಂದ್ರಶೇಖರ್ ಗುಡಿ ಹೇಳಿದರು.

ಚಿತ್ರದುರ್ಗ: ಕಳೆದ ಬಾರಿ ರಾಜ್ಯದಾದ್ಯಂತ 1.35 ಲಕ್ಷ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಲಾಗಿದ್ದು, ವಿವಿಧ ಕಾರಣಗಳಿಂದಾಗಿ 35 ಸಾವಿರ ಬೆಳೆ ಕಟಾವು ಪ್ರಯೋಗಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ನಿರ್ದೇಶಕ ಚಂದ್ರಶೇಖರ್ ಗುಡಿ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಳ್ಳಲಾದ 2024-25ನೇ ಸಾಲಿನ ಕೇಂದ್ರ ಪುರಸ್ಕೃತ ಸಕಾಲಿಕ ವರದಿ ಮತ್ತು ಬೆಳೆ ಅಂಕಿ-ಅಂಶಗಳ ಸುಧಾರಣೆ ಯೋಜನೆಗಳಿಗೆ ಸಂಬಂಧಿಸಿದ ವಿಭಾಗಮಟ್ಟದ ಪುನರ್‌ಮನನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬೆಳೆ ಕಟಾವು ಪ್ರಯೋಗಗಳನ್ನು ಗಂಭೀರವಾಗಿ ನಡೆಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ಆರೋಗ್ಯ ಇಲಾಖೆ ದತ್ತಾಂಶಗಳ ಪ್ರಕಾರ ಶೇ.100 ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುತ್ತಿವೆ. ಆದರೂ ಜನನ ನೋಂದಣಿಯಲ್ಲಿ ವಿಳಂಬವಾಗುತ್ತಿವೆ. ಈ ವೇಳೆ ಮನೆಯಲ್ಲಿಯೇ ಹೆರಿಗೆ ಆಗಿವೆ ಎಂದು ನೋಂದಣಿ ಮಾಡಿಸಲಾಗುತ್ತದೆ. ಈ ವೈರುದ್ಯದಿಂದ ಈಗಲೂ ಶೇ.80 ರಷ್ಟು ಜನನ ಮನೆಯಲ್ಲಿಯೇ ಎಂದು ದಂತ್ತಾಂಶದಲ್ಲಿ ಬಿಂಬಿತವಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಜನನ ಮತ್ತು ಮರಣ ನೋಂದಣಿಯನ್ನು ಸುಲಭಗೊಳಿಸುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ-ಮರಣ ನೋಂದಣಿ ಅಧಿಕಾರಿಯನ್ನಾಗಿ ಸರ್ಕಾರ ನೇಮಿಸಿದೆ. ತ್ವರಿತವಾಗಿ ಹಾಗೂ ಶೇ.100 ರಷ್ಟು ಜನನ-ಮರಣ ನೋಂದಣಿಯಾಗಬೇಕು ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಸರ್ಕಾರದ ನೀತಿ ನಿರೂಪಣೆಗೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರವಾಗಿವೆ. ಸಾಂಖ್ಯಿಕ ಇಲಾಖೆ ಸಂಗ್ರಹಿಸುವ ದತ್ತಾಂಶಗಳು ಹೆಚ್ಚಿನ ಮಹತ್ವ ಹೊಂದಿವೆ. ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನವರತ ಕೆಲಸ ಮಾಡುತ್ತಿರುತ್ತಾರೆ. ಸರ್ಕಾರಕ್ಕೆ ಅಗತ್ಯವಾದ ಮೂಲ ದತ್ತಾಂಶಗಳನ್ನು ಮುತುವರ್ಜಿಯಿಂದ ಸಂಗ್ರಹಿಸುತ್ತಾರೆ. ಆದರೆ ಈ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಜಿಲ್ಲೆಯ ಸಂಪೂರ್ಣ ಮಾಹಿತಿ ಸಿದ್ಧಪಡಿಸಿ, ಅದರ ಚಿತ್ರಣ ನೀಡುವಲ್ಲಿ ಸಾಂಖ್ಯಿಕ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು ದತ್ತಾಂಶ ಸಂಗ್ರಹಿಸುವಾಗ ಅನೇಕ ತಾಂತ್ರಿಕ ಅಡಚಣೆಗಳು ಎದುರಾಗುತ್ತವೆ ಎಂದು ಹೇಳಿದರು. ಈ ಕಾರ್ಯಾಗಾರದಲ್ಲಿ ಅಕ್ಕಪಕ್ಕದ 6 ಜಿಲ್ಲೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದು, ಆರೋಗ್ಯಕರ ಚರ್ಚೆ ಮೂಲಕ ಈ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ತಂತ್ರಾಂಶ ಆಧಾರಿತ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಬೆಂಗಳೂರಿನ ನಿರ್ದೇಶನಾಲಯದ ಅಧಿಕಾರಿಗಳು ಉಪನ್ಯಾಸದಲ್ಲಿ ಉಪಯುಕ್ತ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಕೃಷಿ ಅಂಕಿ-ಅಂಶ ಮತ್ತು ಬೆಳೆ ವಿಮಾ ವಿಭಾಗದ ಅಪರ ನಿರ್ದೇಶಕ ಗುರುರಾಜ್ ರಾವ್, ಸಿ.ಎನ್.ಎಲ್ ವಿಭಾಗದ ಅಪರ ನಿರ್ದೇಶಕ ಬಸನಗೌಡ, ಕೃಷಿ ಅಂಕಿ-ಅಂಶ ವಿಭಾಗದ ಜಂಟಿ ನಿರ್ದೇಶಕ ಟಿ.ಶಶಿಧರ್, ಬೆಳೆ ವಿಮಾ ವಿಭಾಗದ ಜಂಟಿ ನಿರ್ದೇಶಕಿ ಲಲಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಸಹಾಯಕ ನಿರ್ದೇಶಕರಾದ ಚಂದ್ರಕಲಾ, ಪುಷ್ಪ, ಸುಮಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ