- ಕೆಂಬಾವುಟ, ನೀಲಿಬಾವುಟ, ಹಸಿರು ಬಾವುಟದ ಶಕ್ತಿ ಅರಿದು, ಒಂದಾಗಲು ಡಾ.ಎ.ಬಿ.ರಾಮಚಂದ್ರಪ್ಪ ಮನವಿ
ಅಪಾಯದಲ್ಲಿರುವ ಭಾರತದ ತ್ರಿವರ್ಣ ಧ್ವಜ ರಕ್ಷಣೆಗಾಗಿ ಕಾರ್ಮಿಕರ ಕೆಂಪು ಬಾವುಟ, ದಲಿತ ಸಮುದಾಯದ ನೀಲಿ ಬಾವುಟ ಹಾಗೂ ರೈತರ ಹಸಿರು ಬಾವುಟಗಳು ಒಂದಾಗಿ, ನಿರಂತರ ಆಂದೋಲನ ನಡೆಸಬೇಕು. ಆಗ ಮಾತ್ರ ಸಂವಿಧಾನ, ಪ್ರಜಾಪ್ರಭುತ್ವ, ಅನ್ನದಾತರ ಭೂಮಿ, ಹಕ್ಕುಗಳು ಉಳಿಯುತ್ತವೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಶುಕ್ರವಾರ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಎರಡು ದಿನಗಳ ಪ್ರಥಮ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸಂವಿಧಾನ, ಪ್ರಜಾಪ್ರಭುತ್ವ, ರೈತರ ಭೂಮಿಯ ಉಳಿವಿಗಾಗಿ ರೈತ, ಕಾರ್ಮಿಕರು, ದಲಿತ ಸಂಘಟನೆಗಳು ಸಂಘಟಿತ ಆಂದೋಲನ ನಡೆಸಬೇಕು, ಐಕ್ಯತೆಯ ಹೋರಾಟ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.ಪ್ರಸ್ತುತದ ದೇಶದ ಪರಿಸ್ಥಿತಿಯಲ್ಲಿ ಕಾರ್ಮಿಕರು, ರೈತರು, ದಲಿತ ಸಮುದಾಯಗಳು ಒಂದೇ ವೇದಿಕೆಯಡಿ ಬರಬೇಕಾದ ಅಗತ್ಯ, ಅನಿವಾರ್ಯತೆ ಇದೆ. ಆಂದೋಲನ ಮೂಲಕ ದೇಶ ಕಟ್ಟುವಲ್ಲಿ ಹೊಸ ಭಾಷ್ಯ ಬರೆಯಬೇಕು. ದೇಶದ ಮೂಲನಿವಾಸಿಗಳಾದ ದ್ರಾವಿಡರು ತಮ್ಮ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೂ ಹಕ್ಕುಗಳು ಸಿಗುತ್ತಿಲ್ಲ. ಈಗ ಎಲ್ಲರೂ ಸಂಘಟಿತ ಹೋರಾಟ ನಡೆಸುವ ಮೂಲಕ ಹಕ್ಕುಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಹಿರಿಯ ಕಾರ್ಮಿಕ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಮಾತನಾಡಿ, ದೇಶದ ಧ್ವಜದ ಘನತೆ ಉಳಿಸಬೇಕೆಂಬ ಮಹತ್ತರ ಆಶಯದಿಂದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ರೂಪಿಸಲಾಗಿದೆ. ಇದು ಸಂಘಟನೆ ಅಲ್ಲ. ನಿರಂತರ ಚಳವಳಿ, ಆಂದೋಲನ. ಕಾರ್ಮಿಕ, ದಲಿತ, ರೈತರ ಈ ಮೂರೂ ಸಂಘಟನೆಗಳು ಒಗ್ಗೂಡಿ ಪ್ರಭುತ್ವ ಸಮಾಜವಾದ ರೂಪಿಸಬೇಕು ಎಂದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅನೇಕ ಚಳವಳಿ, ಹೋರಾಟಕ್ಕೆ ನಾಂದಿ ಹಾಡಿರುವ ಪಂಪಾಪತಿ ಕರ್ಮಭೂಮಿ ದಾವಣಗೆರೆ. ಇಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಥಮ ರಾಜ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಚಾರ. ಅಸಮಾನತೆ ನಿರ್ಮೂಲನೆ, ಶಿಕ್ಷಣ, ಆರ್ಥಿಕತೆಗೆ ದಲಿತ, ರೈತ, ಕಾರ್ಮಿಕ ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕು. ಸರ್ಕಾರಕ್ಕೆ ಚಾಟಿ ಬೀಸುವಂತಹ ಜನಾಂದೋಲನ ನಡೆಯಬೇಕು. ಆಗ ಯಾವುದೇ ಸರ್ಕಾರವೇ ಇರಲಿ, ಸ್ಪಂದಿಸುತ್ತದೆ ಎಂದು ಹೇಳಿದರು.
ಆಂದೋಲನದ ಡಾ.ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸಿದ್ದರು. ಆಂದೋಲನದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಮಹೇಶಕುಮಾರ ರಾಥೋಡ್ ಪ್ರಾಸ್ತಾವಿಕ ನುಡಿಗಳಾಡಿದರು. ಡಾ.ಮಂಜುಳಾ ಮರ್ಜಿ, ರಾಷ್ಟ್ರೀಯ ಅಧ್ಯಕ್ಷ ಎ.ರಾಮಮೂರ್ತಿ, ಆವರಗೆರೆ ಚಂದ್ರು, ಆವರಗೆರೆ ವಾಸು, ಎಚ್.ಮಲ್ಲೇಶ್, ಹೆಗ್ಗೆರೆ ರಂಗಪ್ಪ, ಪಿ.ಷಣ್ಮುಖಸ್ವಾಮಿ, ರೇಣುಕಮ್ಮ, ಎಚ್.ಎಂ. ಸಂತೋಷ್, ವೀಣಾ ನಾಯಕ್ ಇತರರು ಇದ್ದರು. ಕಾರ್ಯಕ್ರಮದ ಮುನ್ನ ಅಂಬೇಡ್ಕರ್ ವೃತ್ತದಿಂದ ರ್‍ಯಾಲಿ ನಡೆಯಿತು.
ಕೋಟ್ ಪುರಾತನತೆಯ ಪ್ರಕಾರ ಎಲ್ಲವೂ ಸಮಾನರು. ಆದರೆ, ಸನಾತನತೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಎಲ್ಲ ಕಹಿ ಸತ್ಯ ಗೊತ್ತಿದ್ದರೂ ಕತ್ತಿಗೆ ಚುಂಬಿಸುವಂತಹ ದುರಂತದ ಕೆಲಸ ನಡೆಸಲಾಗುತ್ತಿದೆ. ಹಕ್ಕುಗಳ ಕೇಳುವವವರಿಗೆ ನಗರ ನಕ್ಸಲರ ಹೆಸರಲ್ಲಿ ದೇಶದ್ರೋಹಿಗಳ ಪಟ್ಟ ಕಟ್ಟಲಾಗುತ್ತಿದೆ
- - - -8ಕೆಡಿವಿಜಿ1: