ಹುಬ್ಬಳ್ಳಿ:ಮಹಾನಗರ ಸೇರಿದಂತೆ ಎಲ್ಲೆಡೆ ಹೋಳಿಹಬ್ಬದ ಅಂಗವಾಗಿ ರತಿ- ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯೂ ಶ್ರದ್ಧಾ-ಭಕ್ತಿಯಿಂದ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆದವು. 350ಕ್ಕೂ ಹೆಚ್ಚು ಕಡೆಗಳಲ್ಲಿ ಕಾಮ-ರತಿಯರನ್ನು ಪ್ರತಿಷ್ಠಾಪಿಸಲಾಗಿದೆ. ಪ್ರತಿವರ್ಷ ಮಧ್ಯಾಹ್ನವೇ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ವರ್ಷ ಚಂದ್ರ ಕೇತು ಗ್ರಹಣದ ಹಿನ್ನೆಲೆಯಲ್ಲಿ ಗ್ರಹಣ ಬಿಟ್ಟ ನಂತರ ರತಿ-ಕಾಮಣ್ಣ ವಿರಾಜಮಾನರಾದರು. ಮಾ. 4ರಂದು ಧಾರವಾಡದಲ್ಲಿ ಓಕುಳಿ ನಡೆಯುತ್ತಿದ್ದರೆ, ಮಾ. 7ರಂದು ಹುಬ್ಬಳ್ಳಿಯಲ್ಲಿ ರಂಗಪಂಚಮಿಯ ರಂಗಿನಾಟ ನಡೆಯಲಿದೆ.
ಹಳೆಯ ಮತ್ತು ಹೊಸ ಮೇದಾರ ಓಣಿಯಲ್ಲಿ ಸೋಮವಾರ ಮಧ್ಯರಾತ್ರಿ (1 ಗಂಟೆಗೆ) ರತಿ-ಕಾಮಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹೋಳಿ ಹಬ್ಬದ ನಿಮಿತ್ತ ಐದು ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ, ಪೂಜೆ ನಡೆಯಲಿವೆ. ಹು-ಧಾ ಭಾಗದ ಜನರಷ್ಟೇ ಅಲ್ಲದೆ, ಬೆಂಗಳೂರು, ದಾವಣಗೆರೆ, ಬೆಳಗಾವಿ, ಮುಂಬೈ, ಕೋಲ್ಹಾಪುರ ಸೇರಿದಂತೆ ವಿವಿಧ ಭಾಗದಿಂದ ಜನರು ಕಾಮಣ್ಣನ ದರ್ಶನಕ್ಕೆ ಆಗಮಿಸಿ, ವಿಶೇಷ ಪೂಜೆಯ ಜತೆಗೆ ಹರಕೆ ಸಲ್ಲಿಸುತ್ತಾರೆ.21 ಅಡಿ ಬಿದಿರಿನ ಕಾಮಣ್ಣ:
ಇಲ್ಲಿನ ಹಳೇ ಮತ್ತು ಹೊಸ ಮೇದಾರ ಓಣಿಯಲ್ಲಿ ಈ ವರ್ಷವೂ ಬೃಹತ್ ಪೆಂಡಾಲ್‌ನಲ್ಲಿ ಅಂದಾಜು ತಲಾ ₹ 1.50 ಲಕ್ಷ ವೆಚ್ಚದಲ್ಲಿ 21 ಅಡಿ ಎತ್ತರ ಹಾಗೂ 16 ಅಡಿ ಅಗಲದ ಬೃಹತ್ ಬಿದಿರಿನ ಕಾಮಣ್ಣ ಮೂರ್ತಿ ತಯಾರಿಸಲಾಗಿದೆ. ರಂಗ ಪಂಚಮಿ ದಿನದಂದು ನಡೆಯಲಿರುವ ಈ ಎರಡೂ ಮೂರ್ತಿಗಳ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದು, ಮೆರವಣಿಗೆಯ ನಂತರ ದುರ್ಗದಬೈಲ್‌ನಲ್ಲಿ ಎರಡೂ ಮೂರ್ತಿಗಳ ಸಮಾಗಮ ನಡೆಯಲಿದೆ. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಓಣಿಯ ಹಿರಿಯರು ಹಾಗೂ ಯುವಕರು ಮಾಡಿಕೊಂಡಿದ್ದಾರೆ.200ಕ್ಕೂ ಅಧಿಕ ವರ್ಷದ ಇತಿಹಾಸ:
7ರಂದು ರಂಗಪಂಚಮಿ:
ಈ ನಡುವೆ ಮಂಗಳವಾರ ಪ್ರತಿಷ್ಠಾಪನೆ ಆಗಿರುವ ಎಲ್ಲ ಕಾಮಣ್ಣ ರತಿಯರ ಮೂರ್ತಿಗಳು ಮಾ. 7ರಂದು ದಹನವಾಗಲಿದೆ. ಅಂದು ರಂಗಪಂಚಮಿಯ ಓಕುಳಿಯಾಟದಲ್ಲಿ ಇಡೀ ಊರಿಗೆ ಊರೇ ಪಾಲ್ಗೊಳ್ಳಲಿದೆ.ಪೊಲೀಸ್ ಬಂದೋಬಸ್ತ್:
ಹೋಳಿ ಹುಣ್ಣಿಮೆ ಹಾಗೂ ರಂಗಪಂಚಮಿ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ವಿವಿಧೆಡೆ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಿದೆ. ಹಳೇ ಹುಬ್ಬಳ್ಳಿ ಹಾಗೂ ಧಾರ್ಮಿಕ ಕಟ್ಟಡಗಳ ಸುತ್ತಮುತ್ತಲೂ, ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸುವ ಕಡೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮದ್ಯ ಮಾರಾಟ ನಿಷೇಧ
ಹೋಳಿ ಹಬ್ಬದ ಪ್ರಯುಕ್ತ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾ. 4ರಂದು ಧಾರವಾಡದಲ್ಲಿ ಹಾಗೂ ಮಾ. 7ರಂದು ಹುಬ್ಬಳ್ಳಿಯಲ್ಲಿ ಮದ್ಯ ಸೇವನೆ, ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಧಾರವಾಡದಲ್ಲಿ ಮಾ. 4ರಂದು ಓಕುಳಿ ಇದೆ. ಈ ಹಿನ್ನೆಲೆಯಲ್ಲಿ ಮಾ.3ರ ಮಧ್ಯರಾತ್ರಿ 12ರಿಂದ ಮಾ.5ರ ಬೆಳಗಿನ 6ರ ವರೆಗೆ ಹಾಗೂ ಹುಬ್ಬಳ್ಳಿಯಲ್ಲಿ ಮಾ. 6ರ ಮಧ್ಯರಾತ್ರಿ 12ರಿಂದ ಮಾ. 8ರ ಬೆಳಗಿನ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಿ ಶುಷ್ಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕಮಿಷನರೇಟ್ ಪ್ರಕಟಣೆ ತಿಳಿಸಿದೆ.