ಮಳೆಗೆ 354 ವಿದ್ಯುತ್ ಕಂಬ, 9 ಪರಿವರ್ತಕ ಹಾನಿ

KannadaprabhaNewsNetwork |  
Published : Jun 14, 2025, 01:54 AM IST
ಪೊಟೋ೧೩ಎಸ್.ಆರ್.ಎಸ್೧ (ನಗರದ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೋಟಗಾರಿಕಾ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಮಾತನಾಡಿದರು.) | Kannada Prabha

ಸಾರಾಂಶ

ಮಳೆಯಿಂದ ತಾಲೂಕಿನಲ್ಲಿ ೩೫೪ ವಿದ್ಯುತ್ ಕಂಬ ಹಾಗೂ 9 ಪರಿವರ್ತಕಗಳು ಹಾಳಾಗಿವೆ.

ಶಿರಸಿ: ಮಳೆಯಿಂದ ತಾಲೂಕಿನಲ್ಲಿ ೩೫೪ ವಿದ್ಯುತ್ ಕಂಬ ಹಾಗೂ 9 ಪರಿವರ್ತಕಗಳು ಹಾಳಾಗಿವೆ. ಬದಲಿ ಕಂಬ ಮತ್ತು ಟ್ರಾನ್ಸ್‌ಫಾರಂಗಳನ್ನು ಅಳವಡಿಸಿ, ದುರಸ್ತಿ ಮಾಡಲಾಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ನಾಗರಾಜ ಪಾಟೀಲ ತಿಳಿಸಿದರು.ಅವರು ಗುರುವಾರ ನಗರದ ತಾಪಂ ಕಚೇರಿಯ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹೆಸ್ಕಾಂ ವರದಿ ಸಲ್ಲಿಸಿದರು.

ಪಿಎಂ ಸೂರ್ಯ ಘರ್ ಯೋಜನೆಗೆ ಶೇ.೮೦ರಷ್ಟು ಸಹಾಯಧನ ಲಭ್ಯವಿದ್ದು, ೧ ಕಿಲೋ ವ್ಯಾಟ್‌ಗೆ ₹೩೦ ಸಾವಿರ, ೨ ಕಿಲೋ ವ್ಯಾಟ್‌ಗೆ ₹೬೦ ಸಾವಿರ, ೩ ಕಿಲೋ ವ್ಯಾಟ್‌ಗೆ ₹೭೮ ಸಾವಿರ ಸಹಾಯಧನ ನೀಡಲಾಗುತ್ತದೆ. ಗೃಹ ಜ್ಯೋತಿ ಯೋಜನೆಯಲ್ಲಿ ೫೩ ಸಾವಿರಕ್ಕಿಂತ ಸ್ಥಾವರ ನೋಂದಣಿಯಾಗಿದೆ. ಇನ್ನು ೩ ಸಾವಿರ ಸ್ಥಾವರಗಳು ನೋಂದಣಿಯಾಗಬೇಕಿದ್ದು, ತಾಂತ್ರಿಕ ಕಾರಣ ಪತ್ತೆಮಾಡಿ ನೋಂದಣಿ ಕಾರ್ಯ ಮಾಡುತ್ತಿದ್ದೇವೆ ಎಂದರು.

ತೋಟಗಾರಿಕಾ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಸುಮಾರು ೫,೩೦೦ ಹೆಕ್ಟೇರ್ ಪ್ರದೇಶ ಎಲೆಚುಕ್ಕೆ ಆವರಿಸಿಕೊಂಡಿದೆ. ಮೈಲುತುತ್ತ, ಎಲೆಚುಕ್ಕೆ ನಿಯಂತ್ರಣ ಜೌಷಧಿ ಖರೀದಿಸಿದ ಬಿಲ್‌ನ್ನು ತೋಟಗಾರಿಕಾ ಇಲಾಖೆಗೆ ನೀಡಿದರೆ ₹೬೦೦ ಸಹಾಯಧನ ನೀಡುತ್ತೇವೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್, ಜಿಪಂ ಮತ್ತು ತಾಪಂನಿಂದ ₹೭೮ ಲಕ್ಷ ಅನುದಾನ ಬಂದಿದೆ. ಹನಿ ನೀರಾವರಿಗೆ ಶೇ.೯೦ರಷ್ಟು ಸಹಾಯಧನ ಲಭ್ಯವಿದೆ. ತೋಟಗಾರಿಕಾ ಬೆಳೆ ವಿಸ್ತರಣೆ ಯೋಜನೆಯಲ್ಲಿ ಅನಾನಸ್, ಬಾಳೆ, ಕೃಷಿ ಹೊಂಡಗಳಿಗೆ ಸಹಾಯಧನ ನೀಡಲಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ೮೭ ಶಾಲೆಗಳು ತುರ್ತು ದುರಸ್ತಿಯಿದೆ. ಇದರ ಮಾಹಿತಿಯನ್ನು ತಹಸೀಲ್ದಾರ ಮತ್ತು ಜಿಪಂಗೆ ನೀಡಲಾಗಿದೆ. ನಲಿ-ಕಲಿ ಮಕ್ಕಳು ನೆಲದಲ್ಲಿ ಕುಳಿತುಕೊಳ್ಳಬಾರದೆಂದು ಜಿಪಂ ಮತ್ತು ತಾಪಂನ ೨೦೨೪-೨೫ನೇ ಸಾಲಿನ ವೇತನೇತರ ಅನುದಾನದಲ್ಲಿ ಡೆಸ್ಕ್, ಬೆಂಚ್ ಒದಗಿಲಾಗಿದೆ. ಉಳಿದ ಶಾಲೆಗಳಿಗೆ ಈ ವರ್ಷ ಒದಗಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಮಾತನಾಡಿ, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಚಾವಣಿ ಸೋರುತ್ತಿದೆ. ದುರಸ್ತಿಗೆ ₹೨೫ರಿಂದ ₹೩೦ ಸಾವಿರ ಅನುದಾನ ಅವಶ್ಯವಿದೆ ಎಂದು ನಿರ್ಮಿತ ಕೇಂದ್ರದವರು ತಿಳಿಸಿದ್ದಾರೆ. ಅದಕ್ಕೆ ಅನುದಾನ ನೀಡಬೇಕೆಂದು ವಿನಂತಿಸಿದರು.

ಆರೋಗ್ಯ ಇಲಾಖೆಯ ಕುರಿತು ಬಿಸ್ಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯ ಮಾತನಾಡಿ, ಡೆಂಘೀ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ೮೦ ಜನರಿಗೆ ಡೆಂಘೀ ಪರೀಕ್ಷೆಗೆ ಒಳಪಡಿಸಲಾಗಿತ್ತು. ೧ ಪಾಸಿಟಿವ್ ಬಂದಿತ್ತು. ಅವರು ಮಂಗಳೂರಿನಲ್ಲಿರುತ್ತಾರೆ. ೧೬೧ ಜನರಿಗೆ ಕೆಎಫ್‌ಡಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಯಾರಿಗೂ ದೃಢವಾಗಿಲ್ಲ. ಸುಗಾವಿ ಮತ್ತು ಕಕ್ಕಳಿಯಲ್ಲಿ ವೈದ್ಯರ ಕೊರತೆಯಿದೆ. ನಾಯಿ ಕಡಿತ ಲಸಿಕೆ ಕೊರತೆಯಿದೆ. ಬೇಡಿಕೆ ಸಲ್ಲಿಸಲಾಗಿದ್ದು, ಸದ್ಯದಲ್ಲಿ ಸರಬರಾಜು ಆಗಲಿದೆ ಎಂದರು.

ತಾಲೂಕಿನಲ್ಲಿ ೨೦ ಅಂಗನವಾಡಿ ದುರಸ್ತಿಗೆ ಕ್ರಿಯಾ ಯೋಜನೆ ಕಳುಹಿಸುತ್ತೇವೆ. ತಾಪಂ, ಜಿಪಂ ಪ್ರತ್ಯೇಕ ಕಳುಹಿಸಿದ್ದೇವೆ ಎಂದು ಮಹಿಳಾ ಮಕ್ಕಳು ಅಭಿವೃದ್ಧಿ ಇಲಾಖೆಯ ಅಧಿಕಾರಿ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ಬಿತ್ತನೆ ಬೀಜ ದಾಸ್ತಾನಿದೆ. ೫೫೫ ಕ್ವಿಂಟಾಲ್ ದಾಸ್ತಾನಿದೆ. ೧೪ ಕ್ವಿಂಟಾಲ್ ಮಾತ್ರ ಖರ್ಚಾಗಿದೆ. ಫಸಲ್ ಬಿಮಾ ಯೋಜನೆಯಲ್ಲಿ ಕುಳವೆ ಗ್ರಾಪಂ ವ್ಯಾಪ್ತಿಗೆ ಎಕರೆಗೆ ₹೪೧೩೩, ಸದಾಶಿವಳ್ಳಿ ಗ್ರಾಪಂ ವ್ಯಾಪ್ತಿಗೆ ₹೨೬೮೫, ನೆಗ್ಗು ಗ್ರಾಪಂ ವ್ಯಾಪ್ತಿಗೆ ₹೨೦೧೪, ಜಾನ್ಮನೆ ಗ್ರಾಪಂ ವ್ಯಾಪ್ತಿಗೆ ₹೧೮೭೯, ಮಂಜುಗುಣಿ ಗ್ರಾಪಂ ವ್ಯಾಪ್ತಿಗೆ ೧೮೬೯, ಬಂಡಲ ಗ್ರಾಪಂ ವ್ಯಾಪ್ತಿಗೆ ₹೬೮೩, ಸೋಂದಾ ಗ್ರಾಪಂ ವ್ಯಾಪ್ತಿಗೆ ₹೪೩೦ ರೈತರ ಖಾತೆಗೆ ಜಮಾ ಆಗಿದೆ ಎಂದರು. ತಾಪಂ ಸಹಾಯಕ ಲೆಕ್ಕಾಧಿಕಾರಿ ಎನ್.ಬಿ.ನಾಯ್ಕ, ತಾಲೂಕಾ ಯೋಜನಾಧಿಕಾರಿ ಅಶೋಕ ನಾಯ್ಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''