ಕನ್ನಡಪ್ರಭ ವಾರ್ತೆ ಸಿಂಧನೂರು
ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಆ.10 ರಿಂದ 12ರವರೆಗೆ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕ ದ್ವಾರಕನಾಥಾಚಾರ್ ಹಾಗೂ ವಿಚಾರಣಾಕರ್ತ ರಾಘವೇಂದ್ರರಾವ್ ಕುಲಕರ್ಣಿ ತಿಳಿಸಿದ್ದಾರೆ.ಬುಧವಾರ ಹೇಳಿಕೆ ನೀಡಿರುವ ಅವರು, ಆ.9 ರಂದು ಶನಿವಾರ ಸತ್ಯನಾರಾಯಣ ಪೂಜೆ, ಗೋಪೂಜೆ, ಧ್ವಜಾರೋಹಣ, ಲಕ್ಷ್ಮಿಪೂಜೆ, ಧಾನ್ಯಪೂಜೆ ನಡೆಯಲಿವೆ. ಆ.10 ರಿಂದ 12 ರವರೆಗೆ ಮೂರು ದಿನಗಳ ಕಾಲ ಪ್ರತಿದಿನ ಗುರುರಾಯರ ಉತ್ಸವ, ಅಷ್ಟೋತ್ತರ, ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸ್ವಸ್ತಿವಾಚನ ನಡೆಯಲಿವೆ. 11 ರಂದು ಮಧ್ಯಾಹ್ನ 1 ಗಂಟೆಗೆ ಭಕ್ತಾಧಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. 12ರಂದು ಗುರುರಾಯರ ಮಹಾ ರಥೋತ್ಸವ ಜರುಗಲಿದೆ. ಕಾರಣ ಭಕ್ತಾದಿಗಳು ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.
ಶ್ರೀರಾಮ ಮಂದಿರ: ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲೂ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಆಗಸ್ಟ್ 10 ರಿಂದ 12 ರವರೆಗೆ ಜರುಗಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸುಬ್ಬಶಾಸ್ತ್ರಿ ತಿಳಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ಸುಪ್ರಭಾತ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಸಂಜೆ ವಿದ್ವಾಂಸರಿಂದ ಉಪನ್ಯಾಸ, ಭಜನೆ, ಅಷ್ಟಾವಧಾನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆ.12ರಂದು ರಥೋತ್ಸವ ನಡೆಯಲಿದ್ದು, ತೀರ್ಥ ಪ್ರಸಾದ ವ್ಯವಸ್ಥೆಯನ್ನು ಸಮಾಜದ ಮುಖಂಡ ವೆಂಕಣ್ಣ ಆಚಾರ್ ಜೋಶಿ ಹಾಗೂ ಅವರ ಮಕ್ಕಳು ವಹಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.ತುರುವಿಹಾಳದಲ್ಲೂ ಮಹೋತ್ಸವ
ತುರುವಿಹಾಳ: ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ಶ್ರೀ ಗುರುರಾಯರ ಆರಾಧನೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಠದ ಕಾರ್ಯದರ್ಶಿ ರಾಘವೇಂದ್ರರಾವ್ ಕುಲಕರ್ಣಿ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ವಿದ್ವಾಂಸರಿಂದ ಉಪನ್ಯಾಸ, ಸಂಗೀತಗಾರರಿಂದ ಸಂಗೀತ, ರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ. ತಪ್ಪದೇ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳ ಬೇಕೆಂದು ವಿನಂತಿಸಿದ್ದಾರೆ.