ಕನ್ನಡಪ್ರಭ ವಾರ್ತೆ ರಾಯಚೂರು
ಆರಾಧನೆ ಪ್ರಯುಕ್ತ ಶ್ರೀಮಠದಿಂದ ಆಯೋಜಿಸಿರುವ ಸಪ್ತರಾತ್ರೋತ್ಸವಕ್ಕೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಸಪ್ತರಾತ್ರೋತ್ಸವದ ಮೊದಲ ದಿನದ ಬೆಳಗ್ಗೆ ಪ್ರವಚನ, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಟಿಟಿಡಿಯಿಂದ ಬಂದಿದ್ದ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಲಾಯಿತು. ಸಂಜೆ ಗ್ರಾಮದೇವಿ ಮಂಚಾಲಮ್ಮರನ್ನು ಶ್ರೀಗಳು ವಿಶೇಷವಾಗಿ ಪೂಜಿಸಿ, ಶ್ರೀಗುರುರಾಯರ ಮೂಲಬೃಂದಾವನಕ್ಕೆ ನಮಿಸಿ ಆರಾಧನಾ ಮಹೋತ್ಸವದ ಚಾಲನೆಗೆ ರಾಯರಲ್ಲಿ ಅಪ್ಪಣೆ ಕೋರಿದ ಶ್ರೀಗಳು, ಅಲ್ಲಿಂದ ನೇರವಾಗಿ ಶ್ರೀಮಠದ ಮುಂಭಾಗದ ಆವರಣದಲ್ಲಿ ಮಠದ ಸಂಪ್ರದಾಯಗಳ ಅನುಸಾರವಾಗಿ ಧ್ವಜಾರೋಹಣವನ್ನು ನೆರವೇರಿಸಿ ಬಳಿಕ ಗೋ ಪೂಜೆ, ಅಶ್ವ ಪೂಜೆ, ಧ್ವಜ ಪೂಜೆ, ಲಕ್ಷ್ಮೀ ಪೂಜೆ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧಾನ್ಯೋತ್ಸವಗಳನ್ನು ನೆರವೇರಿಸಿದರು.ಇದೇ ವೇಳೆ ಯೋಗೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರವನ್ನು ರಾಯರ ಮೂರ್ತಿಗೆ ದೀಪ ಬೆಳಗಿ, ಪುಷ್ಪಾರ್ಚನೆಯನ್ನು ನೆರವೇರಿಸುವುದರ ಮುಖಾಂತರ ಸ್ವಾಮಿಗಳು ಉದ್ಘಾಟಿಸಿದರು. ನಂತರ ನೆರೆದ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಸ್ವಾಮೀಜಿಗಳು, ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಪ್ತರಾತ್ರೋತ್ಸಕ್ಕೆ ಚಾಲನೆ ನೀಡಲಾಗಿದ್ದು, ಇಂದಿನಿಂದ ಏಳು ದಿನಗಳ ಕಾಲ ಹಲವಾರು ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.