೩೬ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ, ರಾಜ್ಯ ರೈತ ಸಂಘದಿಂದ ಮೆರವಣಿಗೆ

KannadaprabhaNewsNetwork |  
Published : Dec 06, 2025, 02:30 AM IST
5ಕೆಪೆಎಲ್23 ಬಲ್ಡೋಟಾ ವಿರುದ್ಧದ ಹೋರಾಟ 36 ನೇ ದಿನಕ್ಕೆ ಕಾಲಿಟ್ಟಿದೆ. | Kannada Prabha

ಸಾರಾಂಶ

ಧೂಳು, ಹೊಗೆ ಕುಡಿಸಿ ಚೆಲ್ಲಾಟವಾಡುತ್ತೇವೆ ಎಂದರೆ ಬಿಡಲು ಸಾಧ್ಯವಿಲ್ಲ

ಕೊಪ್ಪಳ: ನಗರದಲ್ಲಿ ಬಿಎಸ್‌ಪಿಎಲ್‌, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಇತರ ಮಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿ ೩೬ನೇ ದಿನದಲ್ಲಿ ಮುಂದುವರಿದಿದ್ದು, ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲಿಸಿತು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಅವರು ಕೇಂದ್ರೀಯ ಬಸ್ ನಿಲ್ದಾಣ ಮುಂದಿರುವ ಸಂತಶ್ರೇಷ್ಠ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮುದ್ದಾಬಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ರೈತರು, ರೈತ ಮಹಿಳೆಯರೊಂದಿಗೆ ಕಾರ್ಖಾನೆ ವಿರೋಧಿ ಧಿಕ್ಕಾರ ಕೂಗುತ್ತಾ ಅಶೋಕ ವೃತ್ತದಲ್ಲಿ ತಹಸೀಲ್ದಾರ್ ವಿಠ್ಠಲ್ ಚೌಗಲಾ ಅವರ ಮೂಲಕ ಮುಖ್ಯಮಂತ್ರಿಗೆ ಆಗ್ರಹ ಪತ್ರ ನೀಡಿದರು. ನಗರಸಭೆ ಆಯುಕ್ತರಿಗೂ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಆನಂತರ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ ಮಾತನಾಡಿ, ಇಲ್ಲಿನ ರೈತರ ಭೂಮಿ ಕಸಿದುಕೊಂಡ ಕಾರ್ಖಾನೆಗಳಿಗೆ ಬೆಂಬಲವಾಗಿ, ಬಿಎಸ್‌ಪಿಎಲ್‌ ವಿಸ್ತರಣೆಗೆ ಟೊಂಕ ಕಟ್ಟಿ ನಿಂತವರು ಯಾರು ಎಂದು ಜನರಿಗೆ ಗೊತ್ತಿದೆ. ಕೃಷಿ, ಆರೋಗ್ಯ, ಕೊನೆಯದಾಗಿ ಜೀವನ ಕಳೆದುಕೊಳ್ಳುತ್ತಿರುವ ಕಾರ್ಖಾನೆ ಸುತ್ತುವರಿದ ಹಳ್ಳಿಗಳ ಜನರು ಸಿಡಿದೇಳಬೇಕು. ಇಲ್ಲಿನ ಗವಿಮಠದ ಸ್ವಾಮೀಜಿ ಕಣ್ಣೀರು ಹಾಕಿದ್ದು, ರಾಜ್ಯದ ಜನರು ಗಮನಿಸಿದ್ದಾರೆ. ಧೂಳು, ಹೊಗೆ ಕುಡಿಸಿ ಚೆಲ್ಲಾಟವಾಡುತ್ತೇವೆ ಎಂದರೆ ಬಿಡಲು ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನದ ಮುಂದೆ ಈ ಬೇಡಿಕೆಯನ್ನು ಇಟ್ಟು ಡಿ. ೧೧ ಅಥವಾ ೧೨ರಂದು ಹೋರಾಟ ಮಾಡುತ್ತೇವೆ. ರೈತರು ದೊಡ್ಡ ಸಂಖ್ಯೆಯಲ್ಲಿ ಹೋರಾಟಕ್ಕೆ ಬರಬೇಕು ಎಂದ ಅವರು, ಮುಂದೆ ಕೊಪ್ಪಳದಲ್ಲಿ ಬೃಹತ್ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಯಿಂದ ರೈತರು ಬರುತ್ತಾರೆ ಎಂದರು.

ಕರ್ನಾಟಕ ರಾಷ್ಟ್ರ ಸಮಿತಿ ಸೈನಿಕ ಎಲ್. ಜೀವನ್ ಮಾತನಾಡಿ, ಇಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ಸೃಷ್ಟಿಯಾಗಿದೆ. ೨೦ಕ್ಕೂ ಹೆಚ್ಚಿನ ಹಳ್ಳಿಗಳ ಮತ್ತು ಜಿಲ್ಲಾ ಕೇಂದ್ರದ ರಕ್ಷಣೆ ಮಾಡಲು ಸಾಧ್ಯವಾಗದ ರಾಜಕಾರಣಿಗಳು ಇದ್ದು ಫಲವೇನು? ಈ ಜನರ ರಕ್ಷಣೆ ಮಾಡಲು ನಮ್ಮ ಸೈನಿಕರು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. ನಾಡಿನ ಜನರ ಹಕ್ಕುಗಳನ್ನು ಕಾಪಾಡಲು ಸೈನಿಕರು ಸದಾ ಸಿದ್ಧ ಎಂದರು.

ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ (ಕೆ.ಬಿ. ಗೋನಾಳ), ಮಂಜುನಾಥ ಜಿ. ಗೊಂಡಬಾಳ, ಡಿ.ಎಚ್. ಪೂಜಾರ್ ಮಾತನಾಡಿದರು. ಧರಣಿಯಲ್ಲಿ ಹಸಿರು ಸೇನೆ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಚ್.ಎನ್. ಗೋವಿಂದರೆಡ್ಡಿ, ಗದಗ ಹಸಿರು ಸೇನೆ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ, ರಾಜ್ಯ ಹಸಿರು ಸೇನೆ ಉಪಾಧ್ಯಕ್ಷ ಅಂದಪ್ಪ ಹುರಳಿ, ಕೊಪ್ಪಳ ಹಸಿರು ಸೇನೆ ಜಿಲ್ಲಾಧ್ಯಕ್ಷ ವೆಂಕರೆಡ್ಡಿ ಚುಕನಕಲ್, ರೈತ ಮಹಿಳೆ ಸಾವಿತ್ರಿ ತೆಗ್ಗಿನಮನಿ, ರೇಣುಕಾ ಬಿನ್ನಾಳ, ಶರಣಮ್ಮ ಮೇಟಿ, ಹನುಮಂತಪ್ಪ ಮುರಡಿ, ಶಂಕ್ರಪ್ಪ ವಕ್ಕಳದ, ವಜೀರಸಾಬ ತಳಕಲ್, ಕೆ.ಆರ್.ಎಸ್. ಸೈನಿಕರಾದ ನಾಗರಾಜ ಕವಲೂರು, ಬಸವರಾಜ ಯಂಬಲದ, ಶ್ಯಾಮೀದ ಅಲಿ, ವೆಂಕಟೇಶ ಉಪ್ಪಲದಿನ್ನಿ, ಶರಣಪ್ಪ ಗುರಿಕಾರ, ವೀರೇಶ ಎಂ., ಬಸವರಾಜ ಬಿ., ಮೈನುದ್ದೀನ್ ಗಂಗಾವತಿ, ಎಫ್.ಎಸ್. ಜಾಲಿಹಾಳ, ಡಿ.ಎಂ. ಬಡಿಗೇರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ವಿಷಯದಲ್ಲೂ ವೈಜ್ಞಾನಿಕ ಅಧ್ಯಯನ ಮುಖ್ಯ: ಎಸ್.ವಿ. ಸಂಕನೂರ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ, ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟನೆ