ಸಂಡೂರು: ದೇಶದಲ್ಲಿ ಮೀಸಲಾತಿ ವ್ಯವಸ್ಥೆ, ಕಲ್ಯಾಣ ಕರ್ನಾಟಕ ಭಾಗದ ಜನತೆಯ ಅನುಕೂಲಕ್ಕಾಗಿ ೩೭೧ಜೆ ತಿದ್ದುಪಡಿ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್. ಇದರಿಂದ ಈ ಭಾಗದ ಜನತೆಗೆ ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಪ್ರಾತಿನಿಧ್ಯ ದೊರೆತಿದೆ ಎಂದು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಹೇಳಿದರು.
ತಾಲೂಕಿನ ಚೋರುನೂರು ಹೋಬಳಿಯ ನಿಡಗುರ್ತಿ, ೭೨ ಮಲ್ಲಾಪುರ, ಕೊಂಡಾಪುರ, ಗಿರೇನಹಳ್ಳಿ, ಹುಲಿಕುಂಟೆ, ಉತ್ತರಮಲೆ, ಕಾಟಿನಕಂಬ, ಗೊಲ್ಲರಹಟ್ಟಿ, ಕೋಡಿಹಳ್ಳಿ, ಕಪಟ್ರಾಳ್, ಹುಚ್ಚೇನಹಳ್ಳಿ, ಎಚ್.ಕೆ. ಹಳ್ಳಿ, ಶ್ರೀರಾಮಶೆಟ್ಡಿಹಳ್ಳಿ, ಸಿ.ಕೆ. ಹಳ್ಳಿ ಹಾಗೂ ಜೋಗಿಕಲ್ಲು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಅವರು ಮತಯಾಚನೆ ಮಾಡಿದರು.೨೦ ವರ್ಷಗಳಲ್ಲಿ ಸಂತೋಷ್ ಲಾಡ್, ಈ.ತುಕಾರಾಂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡಜನತೆಗೆ ಬಹಳ ಅನುಕೂಲವಾಗಿದೆ. ಈ ಹಿಂದೆ ಬಂಡ್ರಿ ಕೆರೆ ಒಡೆದಾಗ, ಕೆಲವರು ಬಂದು ಸತ್ಯಾಗ್ರಹ ಮಾಡಿದರು. ಆದರೆ, ಈ.ತುಕಾರಾಂ ಕೆರೆ ದುರಸ್ತಿಗೆ ಕ್ರಮ ಕೈಗೊಂಡರು. ಈ ಭಾಗದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದೆ. ಹಲವು ಗ್ರಾಮಗಳಲ್ಲಿ ಡಿಜಿಟಲ್ ಲೈಬ್ರರಿಗಳನ್ನು ತೆರೆಯಲಾಗಿದೆ. ಕ್ಷೇತ್ರದ ಉಪ ಚುನಾವಣೆಯಲ್ಲಿ ಜನತೆ ತಮ್ಮನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಜನ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಅಕ್ಷಯ್ ಲಾಡ್ ಮಾತನಾಡಿ, ಬಿಜೆಪಿಗರು ಈ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುತ್ತಿದ್ದಾರೆ. ಇಲ್ಲಿನ ಉತ್ತಮ ರಸ್ತೆಗಳೇ ಕ್ಷೇತ್ರದಲ್ಲಿನ ಅಭಿವೃದ್ಧಿಯನ್ನು ತೋರಿಸುತ್ತಿವೆ. ೨೦೦೪ರಿಂದ ಇಲ್ಲಿಯವರೆಗೆ ಕ್ಷೇತ್ರದ ಜನತೆ ಸಂತೋಷ್ ಲಾಡ್ ಹಾಗೂ ಈ. ತುಕಾರಾಂ ಅವರನ್ನು ಆಶೀರ್ವದಿಸಿದ್ದೀರಿ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದರು.ತಾಪಂ ಮಾಜಿ ಸದಸ್ಯ ಪಿ. ರವಿಕುಮಾರ್ ಮಾತನಾಡಿದರು. ಮುಖಂಡರಾದ ಜಯರಾಂ, ಎನ್.ಎಂ. ವೀರಯ್ಯಸ್ವಾಮಿ, ಧನಂಜಯ, ಹೊನ್ನೂರಸ್ವಾಮಿ, ಉತ್ತರಮಲೆ ಕಾರ್ತಿಕ್, ಶೈಲಜಾ ನಿಕ್ಕಂ, ಅಗ್ರಹಾರ ಲಕ್ಷ್ಮಿದೇವಿ ಮುಂತಾದವರು ಉಪಸ್ಥಿತರಿದ್ದರು.