ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ತಕ್ಷಣಕ್ಕೆ 8 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕೆ ಈಗ ₹3450 ಕೋಟಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.ಕೊಟ್ಟ ಮಾತಿನಂತೆ ಈ ಬಜೆಟ್‌ ನಲ್ಲಿ ₹18 ಸಾವಿರ ಕೋಟಿ ಇಡದೇ ಉಪ ಚುನಾವಣೆ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪರಿಹಾರ ವಿತರಿಸುವ ಕಾರ್ಯ ನಡೆಯುತ್ತಿದೆಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಜೆಟ್‌ ನಲ್ಲಿ ಹಣ ಇಡದಿದ್ದರೂ ಪರಿಹಾರಕ್ಕೆ ಅಗತ್ಯವಿರುವ ಹಣ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾವುದೇ ಸರ್ಕಾರ ಇದ್ದರೂ ಭರವಸೆ ನೀಡಿದ್ದೆಲ್ಲವನ್ನು ಒಮ್ಮೆಲೆ ಮಾಡಲು ಆಗಲ್ಲ. ಆದರೆ, ಹಿಂದಿನ ಬಿಜೆಪಿ ಸರ್ಕಾರದಂತೆ ನಮ್ಮ ಸರ್ಕಾರ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿಲ್ಲ. ಈ ಹಿಂದೆ ನಮ್ಮದೇ ಸರ್ಕಾರ ಇದ್ದಾಗ ನಾನು ಉಸ್ತುವಾರಿ ಸಚಿವ ಇದ್ದು, ಆಲಮಟ್ಟಿ ಜಲಾಶಯದ ಗೇಟ್ ಹಾಕಿ ನೀರು ನಿಲ್ಲಿಸಿದ್ದೇವು. ಈಗ ಜಮೀನಿಗೆ ನ್ಯಾಯಯುತ ಬೆಲೆ ನಿರ್ಧಾರ ಮಾಡಿ ಪರಿಹಾರ ವಿತರಣೆಗೂ ಚಾಲನೆ ನೀಡುತ್ತಿದ್ದೇವೆ. ಇದು ನಮ್ಮ ಬದ್ಧತೆ. ಅದೇ ಬಿಜೆಪಿ ಸರ್ಕಾರ ಏನು ಮಾಡಿತ್ತು? ಇದೇ ಜಿಲ್ಲೆಯವರು ಜಲಸಂಪನ್ಮೂಲ ಸಚಿವರಾಗಿದ್ದರಲ್ಲ ಅವರು ಏನು ಮಾಡಿದ್ದರು? ಬಿಜೆಪಿ ಸರ್ಕಾರ ಯುಕೆಪಿಗೆ ನಾಮ ಹಾಕಿತ್ತು. ಆದರೆ, ನಮ್ಮ ಸರ್ಕಾರ ಬದ್ಧತೆಯಿಂದ ಯುಕೆಪಿ ವಿಚಾರದಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಉಪಚುನಾವಣೆ: ಹೊರಗಿನವರಿಗೆ ಟಿಕೆಟ್‌ ಇಲ್ಲ:

ಶಾಸಕ ಎಚ್.ವೈ.ಮೇಟಿ ಅವರ ನಿಧನನಿಂದ ತೆರವಾಗಿರುವ ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಾಗಲಕೋಟೆ ಕ್ಷೇತ್ರದ ವ್ಯಕ್ತಿಗೆ ಕೊಡಲಾಗುತ್ತಿದೆ ವಿನಃ ಯಾವುದೇ ಕಾರಣಕ್ಕೂ ಹೊರಗಿನ (ಮೈಸೂರ ಭಾಗದ) ವ್ಯಕ್ತಿಗೆ ಟಿಕೆಟ್ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟವಾಗಿ ತಿಳಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮೈಸೂರ ಭಾಗದವರನ್ನು ಕರೆತರಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಈ ಸ್ಪಷ್ಟೀಕರಣ ನೀಡಿದರು.

ಬಾಗಲಕೋಟೆ ಉಪ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ವ್ಯಕ್ತಿಗೆ ಅದರಲ್ಲೂ ಬಾಗಲಕೋಟೆ ಕ್ಷೇತ್ರದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಮೆಡಿಕಲ್ ಕಾಲೇಜಿಗೆ ಇಂದು ಶಂಕು ಸ್ಥಾಪನೆ:

ದಿ. ಎಚ್.ವೈ.ಮೇಟಿ ಅವರ ಒಂದು ದಶಕದ ಪ್ರಯತ್ನದ ಫಲವಾಗಿ ಮಾ.14ರಂದು ಬಾಗಲಕೋಟೆ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಂದಾಜು ₹450 ಕೋಟಿ ವೆಚ್ಚದ ಯೋಜನೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದರ ಜೊತೆಗೆ ಯುಕೆಪಿಗೆ ಮುಳುಗಡೆ ಆಗುವ ಜಮೀನಿಗೆ ಪರಿಹಾರ ವಿತರಣೆ ಚೆಕ್ ವಿತರಣೆಗೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಇಲಾಖೆಯಿಂದ ಸುತಗುಂಡಾರದಲ್ಲಿ ನಿರ್ಮಾಣವಾಗಿರುವ ₹12.40 ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ, ₹6.50 ಲಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಟ್ರಿಕ್ ನಂತರದ ವಸತಿ ನಿಲಯ ಉದ್ಘಾಟನೆ, ₹6.56 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿವಿಧ ಇಲಾಖೆ ಸಚಿವರು ಭಾಗವಹಿಸಲಿದ್ದಾರೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.