ಬೆಂಗಳೂರು : ತಮ್ಮ ಸ್ಥಾನಕ್ಕೆ ಈ ತಿಂಗಳ 14ರಂದು ಸದನದಲ್ಲೇ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಮರುದಿನವಾದ ಶುಕ್ರವಾರವೇ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುವ ಮೂಲಕ ಕಳೆದೊಂದು ವಾರದಿಂದ ನಡೆಯುತ್ತಿದ್ದ ರಾಜೀನಾಮೆ ಕುರಿತ ಪ್ರಹಸನಕ್ಕೆ ತೆರೆ ಎಳೆದಿದ್ದಾರೆ.
14ರಂದು ರಾಜೀನಾಮೆ ನೀಡುವುದಾಗಿ ಹೇಳಿದರೂ ಅದನ್ನು ಒಪ್ಪದೆ ಶುಕ್ರವಾರವೇ ರಾಜೀನಾಮೆ ನೀಡಬೇಕು ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ಒತ್ತಾಸೆಗೆ ಮಣಿದು ಹೊರಟ್ಟಿ ದಿಢೀರ್ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಗೂ ಮೊದಲು ಮಾತುಕತೆ ನಡೆಸಲು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ್ದ ಹೊರಟ್ಟಿ ಅವರು ವಾಪಸಾಗುವಾಗ ಸಿಟ್ಟಿನಿಂದಲೇ ಹೊರಬಂದರು.
ರಾಜೀನಾಮೆ ಪತ್ರವನ್ನು ಉಪಸಭಾಪತಿಗಳು ಇಲ್ಲದಿರುವ ಕಾರಣ, ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ಸಲ್ಲಿಸಿದರು. ಆ ರಾಜೀನಾಮೆ ಪತ್ರ ಸ್ವೀಕರಿಸಿರುವ ವಿಧಾನ ಪರಿಷತ್ ಕಾರ್ಯದರ್ಶಿಗಳು ಅದನ್ನು ರಾಜ್ಯಪಾಲರಿಗೆ ರವಾನಿಸಿ ನಂತರ ಸಭಾಪತಿ ಹುದ್ದೆ ತೆರವಾಗಿದೆ ಎಂದು ಅಧಿಸೂಚನೆ ಹೊರಡಿಸಿದರು.
ಹೊರಟ್ಟಿ ಈಗ ಹಂಗಾಮಿ ಸಭಾಪತಿ:
ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಪರ್ಯಾಯ ವ್ಯವಸ್ಥೆ ಆಗುವವರೆಗೆ ಹೊರಟ್ಟಿ ಅವರನ್ನೇ ಸಭಾಪತಿ ಸ್ಥಾನದಲ್ಲಿ ಮುಂದುವರೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಆ.13ರಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ಮೊದಲ ದಿನ ಸಂತಾಪ ಸೂಚನೆ ನಡೆಯಲಿದೆ. ಆ.14ರಂದು ಹಂಗಾಮಿ ಸಭಾಪತಿ ಹೊರಟ್ಟಿ ಅವರು ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ನಂತರ ಉಪಸಭಾಪತಿ ಅವರು ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.
ಬೇಸರವಾಗಿದೆ-ಹೊರಟ್ಟಿ:
ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಹೊರಟ್ಟಿ, ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನಕ್ಕೆ ಆ.14ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ಆದರೆ ಇಂದೇ (ಶುಕ್ರವಾರ) ರಾಜೀನಾಮೆ ಕೊಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದರು.
ಅಧಿಕಾರ ಅವಧಿ ಮುಗಿದರೆ ಏನೋ ಹೇಳಬಹುದು. ಆದರೆ, ಅಧಿಕಾರ ಮುಗಿಯುವ ಮುನ್ನ ಹೋದರೆ ಬೇಸರವಾಗುತ್ತದೆ. ಇಲ್ಲಿ ಸರ್ಕಾರದ ಒತ್ತಡ ಅಂತ ಬರಲ್ಲ. ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಕ್ಕೆ ಕೊಟ್ಟೆ. ಜೀವನದಲ್ಲಿ ಆಕಸ್ಮಿಕಗಳು ನಡೆಯುತ್ತವೆ. ಅದರಂತೆ ಆಕಸ್ಮಿಕ ನಡೆದಿದೆ. ರಾಜಕಾರಣದಲ್ಲಿ ಇದೆಲ್ಲ ಸಹಜ. ಅವರು ರಾಜೀನಾಮೆ ಕೊಡು ಅಂದಾಗ ಕೊಡಲೇ ಬೇಕಲ್ವೇ? ಈ ಸ್ಥಾನಕ್ಕೆ ಗೌರವ ಕೊಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಬೇಸರ ವ್ಯಕ್ತಪಡಿಸಿದರು.
18 ಜನ ಸಿಎಂಗಳನ್ನು ನೋಡಿದ್ದೇನೆ:
ನಾನು 18 ಜನ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಸದನದಲ್ಲಿ ಎಲ್ಲ ಪಕ್ಷಗಳೂ ಗೌರವ ಕೊಟ್ಟಿವೆ. ಸದನ ಉತ್ತಮವಾಗಿ ನಡೆಸಿದ ಬಗ್ಗೆ ಶೇ.90 ತೃಪ್ತಿಯಿದೆ. ಬೆಳಗಾವಿಯಲ್ಲಿ ಮಧ್ಯರಾತ್ರಿ ಎರಡು ಗಂಟೆಯವರೆಗೂ ಸದನ ನಡೆಸಿದ್ದೆ ಎಂದು ಸ್ಮರಿಸಿದರು.
ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಹೊರಟ್ಟಿ ಅವರು, ಇದರ ಬಗ್ಗೆ ನಾನು ಮಾತಾಡಲ್ಲ. ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಅವರಿಗೂ ತಿಳಿಸಿದ್ದೇನೆ ಎಂದರು.
ಇವತ್ತೇ ರಾಜೀನಾಮೆ ಕೊಡುತ್ತೇನೆ ಎನ್ನುವ ನಿರೀಕ್ಷೆ ಇರಲಿಲ್ಲ. ಮನಸ್ಸಿಗೆ ವಿರುದ್ಧವಾದ ಬೆಳವಣಿಗೆ ಎಲ್ಲರ ಜೀವನದಲ್ಲೂ ನಡೆಯುತ್ತದೆ. ಆಕಸ್ಮಿಕವಾಗಿ ಬಂದೆ, ಆಕಸ್ಮಿಕವಾಗಿ ಹೋಗುತ್ತಿದ್ದೇನೆ ಅಷ್ಟೇ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿಯ ಸಿ.ಟಿ.ರವಿ ಹಾಗೂ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಹೊರಟ್ಟಿ, ಅಂಥ ಘಟನೆಗಳು ಆಗಬಾರದಿತ್ತು. ಇಬ್ಬರನ್ನು ಕರೆದು ಮಾತನಾಡಿ ನನ್ನ ತೀರ್ಮಾನ ಹೇಳಿದ್ದೇನೆ. ಮತ್ತೆ ಅವರ ಕಡೆಯಿಂದ ಅರ್ಜಿ ಕೊಟ್ಟರು. ಅದನ್ನು ಎಥಿಕ್ಸ್ ಕಮಿಟಿಗೆ ಕೊಟ್ಟಿದ್ದೇನೆ ಎಂದರು.
ಸಿಎಂಗೆ ಥ್ಯಾಂಕ್ಸ್ ಹೇಳಲು ಭೇಟಿ:
ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಈವರೆಗೆ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಸಹಕರಿಸಿದ್ದಕ್ಕಾಗಿ ಧನ್ಯವಾದ ತಿಳಿಸಲು ಹೋಗಿದ್ದೆ. ಬೇರೆ ಯಾವ ವಿಷಯವೂ ಚರ್ಚಿಸಿಲ್ಲ ಎಂದರು.
ಸಿಎಂ ಹೇಳಿದ್ದಕ್ಕಾಗಿ
ರಾಜೀನಾಮೆ ಕೊಟ್ಟೆ
ಬದಲಾದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನಕ್ಕೆ ಆ.14ರಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ಆದರೆ ಈಗಲೇ ರಾಜೀನಾಮೆ ಕೊಡಿ ಎಂದು ಸಿಎಂ ಹೇಳಿದ್ದಕ್ಕೆ ರಾಜೀನಾಮೆ ನೀಡಿದ್ದೇನೆ.
-ಬಸವರಾಜ ಹೊರಟ್ಟಿ, ಹಂಗಾಮಿ ಸಭಾಪತಿ
