ಕನ್ನಡಪ್ರಭ ವಾರ್ತೆ ಬೆಂಗಳೂರು
‘ನಾನು ರಾಜೀನಾಮೆ ಕೊಡುವುದಿಲ್ಲ. ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ತಂದು ಸದನದಲ್ಲಿ ಚರ್ಚೆ ಮಾಡಲಿ. ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸಲು ಕಾರಣವೇನು ಎಂಬುದು ಜನಕ್ಕೆ ಗೊತ್ತಾಗಲಿ’ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಭಾಪತಿ ಸ್ಥಾನಕ್ಕೆ ಅದರದ್ದೇ ಆದ ಬೆಲೆ ಇದೆ. ಮೊದಲೆಲ್ಲ ಸಭಾಪತಿ ಆಯ್ಕೆಗೆ ಅದರದ್ದೇ ಆದ ನಿಯಮಗಳಿದ್ದವು. ಒಂದು ಪಕ್ಷದ ಹೈಕಮಾಂಡ್ ಪಕ್ಷದ ಲೆಟರ್ ಹೆಡ್‌ನಲ್ಲಿ ಸಭಾಪತಿ ಮತ್ತು ಉಪಸಭಾಪತಿ ಹೆಸರುಗಳನ್ನು ಆಯ್ಕೆ ಮಾಡಿ ಕಳಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲು ನೈತಿಕತೆ ಇರಿಸಿಕೊಂಡು ರಾಜಕಾರಣ ಮಾಡುತ್ತಿದ್ದರು. ಈಗ ದುಡ್ಡಿದ್ದವರು ಮಾತ್ರ ಆಯ್ಕೆಯಾಗಿ ಬರುತ್ತಿದ್ದಾರೆ. ಸ್ಪೀಕರ್ ಮತ್ತು ಸಭಾಪತಿ ಆಯ್ಕೆ ಮಾಡುವ ಅವಕಾಶ ಸದನಕ್ಕೆ ಮಾತ್ರ ಇರುತ್ತದೆ. ಸದನದ ಸಾರ್ವಭೌಮತ್ವಕ್ಕೆ ತಿಲಾಂಜಲಿ ಇಟ್ಟ ರೀತಿ ಈ ಸರ್ಕಾರ ವರ್ತನೆ ಮಾಡಿದೆ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿ ತೆಗೆದ ಉದಾಹರಣೆಗಳಿಲ್ಲ. ನನಗೆ ಈವರೆಗೂ ಸರ್ಕಾರದಿಂದ ಯಾರೂ ಕರೆ ಮಾಡಿ ಈ ವಿಚಾರ ಹೇಳಿಲ್ಲ. ನನ್ನನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಬೇಸರ ತಂದಿದೆ. ನನ್ನನ್ನು ಕೇಳದೇ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ಘೋಷಣೆ ಮಾಡಿರುವುದು ಸದನಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.ರಾಜಕಾರಣಕ್ಕಾಗಿ ಪದಚ್ಯುತಿ ಸರಿಯೇ?:
ನಾನು ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಇರುವ ವ್ಯಕ್ತಿ. 46 ವರ್ಷಗಳ ಕಾಲ ನಿರಂತರವಾಗಿ ಪರಿಷತ್ತಿನ ಸದಸ್ಯನಾಗಿ ಆಯ್ಕೆ ಆಗಿದ್ದೇನೆ. ಇದು ದಾಖಲೆ ಕೂಡಾ ಹೌದು. ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ವ್ಯಕ್ತಿ ನಾನು. ಈಗ ಕಾರಣವಿಲ್ಲದೆ ಸಭಾಪತಿ ಸ್ಥಾನದಿಂದ ಇಳಿಸಲು ಮುಂದಾಗಿರುವುದು ಏಕೆ? ಕಾಂಗ್ರೆಸ್‌ಗೆ ಸಂಖ್ಯಾಬಲ ಇರಬಹುದು. ಆದರೆ ನನ್ನ ಅವಧಿ ಇನ್ನೂ ಮುಗಿದಿಲ್ಲ. ಕೇವಲ ಅಧಿಕಾರ ಹಾಗೂ ರಾಜಕಾರಣದ ಕಾರಣಕ್ಕಾಗಿ ನನ್ನ ಪದಚ್ಯುತಿ ಸರಿಯೇ ಎಂದು ಹೊರಟ್ಟಿ ಪ್ರಶ್ನಿಸಿದರು.
ನನ್ನ ಇಳಿಸುವ ಬಗ್ಗೆ ಸದನದಲ್ಲಿ ಚರ್ಚೆ ಆಗಲಿ:
ಇದು ನಾನು ಏನೋ ತಪ್ಪು ಮಾಡಿ ಸ್ಥಾನ ಕಳೆದುಕೊಂಡೆ ಎಂಬ ಭಾವನೆ ಜನರಲ್ಲಿ ಮೂಡಿಸುವುದಿಲ್ಲವೇ? ಹಾಗಾಗಿ ಬಿಜೆಪಿ ನಾಯಕರ ಜೊತೆಗೂ ಮಾತಾಡಿದ್ದೇನೆ. ಅವರು ರಾಜೀನಾಮೆ ಕೊಡುವುದು ಬೇಡ ಎಂದು ಸಲಹೆ ಕೊಟ್ಟಿದ್ದಾರೆ. ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಿ. ನನ್ನ ಪದಚ್ಯುತಿ ಬಗ್ಗೆ ಚರ್ಚೆ ಆಗಲಿ. ಏಕೆ ನನ್ನನ್ನು ಆ ಸ್ಥಾನದಿಂದ ಇಳಿಸುತ್ತಿದ್ದಾರೆ ಎಂಬ ಬಗ್ಗೆ ಚರ್ಚೆಯಲ್ಲಿ ಹೇಳಲಿ. ಇದು ಸಾರ್ವಜನಿಕರಿಗೂ ತಿಳಿಯಲಿ. ಹಾಗಾಗಿ ನಾನು ರಾಜೀನಾಮೆ ಕೊಡಲ್ಲ. ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆದ ಮೇಲೆ ನಾನು ರಾಜೀನಾಮೆ ಕೊಡುವೆ. ನನಗೆ ಈವರೆಗೆ ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನು ಹೇಳಿಯೇ ಸ್ಥಾನದಿಂದ ಇಳಿಯುತ್ತೇನೆ ಎಂದು ಹೊರಟ್ಟಿ ಹೇಳಿದರು.