371ಜೆ ಸ್ಥಾನಮಾನ ಸಿಕ್ಕರೂ ನೇಮಕಾತಿ, ಬಡ್ತಿಯಲ್ಲಿ ನಿಲ್ಲದ ಅನ್ಯಾಯ

KannadaprabhaNewsNetwork |  
Published : Sep 17, 2025, 01:06 AM IST
45456645 | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನ ತಿದ್ದುಪಡಿ ಮಾಡಿ, 371ಜೆ ಸ್ಥಾನಮಾನ ನೀಡಿದ ಮೇಲೆ ನೇಮಕಾತಿಯಲ್ಲಿ ಹೀಗೆ ತಪ್ಪಾಗಿ ಅರ್ಥೈಸಲಾಗುತ್ತದೆ. ಇದರಿಂದ ಕಲ್ಯಾಣ ಕರ್ನಾಟದವರಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಲೇ ಇದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕಲ್ಯಾಣ ಕರ್ನಾಟಕದವರು ಎಂದರೆ ಕರ್ನಾಟಕದವರು ಅಲ್ಲವೇ?

ಹೌದು, ಇದು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನ ತಿದ್ದುಪಡಿ ಮಾಡಿ, 371ಜೆ ಸ್ಥಾನಮಾನ ನೀಡಿದ ಮೇಲೆ ನೇಮಕಾತಿಯಲ್ಲಿ ಹೀಗೆ ತಪ್ಪಾಗಿ ಅರ್ಥೈಸಲಾಗುತ್ತದೆ. ಇದರಿಂದ ಕಲ್ಯಾಣ ಕರ್ನಾಟದವರಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಲೇ ಇದೆ. ಇದರ ಪರಿಣಾಮ, ಪೊಲೀಸ್ ಇಲಾಖೆಯ ಬಡ್ತಿಯಲ್ಲಿ ಕಲ್ಯಾಣ ಕರ್ನಾಟಕದವರಿಗೆ 10ರಿಂದ 15 ವರ್ಷಕ್ಕೆ ಬಡ್ತಿ ದೊರೆಯುತ್ತಿದ್ದರೆ ಇತರರಿಗೆ ನಾಲ್ಕು ವರ್ಷದೊಳಗಾಗಿ ಬಡ್ತಿ ದೊರೆಯುತ್ತಿದೆ. ಇದಕ್ಕೆ ಕಾರಣ, ಕಲ್ಯಾಣ ಕರ್ನಾಟಕದವರೆಂದು ಗುರುತಿಸಿಕೊಂಡವರನ್ನು ಮಿಕ್ಕುಳಿದ ವೃಂದ (ಕರ್ನಾಟಕದವರು) ಕ್ಕೆ ಪರಿಗಣಿಸುವುದೇ ಇಲ್ಲ. ಇದು ಕೇವಲ ಪೊಲೀಸ್ ಇಲಾಖೆಯ ಬಡ್ತಿಯಲ್ಲಿ ಮಾತ್ರವಲ್ಲದೆ ನೇಮಕಾತಿಗಳಲ್ಲಿಯೂ ಹೀಗೆ ಅನ್ಯಾಯವಾಗುತ್ತಲೇ ಇದೆ.

ಏನಿದು ಅನ್ಯಾಯ?

ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ವೇಳೆ ಕಲ್ಯಾಣ ಕರ್ನಾಟಕ ಮತ್ತು ಮಿಕ್ಕುಳಿದ ವೃಂದ ಎಂದು ಪ್ರತ್ಯೇಕಿಸಿದೆ. ಹೀಗೆ ಮಾಡುವುದರಿಂದ ಈ ಭಾಗದವರು ಮಿಕ್ಕುಳಿದ ವೃಂದಕ್ಕೆ ಸ್ಪರ್ಧೆ ಮಾಡುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕ ವಿಶೇಷ ಸ್ಥಾನಮಾನದಲ್ಲಿ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರನ್ನು ಪರಿಗಣಿಸುವ ಮೂಲಕ ಅನ್ಯಾಯ ಮಾಡಲಾಗುತ್ತದೆ. ಇದು ಮೀಸಲಾತಿಯನ್ನೇ ತಪ್ಪಾಗಿ ಅರ್ಥೈಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕ ಮೇಲೆಯೂ ಶೋಷಣೆ ಮುಂದುವರಿಯುವಂತೆ ಆಗಿದೆ.

ಸಾಮಾನ್ಯ ವರ್ಗದಲ್ಲಿನ ಪೈಪೋಟಿಯ ನಂತರ ಮೀಸಲಾತಿ ಪರಿಗಣಿಸಲಾಗುತ್ತದೆ. ಎಸ್ಸಿ, ಎಸ್ಟಿ ವರ್ಗದವರು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದರೆ ಅವರನ್ನು ಸಾಮಾನ್ಯ ವರ್ಗದಲ್ಲಿಯೇ ಪರಿಗಣಿಸಿ, ನಂತರ ಜಾತಿ ಆಧಾರಿತ ಮೀಸಲಾತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಇದು ಮೀಸಲಾತಿಯ ನಿಜವಾದ ಅರ್ಥವಿವರಣೆ.

ಆದರೆ, 371 ಸ್ಥಾನಮಾನದ ಮೀಸಲಾತಿಯಲ್ಲಿ ಮಾತ್ರ ಹೀಗೆ ಪರಿಗಣಿಸುವುದಿಲ್ಲ. ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರನ್ನು ಕಲ್ಯಾಣ ಕರ್ನಾಟಕ ಮೀಸಲಾತಿ ಸೌಲಭ್ಯದಡಿ ಒತ್ತಾಯ ಪೂರ್ವಕವಾಗಿ ತಳ್ಳಲಾಗುತ್ತದೆ. ಹೀಗೆ ತಳ್ಳುವಾಗ ನಿಮಗೆ 371ಜೆ ಸ್ಥಾನಮಾನದ ಸೌಲಭ್ಯ ಮುಂದೆಯೂಬೇಕು ಎನ್ನುವುದಾದರೇ ಮತ್ತು ಕಲ್ಯಾಣ ಕರ್ನಾಟಕದಲ್ಲಿಯೇ ನೇಮಕವಾಗಬೇಕು ಎನ್ನುವುದಾದರೇ 371ಜೆ ಸ್ಥಾನಮಾನದ ಸೀಟ್‌ಗಳನ್ನೇ ಪಡೆಯುವಂತೆ ಹೇರಿಕೆ ಮಾಡಲಾಗುತ್ತದೆ. ಇದರಿಂದ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರು 371ಜೆ ಸ್ಥಾನಮಾನದ ಸೀಟ್‌ಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕಲ್ಯಾಣ ಕರ್ನಾಟಕದವರಿಗೆ ಅನ್ಯಾಯವಾಗುತ್ತದೆ.

ಈ ಕುರಿತು ಐದು ಸುತ್ತೋಲೆ ಹೊರಡಿಸಿದರೂ ಸಹ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ಈಗ ಸಚಿವ ಸಂಪುಟ ಉಪಸಮಿತಿಯ ಶಿಫಾರಸಿನ ಮೇಲೆ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ.ಪ್ರತ್ಯೇಕ ನೇಮಕಾತಿ ಅಧಿಸೂಚನೆ

ಪದೇ ಪದೆ ಆಗುತ್ತಿರುವ ಅನ್ಯಾಯದ ಕುರಿತು ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ಪ್ರಶ್ನಿಸಿರುವುದಕ್ಕೆ ಸರ್ಕಾರದ ಅಧೀನ ಕಾರ್ಯದರ್ಶಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ನೇಮಕಾತಿ ಅಧಿಸೂಚನೆ ಹೊರಡಿಸುವ ಕುರಿತು ಜು. 6, 2025ರಂದು ಆದೇಶವೊಂದನ್ನು ಹೊರಡಿಸಿದ್ದಾರೆ. ಪ್ರತ್ಯೇಕ ನೇಮಕಾತಿಯನ್ನು ಪ್ರತ್ಯೇಕವಾಗಿ ನಡೆಸಿದರೆ ಮಾತ್ರ ಅನುಕೂಲವಾಗುತ್ತದೆ. ಪ್ರತ್ಯೇಕ ನೇಮಕಾತಿ ಅಧಿಸೂಚನೆ ಹೊರಡಿಸಿ, ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿಯನ್ನು ಒಂದೇ ದಿನ ನಡೆಸಿದರೆ ಆಗ ಕಲ್ಯಾಣ ಕರ್ನಾಟಕದವರು ಮಿಕ್ಕುಳಿದ ಕರ್ನಾಟಕದ ನೇಮಕಾತಿಯಲ್ಲಿ ಸ್ಪರ್ಧೆ ಮಾಡುವುದರಿಂದಲೇ ವಂಚಿತರಾಗುತ್ತದೆ.

ಏನು ಆಗಬೇಕು?

ಕಲ್ಯಾಣ ಕರ್ನಾಟಕ ಮತ್ತು ಮಿಕ್ಕುಳಿದ ಕರ್ನಾಟಕದ ವೃಂದ ಬೇರ್ಪಡಿಸುವ ವೇಳೆಯಲ್ಲಿ ಸಾಮಾನ್ಯ ಮತ್ತು ಕಲ್ಯಾಣ ಕರ್ನಾಟಕ ಎಂದಷ್ಟೇ ಬೇರ್ಪಡಿಸಬೇಕು. ಆಗ ಕಲ್ಯಾಣ ಕರ್ನಾಟಕದವರು ಸಹ ಕರ್ನಾಟಕದ ಇತರೆ ಹುದ್ದೆಗಳಿಗೂ ಸ್ಪರ್ಧೆ ಮಾಡುವ ಅರ್ಹತೆ ಪಡೆಯುತ್ತಾರೆ. ಸಾಮಾನ್ಯ ವರ್ಗದವರನ್ನು ಆಯ್ಕೆ ಮಾಡಿದ ನಂತರ ಕಲ್ಯಾಣ ಕರ್ನಾಟಕ ಮೀಸಲಾತಿ ಸೌಲಭ್ಯದಡಿ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಇದು ಮೀಸಲಾತಿ ವ್ಯವಸ್ಥೆ. ಆದರೆ, ಅದನ್ನೇ ತಪ್ಪಾಗಿ ಅರ್ಥೈಸಿ ಕಲ್ಯಾಣ ಕರ್ನಾಟಕದವರು ಕರ್ನಾಟಕದವರಲ್ಲ ಎನ್ನುವಂತೆ ಅರ್ಥೈಸಿ ಅನ್ಯಾಯ ಮಾಡಲಾಗುತ್ತದೆ.ಕಲ್ಯಾಣ ಕರ್ನಾಟಕಕ್ಕೆ ನೀಡಿರುವ ವಿಶೇಷ ಸೌಲಭ್ಯವನ್ನೇ ತಪ್ಪಾಗಿ ಅರ್ಥೈಸಿ ನಮಗೆ ಕರ್ನಾಟಕದ ಇತರೆ ಹುದ್ದೆಗಳಲ್ಲಿ ಸ್ಪರ್ಧೆ ಮಾಡುವ ಅವಕಾಶವನ್ನೇ ಕಿತ್ತುಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕದವರಿಗೆ ಬಡ್ತಿ ಸಿಗುವುದು ದುರ್ಲಬವಾಗಿದೆ.

ರಮೇಶ ತುಪ್ಪದ ಸಂಚಾಲಕರು ಕಲ್ಯಾಣ ಕರ್ನಾಟಕದ ಹೋರಾಟ ಸಮಿತಿ

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ