ಕೋಲಾರ ಕ್ಷೇತ್ರಕ್ಕೆ ೩೭೬ ಕೋಟಿ ರು. ಅನುದಾನ

KannadaprabhaNewsNetwork | Published : Sep 20, 2024 1:35 AM

ಸಾರಾಂಶ

ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕಳೆದ ಒಂದು ವರ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ೩೭೬ ಕೋಟಿ ರು. ಅನುದಾನ ಕೊಟ್ಟಿದ್ದೇವೆ. ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಕೇಳಿದಷ್ಟು ಅನುದಾನ ಕೊಡಲು ಸರ್ಕಾರವು ಸಿದ್ಧವಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕಳೆದ ಒಂದು ವರ್ಷದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ೩೭೬ ಕೋಟಿ ರು. ಅನುದಾನ ಕೊಟ್ಟಿದ್ದೇವೆ. ಅಭಿವೃದ್ಧಿಯ ದೃಷ್ಟಿಯಿಂದ ಇನ್ನೂ ಕೇಳಿದಷ್ಟು ಅನುದಾನ ಕೊಡಲು ಸರ್ಕಾರವು ಸಿದ್ಧವಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ತಾಲೂಕಿನ ನರಸಾಪುರದಲ್ಲಿ ನಾಲ್ಕು ಪಥದ ರಸ್ತೆಗೆ ೭ ಕೋಟಿ ರು., ರಾಷ್ಟ್ರೀಯ ಹೆದ್ದಾರಿಯಿಂದ ಖಾಜಿಕಲ್ಲಹಳ್ಳಿ ಮಾರ್ಗದ ರಸ್ತೆಗೆ ೫ ಕೋಟಿ ರು. ಹಾಗೂ ನರಸಾಪುರ ಸೊಸೈಟಿಯ ನೂತನ ಕಟ್ಟಡಕ್ಕೆ ೧.೫ ಕೋಟಿ ರು. ಸೇರಿದಂತೆ ಒಟ್ಟು ೧೩.೫ ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಸರಮಾಲೆಯೇ ನಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಆಡಳಿತ ಪಕ್ಷದ ಮೇಲೆ ಹಣ ಖಾಲಿಯಾಗಿದೆ ಎಂದು ಗೂಬೆ ಕೂರಿಸಲು ಹೊರಟಿದ್ದಾರೆ, ಜನಕ್ಕೆ ಅಭಿವೃದ್ಧಿಯೂ ಕಣ್ಣಮುಂದೆಯೇ ಇದೆ ಎಂದರು.

ಹಿಂದಿನ ಬಿಜೆಪಿ ಸರಕಾರದಲ್ಲಿ ಶೇ.೪೦ ರಷ್ಟು ಕಮಿಷನ್‌ನಿಂದ ಅಭಿವೃದ್ಧಿ ಶೂನ್ಯವಾಗಿತ್ತು. ನಮ್ಮ ಸರಕಾರವು ಯಾರಪ್ಪನ ಮನೆಯಿಂದ ಕೂಡ ಹಣ ತಂದಿಲ್ಲ, ಜನರ ದುಡ್ಡನ್ನೇ ಜನರಿಗೆ ಕೊಡುತ್ತಿದ್ದೇವೆ. ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದಲ್ಲಿ ಅವರಿಗೆ ತಿನ್ನಲು ಸಾಕಾಗಲಿಲ್ಲ, ಅದಕ್ಕೆ ಅಭಿವೃದ್ಧಿ ಶೂನ್ಯವಾಗಿತ್ತು, ನಾವು ರಾಜಕಾರಣವನ್ನು ಹೊಟ್ಟೆಪಾಡಿಗೆ, ವ್ಯಾಪಾರಕ್ಕೆ ಮಾಡಲು ಬಂದಿಲ್ಲ. ಜನರ ಸೇವೆ ಮಾಡಲು ಬಂದಿದ್ದು, ಅಭಿವೃದ್ಧಿಯೇ ನಮ್ಮ ಗುರಿ ಮತ್ತು ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದಿದೆ. ಬಡವರ, ಸಾಮಾನ್ಯ ಜನರ ಏಳಿಗೆಗಾಗಿ ಐದು ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಹೇಳಿದ ಸುಳ್ಳಿನ ಸರಪಳಿ ತುಂಡರಿಸಿದ್ದೇವೆ. ಜನ ೧೩೬ ಸ್ಥಾನ ಕೊಟ್ಟು ಆಶೀರ್ವಾದ ಮಾಡಿದ್ದಾರೆ, ಸರ್ಕಾರವು ಬಿದ್ದು ಹೋಗುತ್ತದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ, ಜನಕ್ಕೆ ಅಭಿವೃದ್ಧಿ ಯಾರಿಂದಾಗಿದೆ ಎಂಬುದು ಗೊತ್ತಿದೆ ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ , ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು.

ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ಸಚಿವರಿಗೆ ಮನವಿ ಮಾಡಿ ನರಸಾಪುರ ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ಹೊಸದಾಗಿ ಪೊಲೀಸ್ ಹೊರಠಾಣೆಯನ್ನು ಪ್ರಾರಂಭಿಸಬೇಕು. ಸೊಸೈಟಿ ನೂತನ ಕಟ್ಟಡಕ್ಕೆ ನಬಾರ್ಡ್ ವತಿಯಿಂದ ೭೦ ಲಕ್ಷ ರು. ನೀಡಿದ್ದು ಉಳಿದ ಹಣವನ್ನು ಸಚಿವರು, ಶಾಸಕರು, ಎಂಎಲ್ಸಿಗಳ ಮೂಲಕ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನರಸಾಪುರ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷೆ ಪದ್ಮಮ್ಮ, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮಂಜುನಾಥ್, ಎಂಟಿಬಿ ಶ್ರೀನಿವಾಸ್, ಶ್ರೀರಾಮಪ್ಪ, ಜಾಲಿ ಬಾಬು ಜನಪನಹಳ್ಳಿ ನವೀನ್ ಕುಮಾರ್ ಇದ್ದರು.

Share this article