ನಾಲ್ಕು ಗುಂಪುಗಳಾಗಿ ಚದುರಿದ 39 ಕಾಡಾನೆಗಳು: ಕಾಫಿ, ಭತ್ತದ ಬೆಳೆಗಳಿಗೆ ಭಾರೀ ಹಾನಿ

KannadaprabhaNewsNetwork |  
Published : Nov 27, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಮೂಡಿಗೆರೆ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆಪರೇಷನ್ ಗಜ ಕಾರ್ಯಾಚರಣೆ ನಡುವೆಯೇ ಬೇಲೂರು ಕಡೆಯಿಂದ ಬಂದಿರುವ 39 ಕಾಡಾನೆಗಳ ಹಿಂಡು ನಾಲ್ಕು ಗುಂಪುಗಳಾಗಿ ಚದುರಿ ವಿವಿಧ ಗ್ರಾಮಗಳ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.

- ನಿರಂತರ ಸಂಚಾರದಿಂದ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರಲ್ಲಿ ಆತಂಕ । ಬೆಳೆ ಹಾನಿಯಾದ ರೈತರ ಕಣ್ಣೀರುಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೂಡಿಗೆರೆ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಆಪರೇಷನ್ ಗಜ ಕಾರ್ಯಾಚರಣೆ ನಡುವೆಯೇ ಬೇಲೂರು ಕಡೆಯಿಂದ ಬಂದಿರುವ 39 ಕಾಡಾನೆಗಳ ಹಿಂಡು ನಾಲ್ಕು ಗುಂಪುಗಳಾಗಿ ಚದುರಿ ವಿವಿಧ ಗ್ರಾಮಗಳ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.

ಕಾಡಾನೆಗಳ ನಿರಂತರ ಸಂಚಾರದಿಂದ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ನಾಲ್ಕು ದಿನಗಳಿಂದ ನಿರ್ದಿಷ್ಟ ಸ್ಥಳದಲ್ಲಿ ನೆಲೆ ನಿಲ್ಲದೆ ಸಂಚರಿಸುತ್ತಿರುವ ಬೀಟಮ್ಮ, ಭುವನೇಶ್ವರಿ ಹಾಗೂ ಓಲ್ಡ್ ಬೆಲ್ಟ್ ಗುಂಪಿನ ಕಾಡಾನೆಗಳು ಬುಧವಾರ ರಾತ್ರಿ ನಾಲ್ಕು ಗುಂಪುಗಳಾಗಿ ವಿಭಜನೆಯಾಗಿವೆ.

ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ, ಕಾರ್ಬೈಲು, ಕಸ್ಕೆಬೈಲು ಹಾಗೂ ಕಲ್ಲುಗುಡ್ಡ ಗ್ರಾಮಗಳ ಸುತ್ತಮುತ್ತ ಆನೆಗಳು ಬೀಡುಬಿಟ್ಟಿವೆ. ಮಾಕೋನಹಳ್ಳಿ ಗ್ರಾಮದ ಬಳಿ ಮೊದಲ ಗುಂಪು, ಕಾರ್ಬೈಲು ಬಳಿ ಎರಡನೇ ಗುಂಪು, ಕಸ್ಕೆಬೈಲಿನಲ್ಲಿ ಮೂರನೇ ಗುಂಪು ಹಾಗೂ ಕಲ್ಲುಗುಡ್ಡದಲ್ಲಿ ನಾಲ್ಕನೇ ಗುಂಪು ಸಂಚರಿಸುತ್ತಿವೆ. ಮರಿಯಾನೆಗಳೂ ಹಿಂಡಿನಲ್ಲಿದ್ದು, ಕಾಫಿ ತೋಟಗಳ ನಡುವೆ ಸಂಚರಿಸುತ್ತಿವೆ.ಕಾರ್ಬೈಲಿನಲ್ಲಿ ಬುಧವಾರ ರಾತ್ರಿ ಸುಮಾರು 8 ಗಂಟೆಗೆ 20ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ನುಗ್ಗಿ ಕಾಫಿ, ಅಡಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿವೆ. ಕಷ್ಟಪಟ್ಟು ಬೆಳೆಸಿದ್ದ ತೋಟ ಕಾಡಾನೆಗಳ ದಾಳಿಗೆ ಸಿಲುಕಿ ಹಾನಿಯಾಗಿದ್ದರಿಂದ ರೈತ ಪ್ರಹ್ಲಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅವರು ತೋಟದಲ್ಲೇ ಕುಳಿತು ಕಣ್ಣೀರಿಟ್ಟಿದ್ದು, ಅವರ ಮನವೊಲಿಸಲು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.ಇದೇ ವೇಳೆ ಮಾಕೋನಹಳ್ಳಿ ಗ್ರಾಮದ ನಾಗಲಾಪುರ ಸುಪ್ರೀತ್ ಅವರ ಕಾಫಿ ತೋಟ ಹಾಗೂ ಭತ್ತದ ಗದ್ದೆಗೂ ಕಾಡಾನೆ ಗಳ ಹಿಂಡು ನುಗ್ಗಿದೆ. ಕಾಫಿ ಮತ್ತು ಭತ್ತದ ಬೆಳೆಗಳನ್ನು ತುಳಿದು ನಾಶಪಡಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.

ಕಾರ್ಬೈಲು ಸುತ್ತಮುತ್ತಲಿನ ಮೇಲ್ಭಾಗದ ತೋಟದಲ್ಲೂ 15ಕ್ಕೂ ಅಧಿಕ ಆನೆಗಳು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಕಾರ್ಬೈಲು, ಮಾಕೋನಹಳ್ಳಿ, ಗಬ್ಬಳ್ಳಿಪುರ ಸೇರಿದಂತೆ ಸುತ್ತಮುತ್ತಲಿನ 50ಕ್ಕೂ ಅಧಿಕ ಗ್ರಾಮಗಳ ಜನರು ಕಾಡಾನೆಗಳ ಆತಂಕದಲ್ಲಿದ್ದಾರೆ. ಕಾಫಿ ಕೊಯ್ಲು ಸಮಯದಲ್ಲೇ ಆನೆಗಳ ಹಾವಳಿ ಹೆಚ್ಚಾಗಿರುವುದು ಬೆಳೆಗಾರರ ಸಂಕಷ್ಟ ಮತ್ತಷ್ಟು ಹೆಚ್ಚಿಸಿದೆ. ಆನೆಗಳ ಸಂಚಾರವಿರುವ ಹಿನ್ನೆಲೆಯಲ್ಲಿ ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಸೂಚನೆ ನೀಡಿದೆ.

.....ಬಾಕ್ಸ್....

30 ರ ಸಭೆ ವರೆಗೆ ಕಾಯಲು ಸಾಧ್ಯವಿಲ್ಲ

ಕಾಡಾನೆಗಳನ್ನು ಸ್ಥಳಾಂತರಿಸುವ ಕುರಿತು ನವೆಂಬರ್ 30ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ಹಾಗೂ ಶಾಸಕರು ತಿಳಿಸಿದ್ದಾರೆ. ಆದರೆ, ಅಷ್ಟರವರೆಗೆ ಕಾಯಲು ಸಾಧ್ಯವಿಲ್ಲ. ತಕ್ಷಣವೇ ಆನೆಗಳನ್ನು ಸ್ಥಳಾಂತರಿಸಬೇಕು ಹಾಗೂ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವರ್ ಸಮಸ್ಯೆ: ಪಡಿತರಕ್ಕಾಗಿ ದಿನವಿಡೀ ಕಾಯುವ ಬಡವರು
ಸಂವಿಧಾನ ಪ್ರತಿ ನಾಗರಿಕನ ಬದುಕಿಗೆ ದಾರಿದೀಪ: ದಿನೇಶ್