₹39000 ಕೋಟಿ ತ್ಯಾಜ್ಯ ಹಗರಣ: ಅಶೋಕ್‌

KannadaprabhaNewsNetwork |  
Published : Jun 11, 2026, 02:45 AM IST
Lok Bhavan, | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ 39 ಸಾವಿರ ಕೋಟಿ ರು. ಮೊತ್ತದ ಹಗರಣ ನಡೆಸಿದೆ ಎಂದು ಗಂಭೀರವಾಗಿ ಆಪಾದಿಸಿರುವ ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್‌.ಅಶೋಕ್‌, ದೆಹಲಿ ಮೂಲದ ‘ಎಂಎಸ್‌ಡಬ್ಲ್ಯೂ ಸೆಲ್ಯೂಶನ್ಸ್‌ ಲಿಮಿಟೆಡ್‌’ ಕಂಪನಿಗೆ (ರಾಮ್‌ಕಿ) 35 ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ನೀಡಿ 10 ಸಾವಿರ ಕೋಟಿ ರು. ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್‌ ಸರ್ಕಾರವು ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ 39 ಸಾವಿರ ಕೋಟಿ ರು. ಮೊತ್ತದ ಹಗರಣ ನಡೆಸಿದೆ ಎಂದು ಗಂಭೀರವಾಗಿ ಆಪಾದಿಸಿರುವ ವಿಧಾನಸಭೆ ಪ್ರತಿ ಪಕ್ಷದ ನಾಯಕ ಆರ್‌.ಅಶೋಕ್‌, ದೆಹಲಿ ಮೂಲದ ‘ಎಂಎಸ್‌ಡಬ್ಲ್ಯೂ ಸೆಲ್ಯೂಶನ್ಸ್‌ ಲಿಮಿಟೆಡ್‌’ ಕಂಪನಿಗೆ (ರಾಮ್‌ಕಿ) 35 ವರ್ಷಗಳ ಸುದೀರ್ಘ ಅವಧಿಗೆ ಗುತ್ತಿಗೆ ನೀಡಿ 10 ಸಾವಿರ ಕೋಟಿ ರು. ಕಿಕ್‌ ಬ್ಯಾಕ್‌ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಅವರು ಬುಧವಾರ ಬಿಜೆಪಿ ಮುಖಂಡರ ನಿಯೋಗದೊಂದಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಮತ್ತು ಲೋಕಾಯುಕ್ತಕ್ಕೆ ದಾಖಲೆಗಳ ಸಮೇತ ಪ್ರತ್ಯೇಕ ದೂರು ನೀಡಿದ್ದಾರೆ.

ಟೆಂಡರ್‌ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸಬೇಕು. ಟೆಂಡರ್‌ ಪಡೆದ, ಅರ್ಜಿ ಸಲ್ಲಿಸಿದ ಕಂಪನಿಗಳ ಅರ್ಹತೆ ಬಗ್ಗೆ ಪರಿಶೀಲನೆ ನಡೆಸಬೇಕು. ಡಿಪಿಆರ್‌ ಹಂತ ಮತ್ತು ಟೆಂಡರ್‌ ಅನುಮೋದನೆ ಹಂತದಲ್ಲಿ ಆಗಿರುವ ಲೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಬಿಎನಲ್ಲಿ ಈವರೆಗೆ ರಾಜ್ಯದ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದರು. ಇದೀಗ ದೆಹಲಿ ಮೂಲದ ರಾಮ್‌ಕಿ ಕಂಪನಿಗೆ 39 ಸಾವಿರ ಕೋಟಿ ರು. ಮೊತ್ತದ ಟೆಂಡರ್‌ ನೀಡಲಾಗಿದೆ. ಇದರಲ್ಲಿ 10 ಸಾವಿರ ಕೋಟಿ ರು. ಕಿಕ್‌ ಬ್ಯಾಕ್‌ ಇದೆ. ಇದು ಕಾಂಗ್ರೆಸ್‌ ಹೈಕಮಾಂಡ್‌ನ ಕಪ್ಪಕಾಣಿಕೆ ಟೆಂಡರ್‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈವರೆಗೆ ಪ್ರತಿ ವರ್ಷ ಟೆಂಡರ್‌ ಮಾಡಲಾಗುತ್ತಿತ್ತು. ಈ ಬಾರಿ 30 ವರ್ಷ ಹಾಗೂ ಇನ್ನೂ ಐದು ವರ್ಷ ವಿಸ್ತರಣೆ ಸೇರಿ 35 ವರ್ಷಕ್ಕೆ ಟೆಂಡರ್‌ ನೀಡಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣಕ್ಕೆ ಎರಡು ಪ್ಯಾಕೇಜ್‌ ಮಾಡಲಾಗಿದೆ. ಇದಕ್ಕೂ ಮುನ್ನ ಸರ್ಕಾರಿ ಸ್ವಾಮ್ಯದ ರೈಟ್ಸ್‌ ಕಂಪನಿಯಿಂದ ಸಲಹೆ ಪಡೆದು, ಆ ಸಲಹೆಯನ್ನು ಕಸದ ಬುಟ್ಟಿಗೆ ಹಾಕಲಾಗಿದೆ ಎಂದು ದೂರಿದರು.

ಜಾಹೀರಾತು ನೀಡದೆ ಟೆಂಡರ್‌ ಕರೆದು ಅಕ್ರಮ:

ಈ ಹಿಂದೆ ಎರಡು ಬಾರಿ ಟೆಂಡರ್‌ ಕರೆದು ವಿಫಲವಾಗಿ ಮೂರನೇ ಬಾರಿಗೆ ದೆಹಲಿ ಮೂಲದ ಈ ರಾಮ್‌ಕಿ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಮಾನ್ಯತೆ ಇಲ್ಲದ ಕಂಪನಿಯಿಂದ ಸಲಹೆ ಪಡೆದು ಈ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಜೊತೆಗೆ ಈ ಕಂಪನಿ 1,500 ಕೋಟಿ ರು. ಸಾಲ ಪಡೆಯಲು ಅವಕಾಶ ಕೊಡಲಾಗಿದೆ. ಇದಕ್ಕೆ ಸರ್ಕಾರದಿಂದಲೇ ಜಮೀನು ನೀಡಲಾಗಿದೆ. ಕಾನೂನು ಪ್ರಕಾರ ಟೆಂಡರ್‌ ಕುರಿತು ಪ್ರತಿಕೆಗಳಲ್ಲಿ ಜಾಹೀರಾತು ನೀಡದೆ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದರು.

ಆರ್ಥಿಕ ಇಲಾಖೆಯಿಂದ ಎಚ್ಚರಿಕೆ:

ಎರಡೂ ಪ್ಯಾಕೇಜ್‌ಗಳನ್ನು ಒಂದೇ ಕಂಪನಿಗೆ 30 ವರ್ಷಗಳ ದೀರ್ಘ ಅವಧಿಗೆ ಗುತ್ತಿಗೆ ನೀಡಿರುವುದು ಮೊದಲಾದ ಅಂಶಗಳ ಬಗ್ಗೆ ಹಣಕಾಸು ಇಲಾಖೆ ತಕರಾರರು ಎತ್ತಿದೆ. ಅವಧಿಯನ್ನು 10 ವರ್ಷಕ್ಕೆ ಇಳಿಸಿ, ಹೆಚ್ಚಿನ ಮೊತ್ತವನ್ನು ಶೇ.2.5ಕ್ಕೆ ಇಳಿಸಬೇಕು, ಇಲ್ಲವಾದರೆ ಜಿಬಿಎಗೆ ಮುಂದೆ ಹೊರೆಯಾಗುತ್ತದೆ ಎಂದು ಸಲಹೆ ನೀಡಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಮುಖ್ಯಮಂತ್ರಿಗೆ ಪತ್ರ ಬರೆದು, ಇದರಲ್ಲಿನ ಲೋಪಗಳನ್ನು ಎತ್ತಿ ತೋರಿಸಿದರೂ ಈ ಗುತ್ತಿಗೆ ನೀಡಲಾಗಿದೆ ಎಂದು ಆರ್‌.ಅಶೋಕ್‌ ಹೇಳಿದರು.

ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ.ಮೋಹನ್‌ ಸೇರಿದಂತೆ ಶಾಸಕರು ಮತ್ತು ಮುಖಂಡರು ನಿಯೋಗದಲ್ಲಿದ್ದರು.

ಗುತ್ತಿಗೆ ಪಡೆದ ಕಂಪನಿ

ಕಪ್ಪು ಪಟ್ಟಿಯಲ್ಲಿದೆ

ರಾಮ್‌ಕಿ ಕಂಪನಿ ವಂಚನೆ ಮಾಡಿದೆ, ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಿಶ್ವಬ್ಯಾಂಕ್‌ ಹೇಳಿದ್ದು, ಇದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 2016 ರಲ್ಲಿ ಬಿಬಿಎಂಪಿಯಿಂದಲೇ ರಾಮ್‌ಕಿ ಕಂಪನಿಯ ಗುತ್ತಿಗೆ ರದ್ದು ಮಾಡಲಾಗಿತ್ತು. ಆದರೂ ಇದೇ ಕಂಪನಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರ ಟೆಂಡರ್‌ ನೀಡಿದೆ ಎಂದು ಕಿಡಿಕಾರಿದರು.

ಸಚಿವರ ವಿರೋಧದ

ನಡುವೆ ಅನುಮೋದನೆ

ಸಿದ್ದರಾಮಯ್ಯ ರಾಜೀನಾಮೆ ನೀಡುವ ಮುನ್ನ ಇದನ್ನು ಈ ಗುತ್ತಿಗೆ ವಿಚಾರವನ್ನು ಸಂಪುಟಕ್ಕೆ ತಂದು ಅನುಮೋದಿಸಲಾಗಿದೆ. ಸಂಪುಟದಲ್ಲಿ 10 ಮಂದಿ ಸಚಿವರು ಈ ಗುತ್ತಿಗೆ ವಿರೋಧಿಸಿ ಗಲಾಟೆ ಮಾಡಿದ್ದರು. ಇದರಿಂದ ಬೆಂಗಳೂರು ಚುನಾವಣೆಗೆ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ. ಆದರೂ ಹೈಕಮಾಂಡ್‌ ಸೂಚನೆ ಎಂದು ಅನುಮೋದಿಸಲಾಗಿದೆ ಎಂದು ಅಶೋಕ್‌ ಆರೋಪಿಸಿದರು.ಕಸದಲ್ಲೂ ಕಾಸು ತೆಗೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡಿದ್ದು, ಅಕ್ರಮದ ವಾಸನೆ ಹರಡಿದೆ. ಇದೇ ಕಾರಣಕ್ಕೆ ಬೆಂಗಳೂರಿನ ಹೊಣೆ ವಹಿಸಿಕೊಳ್ಳಲು ಸಚಿವರ ಮಧ್ಯೆ ಸ್ಪರ್ಧೆ ನಡೆದಿದೆ. ಕೂಡಲೇ ಈ ಟೆಂಡರ್‌ ರದ್ದು ಮಾಡಬೇಕು

-ಆರ್‌.ಅಶೋಕ್‌, ವಿಧಾನಸಭೆಯ ಪ್ರತಿಪಕ್ಷದ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನ್ನ ಕಂಡರೆ ವಿರೋಧ ಪಕ್ಷಕ್ಕೆ ಅಸೂಯೆ: ಡಿಕೆಶಿ ಆರೋಪ
ಸುಧೀರ್ಘ ಪ್ರಧಾನಿ ದಾಖಲೆ: ಬಿಜೆಪಿ ಸಂಭ್ರಮ