ಕನ್ನಡಪ್ರಭ ವಾರ್ತೆ ಬೀದರ್
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಇದು ಸಮಾನತ್ವ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಆದಿ ಶರಣರ ಸಂಕಲ್ಪದಂತೆ ಶರಣ ಮೇಳವನ್ನು ನಡೆಸಲಾಗುತ್ತಿದೆ. ಧರ್ಮಕರ್ತ ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲಸಂಗಮ ವನ್ನು ಬಸವ (ಲಿಂಗಾಯತ) ಧರ್ಮಿಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡು 1988ರ ಜನವರಿ 14, 15 ಮತ್ತು 16 ರಂದು ಪ್ರಥಮ ಚಾರಿತ್ರಿಕ ಶರಣ ಮೇಳವನ್ನು ನಡೆಸಲಾಯಿತು. ಮೊಟ್ಟ ಮೊದಲನೆಯ ಚಾರಿತ್ರಿಕ ಶರಣ ಮೇಳವು ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನಸಮೂಹವನ್ನು ಆಕರ್ಷಿಸಿತು. ಇಂತಹ ಶರಣ ಮೇಳವು ಪ್ರತಿ ವರ್ಷ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುತ್ತಲಿದ್ದು, 38ನೇ ಶರಣ ಮೇಳವು 2026ನೇ ಜನವರಿ 12, 13 ಮತ್ತು 14 ರಂದು ನಡೆಯುವುದು. ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗಪೂಜೆ, ಗಣಲಿಂಗ ದರ್ಶನ, ಸಾಮೂಹಿಕ ವಚನ ಪಠಣ, ಶರಣ ಮೇಳದ ಪ್ರಮುಖ ಧಾರ್ಮಿಕ ವಿಧಿಗಳು. ಜನವರಿ 14 ರಂದು ಬೆಳಿಗ್ಗೆ 9 ರಿಂದ ಧ್ವಜಾರೋಹಣ, ಸಮುದಾಯ ಪ್ರಾರ್ಥನೆ, ಪಥ ಸಂಚಲನ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಇರುತ್ತದೆ. ಇವುಗಳಲ್ಲಿ ಶರಣ ವ್ರತಿಗಳು ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. 40 ದಿವಸ, 30 ದಿವಸ, 20 ದಿವಸ ಮತ್ತು 10 ದಿವಸಗಳ ‘ಶರಣ ವ್ರತ’ವನ್ನು ಅವರವರ ಸಮಯಾವಕಾಶಕ್ಕೆ ತಕ್ಕಂತೆ ಸ್ವೀಕರಿಸಿ, ಆಚರಿಸಿ ಯಾರು ಬೇಕಾದರೂ ಶರಣ ಮೇಳದಲ್ಲಿ ಭಾಗಿಗಳಾಗಬಹುದು ಎಂದು ತಿಳಿಸಿದರು.
ಜ.13ರಂದು ಬೆಳಿಗ್ಗೆ 10.30 ಗಂಟೆಗೆ ಶರಣ ಮೇಳ ಉದ್ಘಾಟನೆ ಸಮಾರಂಭ ಜರುಗಲಿದೆ. ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ಮಾತೆ ಗಂಗಾದೇವಿಯವರು ಹಾಗೂ ಪೂಜ್ಯ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶಿಲಕುಮಾರ ಶಿಂಧೆ ಉದ್ಘಾಟಿಸುವರು. ರಾಜ್ಯದ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ತರಂಗಿಣಿ ಕೃತಿ ಲೋಕಾರ್ಪಣೆಗೊಳಿಸುವರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಧ್ವಜಾರೋಹಣ ನೆರವೇರಿಸುವರು.ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಸ್ವಾಮಿ ಲಿಂಗಾನಂದ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಗೋ.ರು ಚನ್ನಬಸಪ್ಪ ಅವರಿಗೆ, ಬಸವಾತ್ಮಜ ರಾಷ್ಟ್ರೀಯ ಪ್ರಶಸ್ತಿಯನ್ನು ಗಾಯಕಿ ಸಂಗೀತಾ ಕಟ್ಟಿ ಅವರಿಗೆ ವಿತರಿಸಲಾಗುತ್ತದೆ.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ‘ಶರಣ ಕಾಯಕರತ್ನ ಪ್ರಶಸ್ತಿ’ ಹಾಗೂ ಟಿ.ವಿ 9 ವರದಿಗಾರ ರವಿ ಮೂಕಿ ಅವರಿಗೆ ಶರಣ ಜ್ಞಾನ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ವಿವರಿಸಿದರು.ರಾಷ್ಟ್ರೀಯ ಬಸವದಳದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಜೊನ್ನಿಕೇರಿ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ ಖಾಜಾಪುರ, ಪದಾಧಿಕಾರಿ ರಾಜೇಂದ್ರಕುಮಾರ ಗಂದಗೆ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ ಮಾತನಾಡಿದರು. ಸಂಜು ಪಾಟೀಲ, ಕಂಟೆಪ್ಪ ಗಂದಿಗುಡಿ, ಮಲ್ಲಿಕಾರ್ಜುನ ಪಂಚಾಕ್ಷರಿ, ವೀರಶೆಟ್ಟಿ ಪಾಟೀಲ ಮರಖಲ, ಯೋಗೇಶ ಶ್ರೀಗೇರಿ, ನೆಹರು ಸ್ವಾಮಿ, ಗಣೇಶ ಬಿರಾದಾರ, ಉಮೇಶ ಗಾಯತೊಂಡೆ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.