ಕೆಪಿಎಸ್‌ ಶಾಲೆಯಲ್ಲಿ ತ್ರಿಡಿ ಕಲಿಕಾ ಲೋಕ ಅನಾವರಣ

KannadaprabhaNewsNetwork |  
Published : Apr 09, 2026, 03:00 AM IST
ಫೋಟೋ 06 ಎಚ್,ಎನ್,ಎಂ 01 ಹನುಮಸಾಗರದ ಮೆದಿಕೇರಿ ಆರ್ಟ್ ಗ್ಯಾಲರಿಯ ನಿಪುಣ ಕಲಾವಿದರಿಂದ ಎಲ್,ಕೆ,ಜಿ ಮಕ್ಕಳ ಕಲಿಕೆಗೆ ಬೇಕಾದ ಚಿತ್ರಗಳು ರಚಿಸಿರುವುದು.ಫೋಟೋ 06 ಎಚ್,ಎನ್,ಎಂ 01ಬಿ: ಹನುಮಸಾಗರದ ಮೆದಿಕೇರಿ ಆರ್ಟ್ ಗ್ಯಾಲರಿಯ ನಿಪುಣ ಕಲಾವಿದರು ಸೃಜನಾತ್ಮಕವಾಗಿ ಚಿತ್ರಗಳನ್ನು ರಚಿಸುತ್ತಿದ್ದಾರೆ. | Kannada Prabha

ಸಾರಾಂಶ

ಪ್ರಾಥಮಿಕ ಹಂತದಲ್ಲಿರುವ ಮಕ್ಕಳಿಗೆ ದೃಶ್ಯಮಾಧ್ಯಮಗಳ ಮೂಲಕ ಕಲಿಕೆ ಹೆಚ್ಚು ಪರಿಣಾಮಕಾರಿ ಎಂಬ ಉದ್ದೇಶದಿಂದ, ಎಲ್ಲ ಕೋಣೆಯನ್ನು ವಿಷಯಾಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ.

ಏಕನಾಥ ಜಿ. ಮೆದಿಕೇರಿ ಹನುಮಸಾಗರ

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಬಾಲಕರ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ನಾಲ್ಕು ತರಗತಿ ಕೊಠಡಿಗಳನ್ನು ಸಂಪೂರ್ಣವಾಗಿ ನವೀಕರಿಸಿ (ತ್ರಿಡಿ) ಪೇಂಟಿಂಗ್‌ಗಳ ಮೂಲಕ ಆಕರ್ಷಕ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲಾಗಿದೆ.

ಈ ವಿನೂತನ ಪ್ರಯತ್ನ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಜತೆಗೆ ಪಾಠಗಳನ್ನು ಸುಲಭವಾಗಿ ಕಲಿಯಲು ಸಹಕಾರಿಯಾಗುತ್ತಿದೆ.

ಪ್ರಾಥಮಿಕ ಹಂತದಲ್ಲಿರುವ ಮಕ್ಕಳಿಗೆ ದೃಶ್ಯಮಾಧ್ಯಮಗಳ ಮೂಲಕ ಕಲಿಕೆ ಹೆಚ್ಚು ಪರಿಣಾಮಕಾರಿ ಎಂಬ ಉದ್ದೇಶದಿಂದ, ಎಲ್ಲ ಕೋಣೆಯನ್ನು ವಿಷಯಾಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಅಭ್ಯಾಸದಿಂದ ಹಿಡಿದು ವೈಯಕ್ತಿಕ ಸಂಬಂಧದ ಬಗ್ಗೆ ಅರಿವು ಮೂಡಿಸುವ ಚಿತ್ರಗಳು ಮಕ್ಕಳಲ್ಲಿ ಉತ್ತಮ ಜೀವನಶೈಲಿಯನ್ನು ಬೆಳೆಸಲು ಸಹಾಯ ಮಾಡುತ್ತದೆ.

ಇಂಗ್ಲಿಷ್ ಮೂಲಾಕ್ಷರಗಳು (A-Z), ಸಂಯುಕ್ತಾಕ್ಷರಗಳು ಹಾಗೂ ಪದರಚನೆಗಳನ್ನು ಬಣ್ಣಬಣ್ಣದ ತ್ರಿಡಿ ಚಿತ್ರಗಳನ್ನು ರೂಪಿಸಿದ್ದು, ಮಕ್ಕಳು ಆಟದ ಮಧ್ಯೆ ಕಲಿಯುವಂತಹ ಪರಿಸರ ನಿರ್ಮಾಣವಾಗಿದೆ. ಪ್ರಾಣಿ–ಪಕ್ಷಿಗಳ ಜೀವಂತ ಚಿತ್ರಗಳು ಮಕ್ಕಳಲ್ಲಿ ಪ್ರಕೃತಿಪ್ರೇಮ ಬೆಳೆಸುತ್ತದೆ. ಎಲ್ಲ ಚಿತ್ರಗಳು ಅವರ ಮನಸ್ಸಿನಲ್ಲಿ ಉಳಿಯುವಂತೆ ವಿನ್ಯಾಸಗೊಳಿಸಲಾಗಿದೆ.

ಮನುಷ್ಯನ ದೇಹದ ಅಂಗಾಂಗಗಳ ವಿವರಗಳು ಮತ್ತು ಅವುಗಳ ಕಾರ್ಯಗಳನ್ನು ಸರಳವಾಗಿ ವಿವರಿಸುವ ಚಿತ್ರಗಳು ಮಕ್ಕಳಿಗೆ ಪ್ರಾಥಮಿಕ ಅರಿವು ನೀಡುತ್ತಿವೆ. ಟ್ರಾಫಿಕ್ ಸಿಗ್ನಲ್ ಚಿತ್ರಣದ ಮೂಲಕ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚಿಟ್ಟೆಯ ಜೀವನಚಕ್ರವನ್ನು ಹಂತ ಹಂತವಾಗಿ ತೋರಿಸುವ ಚಿತ್ರಗಳು ವಿಜ್ಞಾನ ವಿಷಯದಲ್ಲಿ ಮಕ್ಕಳ ಕುತೂಹಲ ಹೆಚ್ಚಿಸುತ್ತಿವೆ. ವಂಶಾವಳಿ (ಕುಟುಂಬದ ಮರ) ಚಿತ್ರಣದ ಮೂಲಕ ಸಂಬಂಧಗಳ ಅರಿವು ಸಹ ಸುಲಭವಾಗಿ ಮೂಡಿಸಲಾಗುತ್ತಿದೆ.

ಈ ತ್ರಿಡಿ ಚಿತ್ರಗಳ ಪ್ರಮುಖ ವಿಶೇಷತೆ ಎಂದರೆ, ಮಕ್ಕಳು ಚಿತ್ರಗಳನ್ನು ನೋಡುವುದನ್ನು ಸುಲಭವಾಗಿ ಗ್ರಹಿಸುವಂತಿದೆ. ಬಣ್ಣಗಳ ಸಮನ್ವಯ, ಆಕರ್ಷಕ ವಿನ್ಯಾಸ ಹಾಗೂ ಜೀವಂತ ಚಿತ್ರಗಳು ಮಕ್ಕಳ ತರಗತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡುತ್ತಿವೆ. ಶಿಕ್ಷಕರಿಗೂ ಪಾಠ ಬೋಧನೆ ಸುಲಭವಾಗಿದ್ದು, ಮಕ್ಕಳು ಸಕ್ರಿಯವಾಗಿ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ.

ಈ ಎಲ್ಲ ಆಕರ್ಷಕ ತ್ರಿಡಿ ಚಿತ್ರಗಳನ್ನು ಮೆದಿಕೇರಿ ಆರ್ಟ್ ಗ್ಯಾಲರಿಯ ನಿಪುಣ ಕಲಾವಿದರು ಸೃಜನಾತ್ಮಕವಾಗಿ ರೂಪಿಸಿದ್ದಾರೆ. ಅವರ ಕಲಾತ್ಮಕ ಸ್ಪರ್ಶದಿಂದ ನಾಲ್ಕು ತರಗತಿ ಕೊಠಡಿಗಳು ಸಂಪೂರ್ಣವಾಗಿ ಪರಿವರ್ತನೆಯಾಗಿ, ಮಾದರಿ ಕಲಿಕಾ ಕೇಂದ್ರವಾಗಿ ರೂಪುಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ. 23 ರಂದು ಕುಶಾಲನಗರದಲ್ಲಿ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ
ನಾಪೋಕ್ಲು ಕೊಡವ ಸಮಾಜ ಸಮಾಜಮುಖಿ ಕಾರ್ಯ: ಮುಂಡಂಡ ನಾಣಯ್ಯ