ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮುಂಬರುವ ಜೂ. 23 ರಂದು ಕುಶಾಲನಗರದಲ್ಲಿ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು ಕುಶಾಲನಗರದ ಸರ್ವರೂ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಪರಿಷತ್ತಿನ ಗೌರವ ಅಧ್ಯಕ್ಷರೂ ಆದ ವಿರಾಜಪೇಟೆ ತಾಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕರೆಕೊಟ್ಟರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮುಂಬರುವ ಜೂ. 23 ರಂದು ಕುಶಾಲನಗರದಲ್ಲಿ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು ಕುಶಾಲನಗರದ ಸರ್ವರೂ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಪರಿಷತ್ತಿನ ಗೌರವ ಅಧ್ಯಕ್ಷರೂ ಆದ ವಿರಾಜಪೇಟೆ ತಾಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕರೆಕೊಟ್ಟರು. ಕುಶಾಲನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶರಣ ಸಾಹಿತ್ಯ ಸಮ್ಮೇಳನ ಕೇವಲ ಸಮುದಾಯವೊಂದಕ್ಕೆ ಸೀಮಿತವಾದುದಲ್ಲ. ಇದು ಜನಪರವಾದ ಜೀವಪರವಾದ ಅಭಿವ್ಯಕ್ತಿ. ಸಮ ಸಮಾಜ ನಿರ್ಮಾಣದ ಪರಿಕಲ್ಪನೆಯಾಗಿದೆ. ಹನ್ನೆರಡನೆ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕು ಡೊಂಕುಗಳು - ಮೇಲು ಕೀಳು ಬೇಧಗಳನ್ನು ಬುಡಸಹಿತ ಕಿತ್ತೊಗೆಯಲು ರಚನೆಯಾದ ವಚನಗಳು ಹಾಗೂ ಶರಣ ಸಾಹಿತ್ಯವನ್ನು ಹಳ್ಳಿ - ಪೇಟೆ, ನಗರಗಳ ಪ್ರತಿ ಮನೆ ಮನೆಗಳಿಗೆ ಜನಸಾಮಾನ್ಯರ ಮನ ಮನಕ್ಕೆ ತಲುಪಿಸುವ ಉದ್ದೇಶವೇ ಶರಣ ಸಾಹಿತ್ಯ ಸಮ್ಮೇಳನದ ಮೂಲ ಧ್ಯೇಯ ಎಂದು ಶ್ರೀ ಗಳು ಹೇಳಿದರು.ಸಮ್ಮೇಳನದ ಯಶಸ್ವಿಗೆ ವಿವಿಧ ಸಮಿತಿಗಳನ್ನು ಮಾಡಿಕೊಂಡು ಸಮಯ ಪಾಲನೆಯೊಂದಿಗೆ ಶರಣ ಸಾಹಿತ್ಯ ಸಮ್ಮೇಳನ ರೂಪುಗೊಳ್ಳಬೇಕು ಎಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಇದೇ ಮೊದಲ ಬಾರಿಗೆ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಆಯೋಜನೆಯಾಗುತ್ತಿದ್ದುಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸಬೇಕು.ಸಮಯಪಾಲನೆಗೆ ಒತ್ತು ಕೊಡಬೇಕು. ಕೊಡಗು ಜಿಲ್ಲೆಗೆ ಆಗಮಿಸುವ ಸುತ್ತೂರು ಶ್ರೀಗಳನ್ನು ಅಷ್ಟೇ ಭಕ್ತಿ ಹಾಗೂ ಗೌರವಗಳಿಂದ ಆದರಿಸಿ ಬೀಳ್ಕೊಡಬೇಕಿದೆ ಎಂದರು.
ತೊರೆನೂರು ವಿರಕ್ತ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಜಾತಿ ವರ್ಗಗಳ ಜನರು ಸೇರುವ ಮೂಲಕ ಶರಣ ವಿಚಾರಗಳನ್ನು ಅರಿಯಲು ಉತ್ತಮ ವೇದಿಕೆ ಎಂದರು.ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಎಸ್. ಶಿವಾನಂದ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ.ಎಸ್.ಮಹೇಶ್, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ, ಕುಶಾಲನಗರ ತಾಲೂಕು ಅಧ್ಯಕ್ಷೆ ಹೇಮಲತಾ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಕ್ಕೆ ಮೋಹನ್, ಉಪಾಧ್ಯಕ್ಷ ಕೆ.ಜಿ.ರಾಜಶೇಖರ, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ, ಮತ್ತಿತರರು ಇದ್ದರು.