ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಸಹವಾಸ ದೋಷದಿಂದ ಆರಂಭವಾಗುವ ಕೆಲವೊಂದು ಅಭ್ಯಾಸಗಳು ಚಟವಾಗಿ ಮಾರ್ಪಟ್ಟು ನಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳುವವರೆಗೆ ನಮಗೆ ಆ ವಿಷವರ್ತುಲದ ಅರಿವೆ ಆಗುವುದಿಲ್ಲ, ಅಂತಹ ಚಟಗಳಲ್ಲಿ ಮಾದಕ ವಸ್ತುಗಳ ಸೇವನೆ ಮೊದಲ ಸ್ಥಾನದಲ್ಲಿದ್ದು ಅದನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ನಾವೆಲ್ಲರೂ ಪಣತೊಡಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ.

ಭಾನುವಾರ ಸಂಜೆ ಸುಂಟಿಕೊಪ್ಪ ಸಲಾಫಿ ಮಸೀದಿ ಆವರಣದಲ್ಲಿ ಕೊಡಗು ಜಿಲ್ಲಾ ವಿಸ್‌ಡಂ ಇಸ್ಲಾಮಿಕ್ ಆರ್ಗನೈಷಶನ್ ಸಂಸ್ಥೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸ್ವತಃ ವೈದ್ಯನಾಗಿರುವ ನಾನು ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪರಿಣಾಮಗಳಿಂದ ಚಿಕಿತ್ಸೆಗೆ ಒಳಗಾಗಿರುವ ಮತ್ತು ಆಸ್ಪತ್ರೆಗೆ ಸೇರಿರುವ ಆನೇಕರನ್ನು ನೋಡಿದ್ದೇನೆ. ದುರದೃಷ್ಟಕರ ವಿಚಾರವೆಂದರೇ ಒಂದು ಸಲ ರುಚಿ ನೋಡೊಣ ಎಂದು ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದರೆ ನಂತರ ಮಾದಕ ವಸ್ತುಗಳೇ ನಮ್ಮನ್ನು ತಿಂದು ಹಾಕುತ್ತದೆ ಎಂದರು. ಮಾದಕ ವಸ್ತುಗಳ ಚಟ ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ಅವುಗಳ ದಾಸರನ್ನಾಗಿಸಿ ಮಾಡಿ ಬಿಡುತ್ತದೆ. ಸಣ್ಣದಾಗಿ ಶುರುವಾಗುವ ಈ ಅಭ್ಯಾಸವು ಬೃಹತ್ ಕಾಯಿಲೆಯಾಗಿ ಮಾರ್ಪಟ್ಟು ಕುಟುಂಬ ಕಂಟಕವಾಗಿ ಪರಿಣಾಮಿಸಿ ವಿನಾಶಕ್ಕೆ ನಾಂದಿ ಹಾಡುತ್ತದೆ. ಪೋಷಕರು ಶಿಕ್ಷಕರು ಸಮಾಜ ಸೇವಕರು ಮತ್ತು ಪೊಲೀಸರು ಈ ಬಗ್ಗೆ ತೀವ್ರ ನಿಗಾವಹಿಸಬೇಕೆಂದು ಕರೆ ನೀಡಿದ ಅವರು ಪೊಲೀಸರು ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು. ಮಾದಕ ವಸ್ತುಗಳ ಸೇವನೆ ಪತ್ತೆ ಹಚ್ಚುವಿಕೆ ಹಾಗೂ ಕಾನೂನಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತನ್ನ ಸಂಪೂರ್ಣ ಸಹಕಾರ ಇದೆ ಎಂದು ಡಾ.ಮಂತರ್ ಗೌಡ ನುಡಿದರು. ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ಕುಶಾಲನಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ತಂದೆ ತಾಯಿಗಳು ತಮ್ಮ ಮಕ್ಕಳನ್ನು ತಪ್ಪಸ್ಸಿನಂತೆ ಸಾಕುತ್ತಾರೆ. ತಾವು ಸಾಧಿಸಲಾಗದನ್ನು ತಮ್ಮ ಮಕ್ಕಳು ಸಾಧಿಸಲೆಂದು ಅವರನ್ನು ಹೆಗಲ ಮೇಲೆ ಹೊತು ನಡೆಯುತ್ತಾರೆ. ಆದರೆ ಮಕ್ಕಳು ತಂದೆ ತಾಯಿಗಳ ಕನಸ್ಸಿಗೆ ಕೊಳ್ಳಿಇಟ್ಟು ಮಾದಕ ವಸ್ತುಗಳ ಜಾಲಕ್ಕೆ ಸಿಲುಕಿ ಭವಿಷ್ಯವನ್ನೇ ನಾಶ ಮಾಡಿಕೊಳ್ಳುತ್ತಾರೆಂದು ವಿ.ಪಿ.ಶಶಿಧರ್ ಹೇಳಿದರು.

ಕಾರ್ಯಕ್ರಮದಲ್ಲಿ ಉಸೈನ್ ಶಾಲಾಫಿ ಶಾರ್ಜ, ಶಿಯಾಬ್ ಎಡತ್ತಾರ, ಡಾ.ಅಬ್ದುಲಾ ಬಸಿಲ್, ಅನಿಲ್ ತಲಾಪಾಡಿ ಮುಖ್ಯ ಭಾಷಣಕಾರರಾಗಿ ಡ್ರಗ್ಸ್ ಮುಕ್ತರಾಗೋಣ, ನಮ್ಮ ಕುಟುಂಬಗಳನ್ನು ರಕ್ಷಿಸೋಣ ಎಂಬ ವಿಷಯದ ಮೇರೆ ಪ್ರವಚನಗಳನ್ನು ನೀಡಿದರು. ಕಾರ್ಯಕ್ರಮದ ಸಂಘಟಕರಾದ ಶಬ್ಬೀರ್, ಹೆಚ್.ಯು.ರಫೀಕ್‌ಖಾನ್ ಡಾ.ಮಂತರ್‌ಗೌಡ ಮತ್ತು ವಿ.ಪಿ.ಶಶಿಧರ್ ಅವರನ್ನು ಗೌರವಿಸಿದರು.


ವೇದಿಕೆಯಲ್ಲಿ ವಿಸ್‌ಡಂ ಇಸ್ಲಮಿಕ್ ಆರ್ಗನೈಷಶನ್ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸ್ವಯಂ ಸೇವಕರು ಪಾಲ್ಗೊಂಡಿದ್ದರು.