ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ನಗರಳ್ಳಿ ಗ್ರಾಮದ ಸುಗ್ಗಿಬನದಲ್ಲಿ ಕೂತಿನಾಡು ಹಗಲು ಸುಗ್ಗಿ ಉತ್ಸವ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಶ್ರೀ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ ಪೂಜೆ ಸಲ್ಲಿಸಿ, ಗ್ರಾಮ ಸುಭಿಕ್ಷೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಸುಗ್ಗಿ ಉತ್ಸವದ ಕೊನೆ ದಿನ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬಿದ್ದಿತು.ನಂತರ ಸುಗ್ಗಿ ಬನದ ಸಮೀಪವಿರುವ ಸುಗ್ಗಿ ರಂಗದಲ್ಲಿ ಪೂರ್ವಜರ ಜೀವನ ಪದ್ಧತಿಯನ್ನು ಬಿಂಬಿಸುವ ನೃತ್ಯ ಪ್ರಕಾರವನ್ನು ಗ್ರಾಮಸ್ಥರು ಅಭಿನಯಿಸಿ, ನೆರೆದಿದ್ದವರನ್ನು ರಂಜಿಸಿದರು. ಅದರಲ್ಲೂ ಕಡವೆ ಬೇಟೆಯಾಡುವ ಅಭಿನಯ ಪೂರ್ವಜರ ಧೈರ್ಯ ಮತ್ತು ಶೂರತ್ವದನ್ನು ಪ್ರತಿಬಿಂಬಿಸುವಂತಿತ್ತು. ಸಾಂಪ್ರಾದಾಯಿಕ ಬಿಳಿ ಕುಪ್ಪಸ ದಟ್ಟಿಯನ್ನು ಧರಿಸಿದ್ದ ಗ್ರಾಮದ ಹಿರಿಯರು, ಬಿಲ್ಲೆ ರಂಗದಲ್ಲಿ ಬಿಲ್ಲನ್ನು ಪ್ರದರ್ಶನ ಮಾಡುತ್ತ ಮಲೆನಾಡು ಸುಗ್ಗಿ ಇತಿಹಾಸವನ್ನು ನೆರೆದಿದ್ದವರಿಗೆ ನಟನೆಯ ಮೂಲಕ ಮನವರಿಕೆ ಮಾಡಿದರು. ಸುಗ್ಗಿ ಕುಣಿತ, ಸುಗ್ಗಿಹಾಡುವದು, ಬಿಲ್ಲು ತೂಗುವದು, ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನಡೆದವು. ಸುಗ್ಗಿ ಬನದಲ್ಲಿ ನವ ದಂಪತಿಗಳು ಈಡುಗಾಯಿ ಒಡೆದು ಕಾಣಿಕೆಯನ್ನು ಸಲ್ಲಿಸಿದರು. ಹರಕೆ ತೀರಿಸುವದು ಮತ್ತು ಹರಕೆ ಮಾಡಿಕೊಳ್ಳುವ ಕಾರ್ಯಗಳು ಸಹ ನಡೆದವು. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯರು, ಕೊತ್ತನಳ್ಳಿ, ಇನಕ ನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡಳ್ಳಿ, ತಡ್ಡಿಕೊಪ್ಪ, ಓಡಳ್ಳಿ ಗ್ರಾಮಗಳ ಮುಖ್ಯಸ್ಥರು ಗ್ರಾಮದೇವತೆಗೆ ಪಟ್ಟ ಒಪ್ಪಿಸಿ, ಸಾಮೂಹಿಕ ಪೂಜೆ ನೆರವೇರಿಸಿದರು. ಸುಗ್ಗಿಕಟ್ಟೆಯ ಮುಖ್ಯ ರಂಗದಲ್ಲಿ ಗ್ರಾಮಸ್ಥರು ಈಡುಗಾಯಿ ಒಡೆದರು. ಅನೇಕ ಭಕ್ತಾದಿಗಳು ಪೂಜೆಯೊಂದಿಗೆ ಅನ್ನದಾನಕ್ಕೆ ಹಣ ನೀಡಿದರು. ಭಕ್ತಾದಿಗಳಿಗೆ ಅನ್ನ ಸಂರ್ಪಣೆ ನಡೆಯಿತು.ನಗರಳ್ಳಿ ಗ್ರಾಮದ ಶ್ರವಣ್, ಸಂದೀಪ್, ಸವಿನ್, ರಚನ್ ಹಳ್ಳಿಯೂರು, ಗಗನ್ ಜಕ್ಕನಳ್ಳಿ, ಶಶಿಕುಮಾರ್ ಹೆಮನಗದ್ದೆ, ದೇವರ ಒಡೆಕಾರರಾಗಿ ಕಾರ್ಯ ನಿರ್ವಹಿಸಿದರು. ರಮೇಶ್, ಪ್ರಕಾಶ್, ಪ್ರಸನ್ನ, ಕುಶಾಲ್, ಲೋಹಿತ್, ದೇವರ ಸೇವೆಕರಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರು.

ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷರಾದ ಕೆ.ಬಿ. ಜಗದೀಶ್, ಉಪಾಧ್ಯಕ್ಷರಾದ ಸಿ. ಎಸ್.ಬೋಪ್ಪಯ್ಯ, ಕಾರ್ಯದರ್ಶಿ ಕೆ. ಯು. ಜಗದೀಶ್, ಖಜಾಂಚಿ ಎನ್.ಬಿ.ಸುರೇಶ್ ನಿರ್ದೇಶಕರಾದ ಬಿ.ಪಿ. ಪ್ರದೀಪ್ ಕುಮಾರ್, ಜಿ. ಆರ್.ಸುರೇಶ್, ರಜಿತ್, ಅಶ್ವತ್.ಕೆ.ಎಂ, ಕೌಶಿಕ್, ಪ್ರಸನ್ನ ಸುಗ್ಗಿಯ ಉಸ್ತುವಾರಿ ವಹಿಸಿದ್ದರು.ನಗರಳ್ಳಿ ಗ್ರಾಮದ ಮೂಲ ದೇವಾಲಯ ನಿರ್ಮಾಣಕ್ಕೆ ರು. 10 ಲಕ್ಷ ಧನ ಸಹಾಯ ಮಾಡಿದ ಉದ್ಯಮಿ ಹಾಗೂ ಚಲನಚಿತ್ರ ನಟ ನಗರಳ್ಳಿ ಅರುಣ್ ಗೌಡ ಮತ್ತು ಸುಗ್ಗಿ ಬನದ ಅಭಿವೃದಿಗ್ಧೆ ರು. 10 ಲಕ್ಷ ಸರ್ಕಾರದಿಂದ ಅನುದಾನ ಕಲ್ಪಿಸಿದ ಶಾಸಕ ಡಾ. ಮಂತರ್‌ಗೌಡ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಅಪ್ಪಚ್ಚು ರಂಜನ್, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ. ಆರ್. ಮುತ್ತಣ್ಣ ಸುಗ್ಗಿ ಉತ್ಸವದಲ್ಲಿ ಭಾಗವಹಿಸಿದ್ದರು.