ಉಡುಪಿ: ಹಿಂದೂ ಧರ್ಮದಲ್ಲಿ ಪ್ರಕೃತಿ ಅರಾಧನೆಗೆ ಹೆಚ್ಚು ಮಹತ್ವವಿದೆ, ಪ್ರಕೃತಿಯ ಮಡಿಲಲ್ಲಿರುವ ಕ್ಷೇತ್ರದಲ್ಲಿ ದೈವಿಶಕ್ತಿ ಹೆಚ್ಚಿರುತ್ತದೆ, ಇಂದ್ರಾಳಿಯ ಈ ಕ್ಷೇತ್ರ ಭಕ್ತ ಮತ್ತು ಭಗವಂತನಿಗೆ ಕೊಂಡಿಯಾಗಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಇಂದ್ರಾಳಿಯ ಇಂದ್ರಾಣಿ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಮುಖ್ಯಪ್ರಾಣ - ನಾಗದೇವರು ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವದಂಗವಾಗಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮುಖ್ಯ ಅತಿಥಿಗಳಾಗಿದ್ದರು. ಕೊಲಕಾಡಿ ವಾದಿರಾಜ ಆಚಾರ್ಯರು ವಿಶೇಷ ಉಪನ್ಯಾಸ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಕುಶಲ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಶೋಭಾ ಡಿ. ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು. ವೈಭವದಿಂದ ಸಂಪನ್ನ: ನೂತನವಾಗಿ ನಿರ್ಮಿಸಿದ ಗುಡಿಗಳಲ್ಲಿ ಶ್ರೀ ಮುಖ್ಯಪ್ರಾಣ ದೇವರು ಹಾಗೂ ನಾಗದೇವರ ಪುನಃಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವವು ಮಂಗಳವಾರ ಅತ್ಯಂತ ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ವೈಭವದೊಂದಿಗೆ ಸಂಪನ್ನಗೊಂಡಿತು. ನಿತ್ಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಹಸಿರು ಕಾಡಿನ ಮಧ್ಯೆ ಇರುವ ಈ ಕ್ಷೇತ್ರದ ಮೇಲೆ ಜನರ ಭಕ್ತಿಗೆ ದ್ಯೋತಕವಾಗಿತ್ತುಅಚ್ಚುಕಟ್ಟಾದ ವ್ಯವಸ್ಥೆ: ಕ್ಷೇತ್ರಕ್ಕೆ ಹರಿದುಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸ್ವಯಂಸೇವಕರು ವಿಶೇಷ ಮುತುವರ್ಜಿ ವಹಿಸಿದ್ದರು. ವಾಹನ ಪಾರ್ಕಿಂಗ್, ಸರತಿ ಸಾಲು, ದೇವರ ದರ್ಶನ, ತೀರ್ಥ ಪ್ರಸಾದ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ನೂರಾರು ಭಜನಾ ತಂಡಗಳ ಸಂಕೀರ್ತನೆಯು ಈ ಪ್ರದೇಶದಲ್ಲಿ ಅನನ್ಯ ಭಕ್ತಿಯ ವಾತಾವರಣವನ್ನು ಸೃಷ್ಟಿಸಿತ್ತು.