13,14ರಂದು ಕೊಲ್ಕೊತ್ತಾದಲ್ಲಿ ವಿದ್ಯುತ್ ನೌಕರರ 3ನೇ ಅಖಿಲ ಭಾರತ ಸಮ್ಮೇಳನ

KannadaprabhaNewsNetwork |  
Published : Dec 09, 2025, 01:15 AM IST
ಕೊಲ್ಕೊತ್ತಾದಲ್ಲಿ ಡಿಸೆಂಬರ್ 13 ಮತ್ತು 14 ರಂದು ಆಲ್‌ ಇಂಡಿಯಾ ಪವರ್‌ಮೆನ್ ಫೆಡರೇಶನ್ ಹಮ್ಮಿಕೊಂಡಿರುವ 3ನೇ ಅಖಿಲ ಭಾರತ ಸಮ್ಮೇಳನದ ಪೋಸ್ಟರ್‌ನ್ನು ಕಾರ್ಮಿಕ ಮುಖಂಡರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಎಐಪಿಎಫ್ ಸಂಘಟನೆ ದೇಶಾದ್ಯಂತ ಕಾಯಂ ಹಾಗೂ ಗುತ್ತಿಗೆ ನೌಕರರ ನ್ಯಾಯೋಚಿತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದೆ ಎಂದು ಎಐಪಿಎಫ್‌ನ ರಾಷ್ಟ್ರೀಯ ಅಧ್ಯಕ್ಷ ಕೆ. ಸೋಮಶೇಖರ್ ತಿಳಿಸಿದರು.

ಬಳ್ಳಾರಿ: ವಿದ್ಯುತ್ ವಲಯ ಹಾಗೂ ವಿದ್ಯುತ್ ನೌಕರರ ಮೇಲೆ ಹೆಚ್ಚುತ್ತಿರುವ ದಾಳಿಗಳ ವಿರುದ್ಧ ದೇಶವ್ಯಾಪಿ ಬಲಿಷ್ಠ ಹೋರಾಟ ಬಲಪಡಿಸಲು, ಪಶ್ಚಿಮ ಬಂಗಾಳದ ಕೊಲ್ಕೊತ್ತಾದ ಮೌಲಾಲಿ ಯುವ ಕೇಂದ್ರದಲ್ಲಿ, ಡಿಸೆಂಬರ್ 13 ಮತ್ತು 14 ರಂದು ಆಲ್‌ ಇಂಡಿಯಾ ಪವರ್‌ಮೆನ್ ಫೆಡರೇಶನ್ (ಎಐಪಿಎಫ್) ನೇತೃತ್ವದಲ್ಲಿ ವಿದ್ಯುತ್ ನೌಕರರ 3ನೇ ಅಖಿಲ ಭಾರತ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಐಪಿಎಫ್‌ನ ರಾಷ್ಟ್ರೀಯ ಅಧ್ಯಕ್ಷ ಕೆ. ಸೋಮಶೇಖರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಪಿಎಫ್ ಸಂಘಟನೆ ದೇಶಾದ್ಯಂತ ಕಾಯಂ ಹಾಗೂ ಗುತ್ತಿಗೆ ನೌಕರರ ನ್ಯಾಯೋಚಿತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿದ್ಯುತ್ ವಲಯದ ಖಾಸಗೀಕರಣ ನೀತಿ ಸೇರಿದಂತೆ ವಿದ್ಯುತ್ ನೌಕರರ ಮೇಲಾಗುತ್ತಿರುವ ಜನವಿರೋಧಿ ಕಾನೂನು ದಾಳಿಗಳನ್ನು ಖಂಡಿಸಿ ರಾಷ್ಟ್ರಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ.

ಕೇಂದ್ರದ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸಬೇಕು. ವಿದ್ಯುತ್ ವಲಯದ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಖಾತ್ರಿಗೊಳಿಸಬೇಕು. ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿ, ಪಿಂಚಣಿಯನ್ನು ಕನಿಷ್ಠ ₹10 ಸಾವಿರಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಎಐಪಿಎಫ್‌ ರಾಷ್ಟ್ರೀಯ ಉಪಾಧ್ಯಕ್ಷ ಸ್ವಪನ್ ಘೋಷ್, ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಸಮರ್ ಸಿನ್ಹಾ, ಅಶೋಕ್ ದಾಸ್ ಅವರು ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುವರು. ಅಧ್ಯಕ್ಷತೆಯನ್ನು ಎಐಪಿಎಫ್ ರಾಷ್ಟ್ರೀಯ ಅಧ್ಯಕ್ಷ ಕೆ. ಸೋಮಶೇಖರ್ ಅವರು ವಹಿಸುವರು. ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದಿಂದ ಸೋಲಾರ್, ವಿಂಡ್, ಕೆಪಿಟಿಸಿಎಲ್ ಹಾಗೂ ಎಸ್ಕಾಮ್ಸ್ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ವಿತರಣೆ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದಕ್ಕೆ ಮುಂದಾಗಿ ವಿದ್ಯುತ್ ಮಸೂದೆ–2025 ಅನ್ನು ಪ್ರಕಟಿಸಿ ಕಾಯ್ದೆ ಮಾಡಲು ಮುಂದಾಗಿದೆ. ಆದರೆ ಹಿಂದೆ ನೌಕರರ ಹಾಗೂ ಜನರ ಪ್ರತಿಭಟನೆಯಿಂದಾಗಿ ವಿದ್ಯುತ್ ಮಸೂದೆ -2022 ಅನ್ನು ಜಾರಿಗೆ ತರಲಾಗಲಿಲ್ಲ. ಹೀಗಾಗಿ, ಆ ಮಸೂದೆ ಕಾಯ್ದೆಯಾಗುವ ಮುನ್ನವೇ ಈಗ ಕೇಂದ್ರ ಸರ್ಕಾರವು ರಾಜ್ಯ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಹಾಗೂ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದೆ. ಇದರ ಗುರಿ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ನೇರವಾಗಿ ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುವುದಾಗಿದೆ. ಕರ್ನಾಟಕ ಸರ್ಕಾರವು ಸಹ ಸ್ಮಾರ್ಟ್ ಮೀಟರ್ ಜಾರಿಗೆ ತಂದು ಖಾಸಗೀರಣಕ್ಕೆ ಭೂಮಿಕೆಯನ್ನು ಸಿದ್ದಪಡಿಸಿದೆ ಎಂದು ಸಂಘಟನೆಯ ಮುಖಂಡರು ಆಪಾದಿಸಿದರು. ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ. ದೇವದಾಸ್, ಎಐಪಿಎಫ್ ಸಂಘಟನೆ ಪ್ರಮುಖರಾದ ಡಾ. ಪ್ರಮೋದ್, ಜಿ. ಸುರೇಶ್, ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕ ಸಂಘದ ಕಿರಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು. ಇದೇ ವೇಳೆ ಸಮ್ಮೇಳನದ ಪೋಷ್ಟರ್‌ನ್ನು ಕಾರ್ಮಿಕ ಮುಖಂಡರು ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಗಾನಂದಗೆ ಯುವ ವಿಜ್ಞಾನ ಪ್ರಶಸ್ತಿ ಪ್ರದಾನ
ಆರೈಕೆದಾರರಿಗೆ ಕಾಸಿಲ್ಲದೇ ಮುಚ್ಚಿದ ಕೂಸಿನ ಮನೆ!