ಸುವರ್ಣ ಸೌಧ ಮೊಗಸಾಲೆಯಲ್ಲಿ ಡಿ.ಕೆ ಆಪ್ತರ ಸಭೆ

KannadaprabhaNewsNetwork |  
Published : Dec 09, 2025, 01:00 AM ISTUpdated : Dec 09, 2025, 10:20 AM IST
Belagavi Suvarna Soudha

ಸಾರಾಂಶ

‘ಸಿದ್ದರಾಮಯ್ಯ ಅವರೇ 5 ವರ್ಷವೂ ಮುಖ್ಯಮಂತ್ರಿ ಅವಧಿ ಪೂರೈಸಲಿದ್ದಾರೆ’ ಎಂಬ ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಹೇಳಿಕೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣದ ಶಾಸಕರು ಮೊಗಸಾಲೆಯಲ್ಲಿ ಪ್ರತ್ಯೇಕ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿತು.

 ವಿಧಾನಸೌಧ :  ‘ಸಿದ್ದರಾಮಯ್ಯ ಅವರೇ 5 ವರ್ಷವೂ ಮುಖ್ಯಮಂತ್ರಿ ಅವಧಿ ಪೂರೈಸಲಿದ್ದಾರೆ’ ಎಂಬ ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಹೇಳಿಕೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಣದ ಶಾಸಕರು ಮೊಗಸಾಲೆಯಲ್ಲಿ ಪ್ರತ್ಯೇಕ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿತು.

‘ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್‌ ಬಳಿ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಹೈಕಮಾಂಡ್‌ ಒಪ್ಪಿಲ್ಲ’ ಎಂದು ಹೇಳಿದ ತಕ್ಷಣ ಶಿವಕುಮಾರ್ ಆಪ್ತ ಶಾಸಕರು ಪ್ರತ್ಯೇಕವಾಗಿ ಚರ್ಚಿಸಿದ್ದಾರೆ. ವಿಧಾನಸಭೆಯ ಮೊಗಸಾಲೆಯಲ್ಲಿ ಶಾಸಕ ಇಕ್ಬಾಲ್‌ ಹುಸೇನ್‌, ನಯನಾ ಮೋಟಮ್ಮ, ದರ್ಶನ್ ಧ್ರುವನಾರಾಯಣ, ಶರತ್‌ ಬಚ್ಚೇಗೌಡ, ರವಿ ಗಣಿಗ, ಮಂಥರ್‌ ಗೌಡ ಸೇರಿ 10ಕ್ಕೂ ಹೆಚ್ಚು ಶಾಸಕರು ಅರ್ಧಗಂಟೆಗೂ ಹೆಚ್ಚು ಇದೇ ವಿಚಾರವಾಗಿ ಚರ್ಚಿಸಿದರು ಎಂದು ತಿಳಿದುಬಂದಿದೆ. 

ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ; ರಾಜಣ್ಣ:

ಒಂದು ವೇಳೆ ನಾಯಕತ್ವ ಬದಲಾವಣೆಗೆ ಹೈಕಮಾಂಡ್‌ ತೀರ್ಮಾನಿಸಿದರೆ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಒಬ್ಬರೇ ಇಲ್ಲ. ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್‌, ಡಾ.ಜಿ.ಪರಮೇಶ್ವರ್‌, ಎಂ.ಬಿ.ಪಾಟೀಲ್ ಹೀಗೆ ಇನ್ನೂ ಹಲವು ಮಂದಿ ಇದ್ದಾರೆ ಎಂದು ಮಾಜಿ ಸಚಿವ, ಶಾಸಕ ಕೆ.ಎನ್‌.ರಾಜಣ್ಣ ಹೊಸ ವರಸೆ ತೆಗೆದಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ನಾಯಕತ್ವ ಬದಲಾವಣೆಗೆ ಹೈಕಮಾಂಡ್‌ ಒಪ್ಪಿಲ್ಲ ಎಂದು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಹೇಳಿಕೆ. ಶಾಸಕಾಂಗ ಪಕ್ಷದಲ್ಲಿ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿಯೇ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡಿರುತ್ತದೆ. ಅದರಂತೆ ಸಿದ್ದರಾಮಯ್ಯ ಅವರನ್ನು 5 ವರ್ಷ ಅವಧಿಗೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 5 ವರ್ಷದವರೆಗೂ ಅವರು ಸಿಎಂ ಆಗಿರುತ್ತಾರೆ ಎಂದು ಹೇಳಿದರು. 

ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ, ಡಿ.ಕೆ.ಶಿವಕುಮಾರ್‌ ಒಬ್ಬರೇ ಅನಿವಾರ್ಯ ಅಲ್ಲ. 2013ರಲ್ಲಿ ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ, ಅವತ್ತು ಅವರು ಸೋತಿದ್ದರು, ಈಗಲಾದರೂ ಅವರ ಶ್ರಮವನ್ನು ಪರಿಗಣಿಸಬೇಕಲ್ವಾ? ಅದೇ ರೀತಿ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ಎಚ್‌.ಕೆ.ಪಾಟೀಲ್‌, ಎಂ.ಬಿ.ಪಾಟೀಲ್‌ ಸೇರಿದಂತೆ ಇನ್ನು ಅನೇಕ ಜನ ಸಿಎಂ ಸ್ಥಾನಕ್ಕೆ ಅರ್ಹರಾದವರಿದ್ದಾರೆ ಎಂದರು. 

ಅಧಿವೇಶನದ ಬಳಿಕ ಸಿಎಂ, ಡಿಸಿಎಂಗೆ ಹೈಕಮಾಂಡ್‌ಗೆ ಬುಲಾವ್‌ ನೀಡಲಿದೆ ಎನ್ನಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಎಲ್ಲಾ ಪಕ್ಷದಲ್ಲೂ ಬದಲಾವಣೆ ನಿರಂತರವಾಗಿ ಆಗುತ್ತಿರುತ್ತದೆ. ಬಿಜೆಪಿಯಲ್ಲಿ ಏನು ಎಲ್ಲಾ ಸರಿಯಾಗಿದೆಯಾ?  ಅಲ್ಲೂ ಬಿ.ಪಿ.ಹರೀಶ್‌, ರಮೇಶ್‌ ಜಾರಕಿಹೊಳಿ ಮತ್ತಿತರರು ದೆಹಲಿಗೆ ಹೋಗಿ ಅವರ ರಾಜ್ಯಾಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿದ್ದಾರಲ್ಲ. ಹಾಗೆ ನಮ್ಮ ಪಕ್ಷದಲ್ಲೂ ಇರಬಹುದು. 

ಈ ನಾಯಕತ್ವ ಬದಲಾವಣೆ ಗೊಂದಲವನ್ನು ಹೈಕಮಾಂಡ್‌ ನಾಯಕರು ಆದಷ್ಟು ಬೇಗ ಪರಿಹರಿಸಬೇಕು. ಇಲ್ಲದೆ ಹೋದರೆ ಸರ್ಕಾರದ ಆಡಳಿತ, ದಕ್ಷತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಒತ್ತಾಯಿಸಿದರು.ಸಚಿವ ಆಗಲ್ಲ:ಒಂದು ವೇಳೆ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆದರೆ ಅವರ ಸಂಪುಟದಲ್ಲಿ ತಾವು ಸಚಿವರಾಗುವುದಿಲ್ಲ ಎಂಬ ಮಾತಿನ ಬಗ್ಗೆ ಕೇಳಿದಾಗ, ಈಗಲೂ ನಾನು ಇದೇ ಮಾತನ್ನೇ ಹೇಳುತ್ತೇನೆ, ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ನಾನು ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿನಾಗುವುದಿಲ್ಲ ಎಂದು ಪುನರುಚ್ಚರಿಸಿದರು. 

ಅಧಿವೇಶನಕ್ಕೆ ಮೊದಲ ದಿನವೇ ಗೈರಾದ ಉಪಮುಖ್ಯಮಂತ್ರಿ ಡಿಕೆಶಿ:

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ತೆಲಂಗಾಣ ರೈಸಿಂಗ್‌ ಗ್ಲೋಬಲ್‌ ಸಮ್ಮಿಟ್‌ನಲ್ಲಿ ಪಾಲ್ಗೊಳ್ಳಬೇಕಾದ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಕಲಾಪಕ್ಕೆ ಗೈರಾಗಿದರು.

ಈ ಕುರಿತು ಹೈದರಾಬಾದ್‌ಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಹೈದರಾಬಾದ್‌ನಲ್ಲಿ ಜಾಗತಿಕ ಸಮ್ಮೇಳನ ನಡೆಯುತ್ತಿದ್ದು, ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಅದಕ್ಕೆ ನಾನು ಮತ್ತು ಕೆಲ ಅಧಿಕಾರಿಗಳು ಪಾಲ್ಗೊಳ್ಳಲಿದ್ದೇವೆ’ ಎಂದು ತಿಳಿಸಿದರು. 

ಉ.ಕ. ಸಮಸ್ಯೆಗೆ ಕೇಂದ್ರ ಉತ್ತರಿಸಲಿ- ಡಿಸಿಎಂ: ಬೆಳಗಾವಿ ಅಧಿವೇಶನ ಕುರಿತಂತೆ ಪ್ರತಿಕ್ರಿಯಿಸಿ, ‘ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕಿದೆ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ನಾನು ರಾಜ್ಯ ಸರ್ಕಾರಕ್ಕೆ ದುಬಾರಿಯಾಗುವ ತೀರ್ಮಾನ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ರೈತರ ಸಮಸ್ಯೆ ಕುರಿತು ಈವರೆಗೆ ಬಾಯಿ ಬಿಟ್ಟಿಲ್ಲ. 

ಬಿಜೆಪಿ ಸಂಸದರು ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದರು. ನೀರಾವರಿ ಸಮಸ್ಯೆ ಕುರಿತ ಪ್ರಶ್ನೆಗೆ ಉತ್ತರಿಸಿ, ನನ್ನ ಅವಧಿಯಲ್ಲಿ ನೀರಾವರಿ ಕ್ಷೇತ್ರದಲ್ಲಿ ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆ ಬೇರೆ ಯಾರೂ ಮಾಡಿಲ್ಲ. ಈ ವಿಚಾರವಾಗಿ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಪ್ರಸ್ತಾಪಿಸಿದರೆ ಉತ್ತರಿಸುತ್ತೇನೆ’ ಎಂದರು. 

ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರ ಕಬ್ಬು- ಮೆಕ್ಕೆಜೋಳ ಖರೀದಿಸಬೇಕು ಎಂದು ಹೇಳುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರದ ಪಾಲೇನು ಎಂದು ಅವರು ತಿಳಿಸಬೇಕು. ಪ್ರತಿಯೊಂದಕ್ಕೂ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೂ, ಈವರೆಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರನ್ನು ಸಂಸದರು ಭೇಟಿ ಮಾಡಿ ಚರ್ಚಿಸಿಲ್ಲ’ ಎಂದು ಹೇಳಿದರು. 

ಸಿಧು ಪತ್ನಿ ಹೇಳಿಕೆಗೆ ಅಸಮಾಧಾನ: ಕಾಂಗ್ರೆಸ್‌ನಲ್ಲಿ ಸಿಎಂ ಆಗಲು 500 ಕೋಟಿ ರು. ನೀಡಬೇಕು ಎಂದು ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್‌ ಕೌರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಆ ರೀತಿ ಹೇಳುವವರನ್ನು ಆಸ್ಪತ್ರೆಗೆ ಸೇರಿಸೋಣ. ಒಳ್ಳೆಯು ಹುಚ್ಚಾಸ್ಪತ್ರೆಗೆ ಸೇರಿಸೋಣ’ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಬಲಿಷ್ಠ ಅಡಿಪಾಯ
ಕಾಂಗ್ರೆಸ್‌ಗೆ ಗಾಂಧಿ ಬಗ್ಗೆ ಮಾತಾಡೋ ನೈತಿಕತೆ ಇಲ್ಲ