ನಾಳೆ ದಾವಣಗೆರೆಗೆ 3ನೇ ಹಂತದ ಜನಾಕ್ರೋಶ ಯಾತ್ರೆ

KannadaprabhaNewsNetwork |  
Published : Apr 20, 2025, 01:52 AM IST
19ಕೆಡಿವಿಜಿ11-ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡ 3ನೇ ಹಂತದ ಜನಾಕ್ರೋಶ ಯಾತ್ರೆ ಏ.21ರಂದು ದಾವಣಗೆರೆ ನಗರಕ್ಕೆ ಆಗಮಿಸಲಿದೆ ಎಂದು ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದ್ದಾರೆ.

- ನಗರಕ್ಕೆ ವಿಜಯೇಂದ್ರ, ಅಶೋಕ, ನಾರಾಯಣಸ್ವಾಮಿ ಮತ್ತಿತರ ನಾಯಕರ ದಂಡು: ರಾಜಶೇಖರ ನಾಗಪ್ಪ ಮಾಹಿತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡ 3ನೇ ಹಂತದ ಜನಾಕ್ರೋಶ ಯಾತ್ರೆ ಏ.21ರಂದು ದಾವಣಗೆರೆ ನಗರಕ್ಕೆ ಆಗಮಿಸಲಿದೆ ಎಂದು ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ವಿಪ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಶ್ರೀರಾಮುಲು, ವಿಪ ವಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ ಇತರರು ಯಾತ್ರೆಯಲ್ಲಿ ಆಗಮಿಸಲಿದ್ದಾರೆ ಎಂದರು.

ನಗರದ ತ್ರಿಶೂಲ್ ಚಿತ್ರ ಮಂದಿರ ಸಮೀಪದ ಅಪೂರ್ವ ಹೋಟೆಲ್ ಬಳಿ ಜನಾಕ್ರೋಶ ಯಾತ್ರೆ ಸ್ವಾಗತಿಸಲಾಗುವುದು. ಅನಂತರ ಶ್ರೀ ಜಯದೇವ ವೃತ್ತದ ಬಳಿ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಸಭೆ ನಂತರ ಅಶೋಕ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ಪಕ್ಷದ ನಾಯಕರ ನೇತೃತ್ವದಲ್ಲಿ ಪಾದಯಾತ್ರೆಯಲ್ಲಿ ತೆರಳಿ, ಮನವಿ ಅರ್ಪಿಸಲಾಗುವುದು ಎಂದು ಹೇಳಿದರು.

ಜನಾಕ್ರೋಶ ಯಾತ್ರೆಗಾಗಿ ಈಗಾಗಲೇ ಪಕ್ಷದಿಂದ ಸರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾತ್ರೆ ಬರುವ ರಸ್ತೆಗಳಲ್ಲಿ ಬಿಜೆಪಿ ಬಾವುಟ, ಬ್ಯಾನರ್, ಬಂಟಿಂಗ್ಸ್‌, ಫ್ಲೆಕ್ಸ್‌ಗಳನ್ನು ಅಳ‍ವಡಿಸಿ, ಅಲಂಕಾರ ಮಾಡಲಾಗುತ್ತಿದೆ. ಜಿಲ್ಲೆಯ ಮುಖಂಡರು, ಕಾರ್ಯಕರ್ತರು, ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ಹಾಲಿ-ಮಾಜಿ ಜನಪ್ರತಿನಿಧಿಗಳು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ರಾಜ್ಯವ್ಯಾಪಿ ಯಾತ್ರೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ದಾವಣಗೆರೆಯಲ್ಲಿ ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಪಾದಯಾತ್ರೆ ವೇಳೆ ಪ್ರತಿಭಟನಾಕಾರರಿಗೆ ಮಜ್ಜಿಗೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ಐರಣಿ ಅಣ್ಣೇಶ, ಧನಂಜಯ ಕಡ್ಲೇಬಾಳ್, ಅನಿಲ ಕುಮಾರ ನಾಯ್ಕ, ರಘು ಅಂಬರಕರ್, ಬಿ.ಎಂ. ಸತೀಶ ಕೊಳೇನಹಳ್ಳಿ, ಎಚ್.ಪಿ. ವಿಶ್ವಾಸ, ಕೊಟ್ರೇಶ ಗೌಡ ಇತರರು ಇದ್ದರು.

- - -

(ಕೋಟ್‌) ಕಾಂಗ್ರೆಸ್‌ನ ತುಘಲಕ್ ಸರ್ಕಾರದ ವಿರುದ್ಧ ಏ.3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 2 ದಿನಗಳ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಅನಂತರ ಏ.7ರಿಂದ ಜನಾಕ್ರೋಶ ಯಾತ್ರೆ 15 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಸಂಚರಿಸಿದೆ. ಇದೀಗ 3ನೇ ಹಂತದ ಯಾತ್ರೆ ದಾವಣಗೆರೆಗೆ ಏ.21ರಂದು ಆಗಮಿಸಲಿದೆ. ನಂತರ ದಾವಣಗೆರೆಯಿಂದ ಯಾತ್ರೆಯು ಹಾವೇರಿಗೆ ತೆರಳಲಿದೆ

- ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ

- - -

-19ಕೆಡಿವಿಜಿ11.ಜೆಪಿಜಿ:

ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ