ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹51.25 ಕೋಟಿ ಮೌಲ್ಯದ 13.26 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ವಶಕ್ಕೆ ಪಡೆದಿದೆ.
ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳ ತಂಡಗಳು ಗೋಮಾಳ, ಹದ್ದುಗಿಡದಹಳ್ಳ, ಮುಫತ್ ಕಾವಲ್, ಸರ್ಕಾರಿ ಕುಂಟೆ, ಶ್ರೀಬಸವಣ್ಣ ದೇವರ ಇನಾಂ, ಗುಂಡು ತೋಪು, ಸರ್ಕಾರಿ ಬೀಳು, ಸರ್ಕಾರಿ ಖರಾಬು ಜಾಗಗಳ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ಉತ್ತರ ತಾಲೂಕಿನ ಕದರನಹಳ್ಳಿ ಗ್ರಾಮದಲ್ಲಿ ₹20 ಕೋಟಿ ರು. ಮೌಲ್ಯದ 3.36 ಎಕರೆ ಸರ್ಕಾರಿ ಗೋಮಾಳ, ಕಡಬಗೆರೆ ಗ್ರಾಮದಲ್ಲಿ 3 ಕೋಟಿ ರು. ಮೌಲ್ಯದ 30 ಗುಂಟೆ ಗೋಮಾಳ, ಕುಕ್ಕನಹಳ್ಳಿ ಗ್ರಾಮದಲ್ಲಿ 3 ಕೋಟಿ ರು. ಮೌಲ್ಯದ 2.27 ಎಕರೆ ಸರ್ಕಾರಿ ಬೀಳು ವಶಪಡಿಸಿಕೊಳ್ಳಲಾಗಿದೆ.
ಕೆ.ಆರ್.ಪುರ ಹೋಬಳಿಯ ಹಗದೂರು ಗ್ರಾಮದಲ್ಲಿ 10 ಕೋಟಿ ರು. ಮೌಲ್ಯದ 1 ಎಕರೆ ಗೋಮಾಳ, ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಒತ್ತುವರಿಯಾಗಿದ್ದ 2.40 ಕೋಟಿ ರು. ಮೌಲ್ಯದ 8 ಗುಂಟೆ ವಿಸ್ತೀರ್ಣದ ಶ್ರೀಬಸವಣ್ಣ ದೇವರ ಇನಾಂ ಜಮೀನು ಒತ್ತುವರಿ ತೆರವು ಮಾಡಲಾಗಿದೆ.
ಕೆಂಗೇರಿ ಹೋಬಳಿಯ ಕಂಬೀಪುರ ಗ್ರಾಮದಲ್ಲಿ 1 ಕೋಟಿ ರು. ಮೌಲ್ಯದ 21 ಗುಂಟೆ ಖರಾಬು ಜಮೀನು, ಉತ್ತರಹಳ್ಳಿ ಹೋಬಳಿಯ ರಾವುಗೋಡ್ಲು ಗ್ರಾಮದಲ್ಲಿ 70 ಲಕ್ಷ ರು. ಮೌಲ್ಯದ 18 ಗುಂಟೆ ಗುಂಡುತೋಪು, ಯಲಹಂಕದ ಬಿ.ಕೆ. ಅಮಾನಿಕರೆ ಗ್ರಾಮದಲ್ಲಿ 5 ಕೋಟಿ ರು. ಮೌಲ್ಯದ 1.07 ಎಕರೆ ಸರ್ಕಾರಿ ಬೀಳು, ಹುತ್ತನಹಳ್ಳಿ ಗ್ರಾಮದಲ್ಲಿ 2.20 ಕೋಟಿ ರು. ಮೌಲ್ಯದ 1 ಎಕರೆ ಸರ್ಕಾರಿ ಜಮೀನು ಮತ್ತು ಹೆಸರುಘಟ್ಟ-2 ಹೋಬಳಿಯ ಕಾಮಾಕ್ಷಿಪುರ ಗ್ರಾಮದಲ್ಲಿ 1.25 ಕೋಟಿ ರು. ಮೌಲ್ಯದ 15 ಗುಂಟೆ ಜಮೀನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.