ಗ್ಯಾಸ್,ಪೆಟ್ರೋಲ್ ಬೆಲೆ ಏರಿಕೆ ಜನ ಸಾಮಾನ್ಯರಿಗೆ ಹೊರೆ: ಶಾಸಕ ಟಿ.ಡಿ.ರಾಜೇಗೌಡ ಟೀಕೆ

KannadaprabhaNewsNetwork |  
Published : Apr 20, 2025, 01:52 AM IST
ನರಸಿಂಹರಾಜಪುರ ಪಟ್ಟಣದ ಅಂಚೆ ಕಚೇರಿಯ ಎದುರು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ನಡೆದ ಪ್ರತಿಭಟನೆ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಕೇಂದ್ರದ ಬಿಜೆಪಿ ಸರ್ಕಾರ ಗ್ಯಾಸ್, ಪೆಟ್ರೋಲ್, ಡೀಸೆಲ್ ಹಾಗೂ ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಮಾನ್ಯರ ಮೇಲೆ ಗದಪ್ರಹಾರ ನಡೆಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದರು

ಯುವ ಕಾಂಗ್ರೆಸ್ ನೇತ್ರತ್ವದಲ್ಲಿ ಪಟ್ಟಣದ ಅಂಚೆ ಕಚೇರಿ ಎದುರು ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೇಂದ್ರದ ಬಿಜೆಪಿ ಸರ್ಕಾರ ಗ್ಯಾಸ್, ಪೆಟ್ರೋಲ್, ಡೀಸೆಲ್ ಹಾಗೂ ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಮಾನ್ಯರ ಮೇಲೆ ಗದಪ್ರಹಾರ ನಡೆಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿದರು.

ಶನಿವಾರ ಬಾಳೆ ಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪಟ್ಟಣದ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು. ಯುವ ಕಾಂಗ್ರೆಸ್ ಘಟಕದವರು ಬಿಜೆಪಿ ಮುಖವಾಡ ಕಳಚುವ ಕೆಲಸ ಮಾಡುತ್ತಿದ್ದಾರೆ. ದೇಶದ ದೊಡ್ಡ, ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿ ಅದರ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹಾಕುವ ಪ್ರಯತ್ನ ಕೇಂದ್ರ ಸರಕಾರದಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲೆ ₹2 ರು. ಅಬಕಾರಿ ಶುಲ್ಕ ಹೆಚ್ಚಿಸಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹50 ರು. ಹೆಚ್ಚಿಸಿದೆ. ಸಿಎನ್.ಜಿ ದರ ವನ್ನೂ ಪ್ರತಿ ಕೆ.ಜಿ.ಗೆ 1ರು. ಹೆಚ್ಚಿಸಿದೆ. ಇವುಗಳ ಬೆಲೆ ಏರಿಕೆಯಿಂದಾಗಿ ಇತರೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆಗಳು ಈಗಾಗಲೇ ಹಣದುಬ್ಬರ ಮತ್ತು ನಿರುದ್ಯೋಗದಿಂದ ಬಳಲುತ್ತಿರುವ ಸಾಮನ್ಯ ಜನರು, ರೈತರು, ದಿನಗೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಹೊರೆಯಾಗಿದೆ ಟೀಕಿಸಿದರು.

ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಕೇಂದ್ರ ಸರ್ಕಾರದ ಅದೀನದಲ್ಲಿರುವ ಇಡಿ, ಸಿಐಡಿ ಯಂತಹ ಸಂಸ್ಥೆಗಳನ್ನು ಕೇಂದ್ರ ಸರಕಾರ ತನ್ನ ಕೈಗೊಂಬೆಯನ್ನಾಗಿಸಿಕೊಂಡು ದೇಶದ ಒಳಿತಿಗಾಗಿ ಧ್ವನಿ ಎತ್ತುತ್ತಿ ರುವ ಕಾಂಗ್ರೆಸ್ ಪಕ್ಷದ ಕೇಂದ್ರದ ನಾಯಕರನ್ನು ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಜನರ ಜೀವ ಉಳಿಸಲು ಹೊರಾಟ ನಡೆಸುತ್ತಿದ್ದರೆ ಬಿಜೆಪಿಯವರು ಹಣ ಮಾಡಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಪಿ.ಆರ್. ಸದಾಶಿವ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ. ಜೋಯಿ, ಜಿಪಂ ಮಾಜಿ ಸದಸ್ಯ ಸುಬ್ರಮಣ್ಯ, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿದರು.

ಮೊದಲು ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ, ದಿಕ್ಕಾರಗಳನ್ನು ಕೂಗಿ ಅಂಚೆ ಕಚೇರಿಯನ್ನು ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಪೋಲಿಸರು ಪ್ರತಿಭಟನಾ ಕಾರರನ್ನು ತಡೆಹಿಡಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದಂಡಿನಮಕ್ಕಿ ಶ್ರೀಜಿತ್, ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್‌ಗೌಡ ಅರಗಿ, ಪ್ರಧಾನ ಕಾರ್ಯದರ್ಶಿ ಎ.ಪಿ.ಅಭಿಲಾಷ್, ಕೌಶಿಕ ಪಾಟೀಲ್, ಮಹಮ್ಮದ್ ತಾಯಿಬ್, ಮಂಜೇಶ್ ಬೀಳುವ, ಅಕ್ಷಿರಾ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿಳಾಲು ಮನೆ ಉಪೇಂದ್ರ, ಎಸ್.ಡಿ.ರಾಜೇಂದ್ರ, ಗ್ಯಾರೆಂಟಿ ಸಮಿತಿ ಇಂದಿರಾನಗರ ರಾಘು, ಅಪೂರ್ವ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ