ಅಂಬೇಡ್ಕರ್‌ರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡಿದೆ-ಮಾಜಿ ಸಚಿವ ಎನ್‌. ಮಹೇಶ

KannadaprabhaNewsNetwork | Published : Apr 20, 2025 1:52 AM

ಸಾರಾಂಶ

ಡಾ. ಬಾಬಾ ಸಾಹೇಬರು ಅಂಬೇಡ್ಕರ್ ಅವರನ್ನು ತುಳಿಯುವ ಕಾರ್ಯವನ್ನು ಕಾಂಗ್ರೆಸ್ ಮಾಡಿದ್ದು ಜಗಜ್ಜಾಹೀರು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು.

ಲಕ್ಷ್ಮೇಶ್ವರ: ಡಾ. ಬಾಬಾ ಸಾಹೇಬರು ಅಂಬೇಡ್ಕರ್ ಅವರನ್ನು ತುಳಿಯುವ ಕಾರ್ಯವನ್ನು ಕಾಂಗ್ರೆಸ್ ಮಾಡಿದ್ದು ಜಗಜ್ಜಾಹೀರು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು.

ಪಟ್ಟಣದ ರಂಭಾಪುರಿ ಜಗದ್ಗುರು ವೀರ ಗಂಗಾಧರ ಸಮುದಾಯ ಭವನದಲ್ಲಿ ಶನಿವಾರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಒಂದು ಸುಡುವ ಮನೆ ಎಂಬ ವಿಷಯದ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಈ ವಿಚಾರ ಗೋಷ್ಠಿ ದೇಶದ ತುಂಬೆಲ್ಲ ನಡೆಯುತ್ತಿದೆ. ಎಪ್ರಿಲ್ 15ರಿಂದ 25ರವರೆಗೆ ವಿಚಾರ ಗೋಷ್ಠಿ ಹಮ್ಮಿಕೊಂಡಿದೆ. ಕಾಂಗ್ರೆಸ್ ಒಂದು ಸುಡುವ ಮನೆ ಎಂಬ ಹೇಳಿಕೆ ಡಾ. ಸಾಹೇಬ ಅವರು ಹೇಳಿಕೆಯಾಗಿದೆ. ಅದರೊಳಗೆ ಹೋದಲ್ಲಿ ನಾವು ಸುಟ್ಟು ಹೋಗುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕನ್ನು ನೀಡುವುದರಲ್ಲಿ ಡಾ.ಬಾಬಾ ಸಾಹೇಬರು ಕೊಡುಗೆ ಅಪಾರ. ದಲಿತರಿಗೆ, ಶೋಷಿತರಿಗೆ ಹಿಂದುಳಿದ ವರ್ಗಗಳ ಜನರಿಗೆ ವಿಶೇಷ ಹಕ್ಕುಗಳನ್ನು ನೀಡುವ ಕಾರ್ಯವನ್ನು ಕಾಂಗ್ರೆಸ್ ತಡೆ‌ಹಿಡಿಯುವ ಕಾರ್ಯ ಮಾಡುತ್ತಿದ್ದಾಗ ಅದನ್ನು ಪ್ರಬಲವಾಗಿ ವಿರೋಧಿಸಿದ್ದು ಡಾ.ಅಂಬೇಡ್ಕರ್ ಅವರು. ಕಾಂಗ್ರೆಸ್ ಡಾ. ಬಾಬಾ ಸಾಹೇಬರಿಗೆ ಅನ್ಯಾಯ ಮಾಡಿದ್ದು ಜಗಜ್ಜಾಹೀರು ಎಂದರು.ಸಂವಿಧಾನ ರಚನಾ ಸಮಿತಿಯ ಸಭೆಗೆ ಬರದಂತೆ ತಡೆಯಲು ಕಾಂಗ್ರೆಸ್ ಹುನ್ನಾರ ನಡೆಸಿತು. ಹಿಂದುಳಿದ ವರ್ಗಗಳು ಮೀಸಲಾತಿ ನೀಡುವಂತೆ ಡಾ.ಬಾಬಾ ಸಾಹೇಬರು ಕಾಯ್ದೆ ಜಾರಿಗೆ ತರುವ ಕಾರ್ಯ ಮಾಡಿದರು. ಮುಸ್ಲಿಮರಿಗೆ ನೀಡುವಷ್ಟು ಪ್ರಾತಿನಿಧ್ಯವನ್ನು ಹಿಂದುಳಿದ ವರ್ಗಗಳ ನೀಡಲು ಕಾಂಗ್ರೆಸ್ ಮನಸು ಮಾಡಲಿಲ್ಲ. ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಾಂತ್ಯ ಸ್ಥಾನ ಮಾನ ಕಾಂಗ್ರೆಸ್ ನೀಡುವುದನ್ನು ಅಂಬೇಡ್ಕರ್ ತಡೆ ಹಿಡಿಯಲು ಪ್ರಯತ್ನಿಸುತ್ತಿದ್ದರು. ಕಾಂಗ್ರೆಸ್ ಹೇಳುತ್ತಿರುವ ಸುಳ್ಳುಗಳಿಗೆ ನಿಜವಾದ ಸತ್ಯ ತಿಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್‌ಗೆ ಬುದ್ಧಿವಂತರು ಬೇಕಿಲ್ಲ. ಹೀಗಾಗಿ ಕಾಂಗ್ರೆಸ್ ಸುಡುವ ಮನೆ ಎಂದು ಅಂಬೇಡ್ಕರ್ ಹೇಳಿದರು.ಕಾಂಗ್ರೆಸ್ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಸೋಲಿಸುವ ಮೂಲಕ ಜೈ ಭೀಮ್ ಎಂದು ಹೇಳುವ ಯಾವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅಸ್ಪೃಶ್ಯತೆಯನ್ನು ಜೀವಂತ ಇಡುವ ಮನಸ್ಥಿತಿ ಕಾಂಗ್ರೆಸ್‌ನಲ್ಲಿ ಇದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸೇತರ ಸರ್ಕಾರ ಗೌರವ ನೀಡಿದ್ದು ಸ್ಮರಣೀಯ. ಕಾಂಗ್ರೆಸ್ ಎಂದೂ ದಲಿತರ ಮೀಸಲಾತಿ ಪರ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಸುಡುವ ಮನೆಯಾಗಿದೆ ಎಂದು ಹೇಳಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಅವರು ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಕಾಂಗ್ರೆಸ್ ಪಕ್ಷವು ಘೋರ ಅನ್ಯಾಯ ಮಾಡಿದೆ. ಡಾ.ಬಾಬಾ ಸಾಹೇಬರು ದೆಹಲಿಯಲ್ಲಿ ನಿಧನ ಹೊಂದಿದಾಗ ಅವರನ್ನು ಹೂಳಲು ಕಾಂಗ್ರೆಸ್ ಜಾಗೆ ನೀಡಲಿಲ್ಲ. ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಕೊಡುವ ಗೌರವವು ನಾಟಕೀಯವಾಗಿದೆ. ಸಂವಿಧಾನಕ್ಕೆ ಅತಿ ಹೆಚ್ಚು ಗೌರವವನ್ನು ಬಿಜೆಪಿ ಕೊಟ್ಟಿದೆ. ಭಾರತದ ಸಂವಿಧಾನವು ಸಾವಿರಾರು ವರ್ಷಗಳ ಹಿಂದೆ ಜಾರಿಯಲ್ಲಿತ್ತು ಎಂದು ರಾಹುಲ್ ಗಾಂಧಿ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಎಸ್ಸಿ ಹಾಗೂ ಎಸ್ಟಿ ಪಂಗಡಗಳಿಗೆ ಮೀಸಲಾದ ಹಣವನ್ನು ಕಾಂಗ್ರೆಸ್ ದುರುಪಯೋಗ ಪಡಿಸಿಕೊಂಡಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.ಹುಬ್ಬಳ್ಳಿಯ ವೈದ್ಯ ಡಾ. ಕ್ರಾಂತಿಕಿರಣ ಮಾತಾನಾಡಿ, ಕಾಂಗ್ರೆಸ್ ಪಕ್ಷವು ಡಾ.ಬಾಬಾ ಸಾಹೇಬರಿಗೆ ಮಾಡಿದ ಅವಮಾನದ ಕುರಿತು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕು. ಈ ವಿಷಯವನ್ನು ಪದೇ ಪದೇ ಚರ್ಚೆ ಮಾಡುವ ಮೂಲಕ ಜನರಿಗೆ ತಲುಪಿಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕಾರ್ಯ ಮಾಡಬೇಕು. ಕಾಂಗ್ರೆಸ್ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂಬ ವಿಚಾರದ ಕುರಿತು ಚರ್ಚೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ಮುಖಂಡ ರವಿ ದಂಡಿನ, ಸುನೀಲ್ ಮಹಾಂತಶೆಟ್ಟರ, ಸಂಘ ಪರಿವಾರದ ವಾದಿರಾಜ ವೇದಿಕೆ ಮೇಲೆ ಉಪಸ್ಥಿತರಿದ್ದರು.ಸಭೆಯಲ್ಲಿ ನವೀನ ಬೆಳ್ಳಟ್ಟಿ, ಗಿರೀಶ ಚೌರಡ್ಡಿ, ಅನೀಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಉಳವೇಶಗೌಡ ಪಾಟೀಲ, ಅಶೋಕ ಶಿರಹಟ್ಟಿ, ನಾಗರಾಜ ಕುಲಕರ್ಣಿ, ಜಾನು ಲಮಾಣಿ, ತಿಮ್ಮರೆಡ್ಡಿ ಅಳವಂಡಿ, ಶಿವಪ್ಪ ಲಮಾಣಿ, ಥಾವರೆಪ್ಪ ಲಮಾಣಿ, ಮಹಾದೇವಪ್ಪ ಅಣ್ಣಿಗೇರಿ, ಪರಮೇಶ ಲಮಾಣಿ, ನಾಗರಾಜ ಲಕ್ಕುಂಡಿ, ನೀಲಪ್ಪ ಹತ್ತಿ, ಶಕ್ತಿ ಕತ್ತಿ ಇದ್ದರು.

Share this article