ಕನ್ನಡಪ್ರಭ ವಾರ್ತೆ ಇಂಡಿ
ಗ್ರಾಮಾಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂಡಿ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ಸಂಪೂರ್ಣ ಬೆಂಬಲ ನೀಡಿದೆ ಎಂದು ಅಧ್ಯಕ್ಷ ಬಸವರಾಜ ರಾವೂರ ತಿಳಿಸಿದರು.ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಅಯೂಬ ನಾಟೀಕಾರ, ಸಿದ್ದು ಡಂಗಾ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ, ಸುನೀಲಗೌಡ ಬಿರಾದಾರ, ಧರ್ಮರಾಜ ಸಾಲೋಟಗಿ, ಅದೃಷ್ಯಪ್ಪ ವಾಲಿ, ಪ್ರಶಾಂತ ಲಾಳಸಂಗಿ, ವಿಜು ರಾಠೋಡ ಬೆಂಬಲ ಸೂಚಿಸಿ ಕೆಲಕಾಲ ಮುಷ್ಕರದಲ್ಲಿ ಪಾಲ್ಗೊಂಡರು. ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ, ಗ್ರಾಮಾಡಳಿತ ನೌಕರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ನೌಕರರು ಸಹನೆ ಕಳೆದುಕೊಳ್ಳುವುದಕ್ಕಿಂತ ಮುಂಚೆ ಎಚ್ಚರಗೊಳ್ಳಬೇಕು ಎಂದರು.
ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬಾಳು ಮುಳಜಿ ಮಾತನಾಡಿ, ಗ್ರಾಮಾಡಳಿತ ಅಧಿಕಾರಿಗಳು ಸಾರ್ವಜನಿಕರು ಹಾಗೂ ರೈತರಿಗೆ ಅತ್ಯಂತ ಹತ್ತಿರವಾದವರು. ಸರ್ಕಾರದ ಯೋಜನೆಗಳು, ಸೌಲಭ್ಯ ಪಡೆಯಬೇಕಾದರೆ ಈ ಅಧಿಕಾರಿಗಳ ಬಳಿಯೇ ಹೋಗಬೇಕು. ಅಧಿಕಾರಿಗಳ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರ ಕೂಡಲೇ ಅವರ ಹೋರಟಕ್ಕೆ ಸ್ಪಂದಿಸಬೇಕು. ವಿಳಂಬ ಮಾಡಿದರೆ ಸರ್ಕಾರದ ವಿರುದ್ಧ ಸಾರ್ವಜನಿಕರು ಹೋರಾಟಕ್ಕೆ ಇಳಿಯುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ರಾವೂರ, ಕಂದಾಯ ಇಲಾಖೆ ಸಂಘದ ತಾಲೂಕಾಧ್ಯಕ್ಷ ಶ್ರೀಕಾಂತ ಪೂಜಾರಿ, ಗೌರವಾಧ್ಯಕ್ಷ ಆರ್.ಬಿ.ಮೂಗಿ, ಕಂದಾಯ ನಿರೀಕ್ಷಕ ಎಚ್.ಎಚ್.ಗುನ್ನಾಪೂರ, ಗ್ರಾ.ಆ.ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ವೈ.ಎಲ್.ಪೂಜಾರಿ, ಚಡಚಣ ಅಧ್ಯಕ್ಷ ಮಾಳು ಹೊಸೂರ, ಉಪಾಧ್ಯಕ್ಷ ಎಸ್.ಎಚ್.ಲಾಳಸಂಗಿ, ಪ್ರ.ಕಾರ್ಯದರ್ಶಿ ಕೆ.ಎಸ್.ಚೌದರಿ, ವಿ.ಎಂ.ಕೋಳಿ, ಜಿ.ಎಂ.ಬಿರಾದಾರ, ಎಸ್.ಎಸ್.ಮೋದಿ, ಎಂ.ಆರ್.ರಾಠೋಡ, ಎಸ್.ಬಿ.ಹಿರೇಬೇನೂರ, ಸಿದ್ದು ಜಂಬಗಿ ಸೇರಿ ಇತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
----ಕೋಟ್....
ಗ್ರಾಮಾಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗೆ ನೀಡುವ ವೇತನ ಶ್ರೇಣಿಯಲ್ಲಿ ನಿಗದಿ ಪಡಿಸುವುದು. ಕಂದಾಯ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಎಲ್ಲಾ ವೃಂದ ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡೆ. ಸೇವಾಸೌಲಭ್ಯ ಸೇರಿ ವಿವಿಧ ಸೌಕರ್ಯ ನೀಡುವಂತೆ ಆಗ್ರಹಿಸಿ ಮುಷ್ಕರ ನಡಸುತ್ತಿದ್ದು, ನಮ್ಮ ಬೇಡಿಕೆಗಳು ಸರ್ಕಾರ ಈಡೇರಿಸುವವರೆಗೆ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ.- ವೈ.ಎಲ್.ಪೂಜಾರಿ, ಅಧ್ಯಕ್ಷರು, ಗ್ರಾ.ಆ.ಅಧಿಕಾರಿಗಳ ಸಂಘ, ಇಂಡಿ
----ಕೋಟ್....
ಕಳೆದ ಬಾರಿ ಮುಷ್ಕರ ನಡೆಸಿದಾಗ 8 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೇರದ್ದರಿಂದ ಮತ್ತೆ ಮುಷ್ಕರ ಆರಂಭಿಸಲಾಗಿದೆ. ಸುಸಜ್ಜಿತ ಕಚೇರಿ, ಮೊಬೈಲ್, ಸಿಯುಜಿ ಸಿಮ್, ಡೆಟಾ, ಲ್ಯಾಪ್‌ಟಾಪ್, ಪ್ರಿಂಟರ್ ವ್ಯವಸ್ಥೆ ಮಾಡಬೇಕು. ತಾಂತ್ರಿಕ ಕೆಲಸಕ್ಕೆ ತಕ್ಕ ವೇತನ, ಪದೋನ್ನತಿ, ಪತಿ-ಪತ್ನಿ ವರ್ಗಾವಣೆ ಪರಿಗಣಿಸಬೇಕು. ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರದ ಕೆಲಸ ಕೃಷಿ, ತೋಟಗಾರಿಕೆ ಇಲಾಖೆಗೆ ವಹಿಸಬೇಕು. ಮ್ಯೂಟೇಶನ್ ಅವಧಿ ವಿಸ್ತರಿಸಬೇಕು. ಪ್ರೋಟೋಕಾಲ್ ಕೆಲಸದಿಂದ ಕೈಬಿಡಬೇಕು. ದಫ್ತರ್ ಹಾಗೂ ಜಮಾಬಂದಿ ರದ್ದುಪಡಿಸಬೇಕು.ಮಾಳು ಹೊಸೂರ, ಅಧ್ಯಕ್ಷರು, ಗ್ರಾ.ಆ.ಅಧಿಕಾರಿಗಳ ಸಂಘ, ಚಡಚಣ
--ಕೋಟ್...
ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು ನ್ಯಾಯಯುತವಾಗಿವೆ. ಸರ್ಕಾರ ಕೂಡಲೆ ಸ್ಪಂದಿಸಬೇಕು. ನೌಕರರ ಹಿತಾಸಕ್ತಿ ಕಾಪಾಡುವುದು ಸರ್ಕಾರದ ಕರ್ತವ್ಯ. ಹೀಗಾಗಿ ಗ್ರಾಮಾಡಳಿತಾಧಿಕಾರಿಗಳ ಬೇಡಿಕೆಗಳನ್ನು ಕೂಡಲೇ ಸರ್ಕಾರ ಈಡೇರಿಸಬೇಕು.- ಬಸವರಾಜ ರಾವೂರ, ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಇಂಡಿ