2024 ವರ್ಷಾಂತ್ಯಕ್ಕೆ 3ನೇ ವಿಶ್ವಹವ್ಯಕ ಸಮ್ಮೇಳನ

KannadaprabhaNewsNetwork |  
Published : Oct 10, 2023, 01:00 AM IST
ಡಾ.ಗಿರಿಧರ ಕಜೆ ಮಾತನಾಡಿದರು | Kannada Prabha

ಸಾರಾಂಶ

ಡಿಸೆಂಬರ್ 2024ರಲ್ಲಿ "3ನೇ ವಿಶ್ವ ಹವ್ಯಕ ಸಮ್ಮೇಳನ " ಆಯೋಜಿಸಲಾಗುವುದು ಎಂದು ಬೆಂಗಳೂರಿನಲ್ಲಿ ನಡೆದ ಹವ್ಯಕ ಮಹಾಸಭೆಯ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಡಾ. ಗಿರಿಧರ ಕಜೆ ಘೋಷಿಸಿದ್ದದಾರೆ.

ಕಾರವಾರ:

ಡಿಸೆಂಬರ್ 2024ರಲ್ಲಿ "3ನೇ ವಿಶ್ವ ಹವ್ಯಕ ಸಮ್ಮೇಳನ " ಆಯೋಜಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಅಮೆರಿಕ, ಸಿಂಗಾಪುರ ಹಾಗೂ ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿಯೂ ಸಮ್ಮೇಳನ ಸಂಘಟಿಸಲು ಆಲೋಚಿಸಲಾಗಿದೆ ಎಂದು ಬೆಂಗಳೂರಿನಲ್ಲಿ ನಡೆದ ಹವ್ಯಕ ಮಹಾಸಭೆಯ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಡಾ. ಗಿರಿಧರ ಕಜೆ ಘೋಷಿಸಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ನಡೆದ "ಅಖಿಲ ಹವ್ಯಕ ಮಹಾಸಭೆ "ಯ 80ನೇ ವರ್ಷದ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವಹವ್ಯಕ ಸಮ್ಮೇಳನದ ಪೂರ್ವಭಾವಿಯಾಗಿ ಹವ್ಯಕ ನ್ಯಾಯವಾದಿಗಳ ಸಮಾವೇಶ, ಹವ್ಯಕ ಮಹಿಳಾ ಸಮಾವೇಶ, ಹವ್ಯಕ ಉದ್ಯಮಿಗಳ ಸಮಾವೇಶ, ಹವ್ಯಕ ಸಂಗೀತ ಉತ್ಸವ, ಹವ್ಯಕ ಯಕ್ಷಗಾನ ಉತ್ಸವ, ಹವ್ಯಕ ವೈದೀಕ ಸಮಾವೇಶ, ಗಾಯತ್ರೀ ಮಹೋತ್ಸವ, ಸಂಸ್ಕಾರೋತ್ಸವ, ಹವ್ಯಕ ಸಾಹಿತ್ಯ - ಭಾಷಾ ಸಮಾವೇಶ, ಕ್ರೀಡೋತ್ಸವ, ಹವ್ಯಕ ಹೈನುಗಾರರ ಸಮಾವೇಶ ಮುಂತಾದವುಗಳು ವರ್ಷಪೂರ್ತಿ ನಡೆಯಲಿದ್ದು, ಸಮಾಜವನ್ನು ಆ ಮೂಲಕ ಜಾಗೃತಗೊಳಿಸಲಾಗುವುದು ಎಂದರು.

ಹವ್ಯಕ ಸಮಾಜ ಜನಸಂಖ್ಯಾದೃಷ್ಟಿಯಲ್ಲಿ ಅತಿಚಿಕ್ಕ ಸಮಾಜವಾದರೂ, ನಾವು ಸಂಘಟಿತವಾದರೆ ಎಲ್ಲವೂ ಸಾಧ್ಯ. ಸಂಘಟನೆಗೆ ಅದ್ಭುತವಾದ ಶಕ್ತಿಯಿದ್ದು, ಇನ್ನಷ್ಟು ಸಂಘಟಿತವಾಗುವ ಮೂಲಕ ಸಮಾಜವನ್ನು ಸಶಕ್ತವಾಗಿಸೋಣ ಎಂದು ಕರೆ ನೀಡಿದರು.

ಅಡಕೆ ಎಲೆಚುಕ್ಕಿ ರೋಗ:

ಅಡಕೆ ಹವ್ಯಕರ ಪಾರಂಪರಿಕ ಕೃಷಿಯಾಗಿದ್ದು, ಪ್ರಸ್ತುತ ಅಡಕೆಗೆ ಎಲೆಚುಕ್ಕಿ ರೋಗ ಕೃಷಿಕರನ್ನು ಬಾಧಿಸುತ್ತಿದೆ. ಸಮಾಜದ ಕಷ್ಟಕ್ಕೆ ಮಹಾಸಭೆ ಸರ್ವದಾ ಸ್ಪಂದಿಸಲಿದ್ದು, ಹವ್ಯಕ ಕೃಷಿಕರ ಸಮಾವೇಶ ಆಯೋಜಿಸಿ, ಕೃಷಿಕರ ಜತೆಗೆ ಕೃಷಿ ವಿಜ್ಞಾನಿಗಳ ಸಂವಾದ ನಡೆಸಿ ಸಮಕಾಲೀನ ಸವಾಲುಗಳಿಗೆ ಉತ್ತರಕಂಡುಕೊಳ್ಳಲು ಪ್ರಯತ್ನಿಸೋಣ ಎಂದರು.

ಹವ್ಯಕ ಮಹಾಸಭೆಯ ಸಮಾಜಮುಖಿ ಕಾರ್ಯ ಗುರುತಿಸಿ ಮಂಜುನಾಥ ಬಿಲ್ಲವ ಅವರು ಭಟ್ಕಳ ಸಮೀಪ ದುರ್ಗಾಪರಮೇಶ್ವರೀ ದೇವಾಲಯ ಸಹಿತವಾದ ಸುಮಾರು ಒಂದು ಎಕರೆ ಜಾಗವನ್ನು ದಾನರೂಪದಲ್ಲಿ ನೀಡಿದ್ದು, ಇಲ್ಲಿ ನವರಾತ್ರಿ ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ ಸಭೆ ನಡೆಸಿ; ಸದಸ್ಯರ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು.

ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ ಖರ್ಚು-ವೆಚ್ಚಗಳ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ್ ಭಟ್ಟ, ಆದಿತ್ಯ ಕಲಗಾರು ಹಾಗೂ ಸಾಗರ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಬೇರೆ ಬೇರೆ ಪ್ರಾಂತಗಳ ನಿರ್ದೇಶಕರು, ಸದಸ್ಯರು ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ