3ನೇ ವಿಶ್ವ ಕನ್ನಡ ಸಮ್ಮೇಳನ; ಸರ್ಕಾರ ದಿನಾಂಕ ಘೋಷಿಸಲಿ

KannadaprabhaNewsNetwork |  
Published : Jan 03, 2025, 12:33 AM IST
2ಕೆಡಿವಿಜಿ3-ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಕಸಾಪ, ಪತ್ರಕರ್ತರ ಸಂಘ, ವರದಿಗಾರರ ಕೂಟ, ರೈತ ಸಂಘ, ಕನ್ನಡಪರ ಹೋರಾಟಗಾರರು ಒಕ್ಕೊರಲಿನಿಂದ ಕುವೆಂಪು ಕನ್ನಡ ಭವನದ ಎದುರು ಘೋಷಣೆ ಕೂಗಿ ಒತ್ತಾಯಿಸುತ್ತಿರುವುದು. | Kannada Prabha

ಸಾರಾಂಶ

ನನೆಗುದಿಗೆ ಬಿದ್ದ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆದಷ್ಟು ಬೇಗನೆ ದಾವಣಗೆರೆಯಲ್ಲಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ಮುಖಾಂತರ ಸಿಎಂ ಭೇಟಿ ಮಾಡಲು ಹಾಗೂ ಸಮ್ಮೇಳನಕ್ಕೆ ಅಗತ್ಯ ಅನುದಾನ ಬಜೆಟ್‌ನಲ್ಲಿ ಮೀಸಲಿಡುವಂತೆ ಹಕ್ಕೊತ್ತಾಯ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ನೇತೃತ್ವದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

- ಏಳೆಂಟು ವರ್ಷದಿಂದ ನನೆಗುದಿಗೆ ಬಿದ್ದ ಸಮ್ಮೇಳನ: ಮುಖಂಡರು

- ಜಿಲ್ಲಾ ಸಚಿವರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗಕ್ಕೆ ನಿರ್ಧಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನನೆಗುದಿಗೆ ಬಿದ್ದ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ಆದಷ್ಟು ಬೇಗನೆ ದಾವಣಗೆರೆಯಲ್ಲಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ ಮುಖಾಂತರ ಸಿಎಂ ಭೇಟಿ ಮಾಡಲು ಹಾಗೂ ಸಮ್ಮೇಳನಕ್ಕೆ ಅಗತ್ಯ ಅನುದಾನ ಬಜೆಟ್‌ನಲ್ಲಿ ಮೀಸಲಿಡುವಂತೆ ಹಕ್ಕೊತ್ತಾಯ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ನೇತೃತ್ವದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ನಗರದ ಕುವೆಂಪು ಕನ್ನಡ ಭವನ ಕಚೇರಿಯಲ್ಲಿ ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆಯಲ್ಲಿ ಸಾಹಿತಿಗಳು, ಪತ್ರಕರ್ತರು, ಸಂಘ-ಸಂಸ್ಥೆಗಳು, ಕನ್ನಡಪರ ಹೋರಾಟಗಾರರ ಪೂರ್ವಭಾವಿ ಸಭೆಯಲ್ಲಿ 3ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಿಸಲು, ಅಗತ್ಯ ಅನುದಾನ ಮೀಸಲಿಡುವಂತೆ ಸಿಎಂ ಹಾಗೂ ಜಿಲ್ಲಾ ಸಚಿವರಿಗೆ ಒತ್ತಾಯಿಸುವ ಕುರಿತಂತೆ ಸುದೀರ್ಘ ಚರ್ಚೆ ನಡೆಸಿ, ಸಲಹೆಗಳ ಪಡೆಯಲಾಯಿತು. ಬಳಿಕ ಅಂತಿಮವಾಗಿ ಜಿಲ್ಲಾ ಸಚಿವರಿಗೆ ಜ.3ರಂದು ಮನವಿ ಅರ್ಪಿಸಲು ಸಹ ನಿರ್ಧರಿಸಲಾಯಿತು.

ಸಮ್ಮೇಳನವನ್ನು ಸರ್ಕಾರವೇ ಘೋಷಣೆ ಮಾಡಿ, ಕೆಲವು ಸಮಿತಿಗಳನ್ನೂ ರಚಿಸಿತ್ತು. ಕಾರಣಾಂತರಿಂದ ಸಮ್ಮೇಳನ ಮುಂದೂಡಲಾಗಿತ್ತು. ಆದರೆ, ಇನ್ನೂ ಸಹ ಸಮ್ಮೇಳನದ ದಿನಾಂಕ ಘೋಷಣೆಯಾಗಿಲ್ಲ.ಮೀ ವಿಚಾರದಲ್ಲಿ ಸಮ್ಮೇಳನಕ್ಕೆ ಹಕ್ಕೊತ್ತಾಯಿಸುವ ಪ್ರಶ್ನೆಯೇ ಇಲ್ಲ. ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಸಮ್ಮೇಳನದ ದಿನಾಂಕ ಘೋಷಣೆ ಮಾಡುವಂತೆ, ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಒತ್ತಾಯಿಸುವುದಷ್ಟೇ ನಾವು ಮಾಡಬೇಕಾದ ಬಾಕಿ ಕೆಲಸ ಎಂಬ ಸಲಹೆ ಎಲ್ಲರಿಂದ ವ್ಯಕ್ತವಾದವು.

ಇದೇ ವೇಳೆ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಮ್ಮೇಳನ ಕ್ರಿಯಾ ಸಮಿತಿ ರಚಿಸಿ, ಅದರ ಮೂಲಕ ಬೇಗನೆ ಸಮ್ಮೇಳನ ನಡೆಸಲು ಒಗ್ಗೂಡಿ ಒತ್ತಾಯಿಸೋಣ. ಕಸಾಪ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆಯಷ್ಟೇ. ಜ.5ರಂದು ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರನ್ನು ಶುಕ್ರವಾರ ಭೇಟಿಯಾಗಿ, ಮನವಿ ಸಲ್ಲಿಸೋಣ. ದಾವಣಗೆರೆಯಲ್ಲೂ ಸಿಎಂಗೆ ಮನವಿ ಅರ್ಪಿಸಿ, ನಂತರ ಬೆಂಗಳೂರಿಗೂ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ನಿಯೋಗ ಹೋಗೋಣ ಎಂದರು.

ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ ಮಾತನಾಡಿ, ಮೈಸೂರಿನಲ್ಲಿ ಪ್ರಥಮ, ಬೆಳಗಾವಿಯಲ್ಲಿ ದ್ವಿತೀಯ ವಿಶ್ವ ಕನ್ನಡ ಸಮ್ಮೇಳನ ಆಗಿವೆ. ಮೊದಲ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ. ಇದೀಗ 3ನೇ ಸಮ್ಮೇಳನ ದಾವಣಗೆರೆಯಲ್ಲಿ ಆಗಬೇಕಾಗಿದೆ. ಅದನ್ನು ದೊಡ್ಡ ಸಂಖ್ಯೆಯಲ್ಲಿ ಸಚಿವರನ್ನು ಭೇಟಿ ಮಾಡಿ, ಒತ್ತಾಯಿಸೋಣ. ಸಂಘ-ಸಂಸ್ಥೆಗಳು, ಕನ್ನಡ ಮನಸ್ಸುಗಳೆಲ್ಲಾ ಸೇರಿಕೊಂಡು, ಸರ್ಕಾರದ ಮೇಲೂ ಒತ್ತಡ ಹೇರೋಣ. ಇಲ್ಲಿ ಸಮ್ಮೇಳನ ಘೋಷಣೆ ಮಾಡಿದ್ದು ಸರ್ಕಾರವೇ. ಈಗ ಅದನ್ನು ಸಂಘಟಿಸಬೇಕಾದ್ದು ಸಹ ಸರ್ಕಾರದ ಬದ್ಧತೆ ಆಗಿದೆ ಎಂದರು.

ವರದಿಗಾರರ ಕೂಟ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಬಿ.ಎನ್. ಮಲ್ಲೇಶ ಮಾತನಾಡಿ, 2017ರಲ್ಲೇ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ 9 ಜನ ಸಮಿತಿ ರಚಿಸಿ, ಸಭೆ ಮಾಡಲಾಗಿತ್ತು. ಅನಂತರ ಸರ್ಕಾರ ಬದಲಾಗಿದ್ದರಿಂದ ಸಮ್ಮೇಳನ ವಿಚಾರ ನನೆಗುದಿಗೆ ಬಿದ್ದಿತು. ಈಗ ಸಮ್ಮೇಳನ ನಡೆಸಬೇಕೆಂಬ ಕೂಗು ಮತ್ತೆ ಎದ್ದಿದೆ. ಇಲ್ಲಿ ಸಮ್ಮೇಳನ ನಡೆಸಲು ಯಾರೂ ತಿರಸ್ಕರಿಸಿಲ್ಲ. ಆದರೆ, ದಿನಾಂಕ ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈಗಾಗಲೇ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಮ್ಮೇಳನ ಇಲ್ಲೇ ಆಗಬೇಕೆಂದು ಹೇಳಿದ್ದಾರೆ. ಸಿಎಂ ಬಳಿ ಹೋಗಲು ಸಚಿವ ಎಸ್.ಎಸ್‌.ಎಂ.ರ ಮನವೊಲಿಸಬೇಕಿದೆ ಎಂದು ಹೇಳಿದರು. p

ರಾಜಧಾನಿಯಾಗಿ ದಾವಣಗೆರೆ:

ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಎಲ್ಲದಕ್ಕಿಂತ ಮುಖ್ಯವಾಗಿ ಜಿಲ್ಲೆ ಮಠಾಧೀಶರಿಂದಲೂ ಸಮ್ಮೇಳನಕ್ಕಾಗಿ ಕೂಗು ಕೇಳಿಬರಬೇಕು. ಎಲ್ಲರ ಒಕ್ಕೊರಲಿನಿಂದ ಧ್ವನಿ ಬಂದಲ್ಲಿ ನಮ್ಮ ಕೂಗಿಗೆ ಮತ್ತಷ್ಟು ಬಲ ಬರಲಿದೆ. ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿವೆ. ಒಂದೇ ವೇಳೆ ಹಾಗೇನಾದರೂ ಆದಲ್ಲಿ ದಾವಣಗೆರೆ ರಾಜ್ಯದ ರಾಜಧಾನಿ ಆಗಲಿ ಎಂಬ ಕೂಗಿಗೂ ವಿಶ್ವ ಕನ್ನಡ ಸಮ್ಮೇಳನವು ದೊಡ್ಡ ಧ್ವನಿಯಾಗಲಿದೆ. ಅಂತಹ ಕೆಲಸಕ್ಕೆ ನಾವೆಲ್ಲರೂ ಒಗ್ಗೂಡಿ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ, ಮನವಿ ಮಾಡೋಣ ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ, ರೈತ ಮುಖಂಡ ಬಲ್ಲೂರು ರವಿಕುಮಾರ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ ಏಕಬೋಟೆ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ಸದಾನಂದ ಹೆಗಡೆ, ಮಂಜುನಾಥ ಗೌರಕ್ಕಳವರ್‌, ವಿ.ಹನುಮಂತಪ್ಪ, ಜಿಗಳಿ ಪ್ರಕಾಶ, ಯಳನಾಡು ಮಂಜುನಾಥ, ಎ.ಫಕೃದ್ದೀನ್, ಕೆ.ಎಸ್‌.ಚನ್ನಬಸಪ್ಪ ಶಂಭು, ರಂಗನಾಥರಾವ್, ಭಾರತಿ, ಬಿಜೆಪಿ ಮುಖಂಡ ಎಚ್.ಎನ್.ಶಿವಕುಮಾರ, ಲೇಖಕಿಯರ ಸಂಘದ ವೀಣಾ ಕೃಷ್ಣಮೂರ್ತಿ, ಸತ್ಯಭಾಮಿ, ಸುಮತಿ ಜಯಪ್ಪ, ರುದ್ರಾಕ್ಷಿ ಬಾಯಿ, ಎ.ಎಸ್.ಸಿದ್ದೇಶ, ರುದ್ರಮುನಿ ಹಿರೇಮಠ, ವಿನಾಯಕ ಜೋಷಿ, ಬಿ.ದಿಳ್ಯಪ್ಪ, ಕೆ.ರಾಘವೇಂದ್ರ ನಾಯರಿ, ರಾಜಶೇಖರ ಗುಂಡಗತ್ತಿ ಇತರರು ಇದ್ದರು.

- - - -2ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವಂತೆ ಕಸಾಪ, ಪತ್ರಕರ್ತರ ಸಂಘ, ವರದಿಗಾರರ ಕೂಟ, ರೈತ ಸಂಘ, ಕನ್ನಡಪರ ಹೋರಾಟಗಾರರು ಒಕ್ಕೊರಲಿನಿಂದ ಕುವೆಂಪು ಕನ್ನಡ ಭವನದ ಎದುರು ಘೋಷಣೆ ಕೂಗಿ ಒತ್ತಾಯಿಸಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ