- ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಪರಿಸರ ದಿನಾಚರಣೆ
ಧ.ಗ್ರಾ.ಯೋಜನೆಯಿಂದ ಕೊಪ್ಪ ಹಾಗೂ ನ.ರಾ.ಪುರ ತಾಲೂಕಿನಲ್ಲಿ 4 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧ.ಗ್ರಾ.ಯೋಜನೆ ಕೃಷಿ ಅಧಿಕಾರಿ ಶಿವಕುಮಾರ್ ತಿಳಿಸಿದರು.
ಗುರುವಾರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಧ.ಗ್ರಾ.ಯೋಜನೆ ಹೊಸ್ಕೆರೆ ಕಾರ್ಯ ಕ್ಷೇತ್ರದಿಂದ ಹಮ್ಮಿ ಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರ ಆಶಯದಂತೆ ಭೂಮಿ ತಾಯಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬ ಧ್ಯೇಯದೊಂದಿಗೆ ಪ್ರತಿ ವರ್ಷ ಪರಿಸರ ಸಂರಕ್ಷಣೆಗೆ ಹಲವಾರು ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ. ರಾಜ್ಯಾದ್ಯಂತ ಕಳೆದ 4 ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಜಾಗೃತಿ ಶಿಬಿರ ಏರ್ಪಡಿಸ ಲಾಗಿದೆ ಎಂದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಜಯಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ, ಧ.ಗ್ರಾ.ಯೋಜನೆಯ ಮೇಲ್ವೀಚಾರಕ ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿಗಳಾದ ವೀಣಾ, ಶಶಿಕಲಾ, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಇದ್ದರು.
ಆಸ್ಪತ್ರೆಯ ಆವರಣದಲ್ಲಿ ಲಿಂಬೆ, ಕರಿಬೇವು. ಕಿತ್ತಲೆ, ಹಲಸು, ಸೀಬೆ,ಬಾದಾಮಿ,ಗೋಡಂಬಿ ಮುಂತಾದ ಗಿಡಗಳನ್ನು ನೆಡಲಾಯಿತು.