ಪಿಜೆ ಬಡಾವಣೆ 4.13 ಎಕರೆಯೂ ವಕ್ಫ್‌ ಆಸ್ತಿಯಂತೆ!

KannadaprabhaNewsNetwork |  
Published : Nov 09, 2024, 01:13 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಉತ್ತರ ಕರ್ನಾಟಕದಲ್ಲಿ ರೈತರು, ಜನಸಾಮಾನ್ಯರು, ಮಠ- ಮಂದಿರಗಳ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ಮಂಡಳಿ, ಸರ್ಕಾರ ಪರಿಗಣಿಸುತ್ತಿದೆ ಎಂಬ ಆತಂಕದ ಕಾರ್ಮೋಡ ಕವಿದಿದೆ. ಇದರ ಮಧ್ಯೆಯೇ ಇದೀಗ ದಾವಣಗೆರೆ ಜಿಲ್ಲಾ ಕೇಂದ್ರದ ಹೃದಯ ಭಾಗದ ಪ್ರತಿಷ್ಟಿತ ಬಡಾವಣೆ, ಪ್ರಮುಖ ವಾಣಿಜ್ಯ ಪ್ರದೇಶದ ಸಾವಿರಾರು ಆಸ್ತಿ ವಕ್ಫ್ ಆಸ್ತಿಯಾದ ಸಂಗತಿ ಅವುಗಳ ಮಾಲೀಕರನ್ನು ಬೆಚ್ಚಿಬೀಳಿಸುತ್ತಿದೆ.

- 1985-86, 2014-16ರಲ್ಲೇ ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಿನಲ್ಲಿದೆ ದಾಖಲೆ

- ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಮುಖಂಡರ ನಿವಾಸ, ಆಸ್ತಿ ಮೇಲೂ ವಕ್ಫ್ ಕರಿಛಾಯೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಉತ್ತರ ಕರ್ನಾಟಕದಲ್ಲಿ ರೈತರು, ಜನಸಾಮಾನ್ಯರು, ಮಠ- ಮಂದಿರಗಳ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ಮಂಡಳಿ, ಸರ್ಕಾರ ಪರಿಗಣಿಸುತ್ತಿದೆ ಎಂಬ ಆತಂಕದ ಕಾರ್ಮೋಡ ಕವಿದಿದೆ. ಇದರ ಮಧ್ಯೆಯೇ ಇದೀಗ ದಾವಣಗೆರೆ ಜಿಲ್ಲಾ ಕೇಂದ್ರದ ಹೃದಯ ಭಾಗದ ಪ್ರತಿಷ್ಟಿತ ಬಡಾವಣೆ, ಪ್ರಮುಖ ವಾಣಿಜ್ಯ ಪ್ರದೇಶದ ಸಾವಿರಾರು ಆಸ್ತಿ ವಕ್ಫ್ ಆಸ್ತಿಯಾದ ಸಂಗತಿ ಅವುಗಳ ಮಾಲೀಕರನ್ನು ಬೆಚ್ಚಿಬೀಳಿಸುತ್ತಿದೆ.

ಮೈಸೂರು ಅರಸರ ಗೌರವಾರ್ಥ ಸ್ಥಾಪನೆಯಾದ ಇಲ್ಲಿನ ಫ್ರಿನ್ಸ್ ಜಯಚಾಮರಾಜೇಂದ್ರ ಬಡಾವಣೆ ಅಂದರೆ ಹೊಸಬರು, ಬಹುತೇಕರಿಗೆ ಅಷ್ಟಾಗಿ ಅರ್ಥವಾಗುವುದಿಲ್ಲ. ಅದೇ ದಾವಣಗೆರೆ ಪಿಜೆ ಬಡಾವಣೆ ಅಂದಾಕ್ಷಣ ಎಲ್ಲರ ಕಿವಿಗೆಳು ನೆಟ್ಟಗಾಗುತ್ತವೆ. ಅಷ್ಟರಮಟ್ಟಿಗೆ ಬಹುಕೋಟಿ ಮೌಲ್ಯದ ಬಡಾವಣೆ, ಶ್ರೀಮಂತ ಬಡಾವಣೆ ಇದು. ಈಗ ಅದೇ ಬಡಾವಣೆಯ ಸುಮಾರು 4.13 ಎಕರೆ ಪ್ರದೇಶವು ವಕ್ಫ್ ಸಂಸ್ಥೆ ಹೆಸರಿನಲ್ಲಿ ನೋಂದಣಿ ಆಗಿರುವುದು ಅಲ್ಲಿನ ಸಾವಿರಾರು ಆಸ್ತಿಗಳ ಮಾಲೀಕರನ್ನು ಕಂಗಾಲಾಗಿಸಿದೆ.

ರೈತರ ಜಮೀನು, ಮಠ- ಮಂದಿರ, ಶಾಲೆಗಳ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ಸೇರ್ಪಡೆಯಾಗಿದ್ದ ಬೇರೆ ಊರುಗಳ ವಿಚಾರ ಮಾಧ್ಯಮಗಳಲ್ಲಿ ಓದಿ, ನೋಡಿ ಬೇಸರ ಹೊರ ಹಾಕುತ್ತಿದ್ದ ಪಿ.ಜೆ. ಬಡಾವಣೆಯ ಜನರಂತೂ ಇದೀಗ ವಕ್ಫ್‌ ಮಂಡಳಿ ಗುಮ್ಮ ಇದೀಗ ತಮ್ಮ ಆಸ್ತಿಗಳ ಬುಡಕ್ಕೇ ಬಂದ ಸಂಗತಿ ಕೇಳಿ ಏನು ಮಾಡಬೇಕೆಂಬುದೇ ತೋಚದಂತಾಗಿದ್ದಾರೆ. ಜನರ ಸ್ವಂತ ಆಸ್ತಿಗಳನ್ನು ವಕ್ಫ್ ಮಂಡಳಿ ಹೆಸರಿನಲ್ಲಿ ಪಹಣಿ, ಇ-ಸ್ವತ್ತಿನ ದಾಖಲೆಗಳಲ್ಲಿ ತೋರಿಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

9 ವರ್ಷಗಳ ಹಿಂದೆ ಪಹಣಿಯಲ್ಲಿ ವಕ್ಫ್ ಮಂಡಳಿ ಆಸ್ತಿಯೆಂದು ಹೆಸರು ಸೇರ್ಪಡೆಯಾಗಿದೆ. ಪಿಜೆ ಬಡಾವಣೆಯ ರಿ.ಸ.ನಂ.53ರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದೆ. ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ ನೋಂದಣಿಯಾಗಿದ್ದು, ದಾಖಲೆಗಳಲ್ಲಿ ಕಂಡುಬರುತ್ತಿದೆ. 2015ರಲ್ಲಿ ಮ್ಯೂಟೇಷನ್ ರಿಜಿಸ್ಟರ್‌, ಕೋರ್ಟ್ ಆದೇಶದಂತೆ ಮ್ಯೂಟೇಷನ್ ಅಂತಾ ದಾಖಲೆಗಳಲ್ಲಿ ಉಲ್ಲೇಖ ಮಾಡಲಾಗಿದೆ. 1985-86ರಲ್ಲಿ ಎಂಆರ್ ನಂಬರ್ 54/85-86ರಡಿ 4.13 ಎಕರೆಯನ್ನು ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆಯೆಂದು ಪಹಣಿಯಲ್ಲಿ ಇರುತ್ತದೆ. ಪಿ.ಜೆ. ಬಡಾವಣೆಯ ಒಂದು ಇಡೀ ಭಾಗವೇ ವಕ್ಫ್ ಹೆಸರಿಗೆ ಹೋಗಿದ್ದು ಹೇಗೆಂಬ ಯಕ್ಷಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.

1940ರಲ್ಲಿ ನಗರಸಭೆ ಹಂಚಿದ್ದ ನಿವೇಶನಳಿವು:

ಪಿ.ಜೆ. ಬಡಾವಣೆಯ ಅಕ್ಕ ಮಹಾದೇವಿ ರಸ್ತೆಯ ಒಂದು ಭಾಗ ಸಂಪೂರ್ಣ ವಕ್ಫ್ ಆಸ್ತಿಯಾಗಿ ದಾಖಲೆಯಲ್ಲಿದೆ. ಆದರೆ, 1940ರಲ್ಲೇ ಆಗಿನ ನಗರಸಭೆಯಿಂದ ಮೈಸೂರು ಅರಸರ ಮೇಲಿನ ಅಭಿಮಾನ, ಗೌರವದಿಂದ ಅದೇ ಅರಸರ ಹೆಸರಿನಲ್ಲಿ ಪಿ.ಜೆ. ಬಡಾವಣೆ ನಿರ್ಮಿಸಲಾಗಿತ್ತು. ಫ್ರಿನ್ಸ್ ಜಯ ಚಾಮರಾಜೇಂದ್ರ ಒಡೆಯರ್ ಹೆಸರಿನಲ್ಲಿ ಆಗ ಬಡಾವಣೆ ನಿರ್ಮಿಸಿ, ಮುಖ್ಯಾಧಿಕಾರಿಗಳೇ ಸರ್ಕಾರದಿಂದ ಅಧಿಕೃತವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ಆಗ ಹಳೇ ಊರಷ್ಟೇ ಇತ್ತು. ಊರಿನ ಅಭಿವೃದ್ಧಿಯ ದೂರದೃಷ್ಟಿಯಿಂದ ನಗರಸಭೆ ನಿರ್ಮಿಸಿದ್ದ ಪಿ.ಜೆ. ಬಡಾವಣೆ ಈಗ ಅತಿ ದುಬಾರಿ ಬಡಾವಣೆಯಾಗಿದೆ. ಅದೇ ದುಬಾರಿ ಬಡಾವಣೆ ಕೆಲ ಭಾಗ ವಕ್ಫ್ ಆಸ್ತಿ ಅಂತಾ ದಾಖಲೆ ತೋರಿಸುತ್ತಿರುವುದು ಸ್ವತಃ ಮಹಾನಗರ ಪಾಲಿಕೆಗೂ ಚಿಂತೆಗೀಡು ಮಾಡಿದೆ.

ಅಕ್ಕ ಮಹಾದೇವಿ ರಸ್ತೆಯ ಗುಂಡಿ ಮಹದೇವಪ್ಪನವರ ಹಳೆಯ ಮನೆಯಿಂದ ಎ.ವಿ. ಕಮಲಮ್ಮ ಕಾಲೇಜಿನವರೆಗೆ, ಅಲ್ಲಿಂದ ಚೇತನ ಹೋಟೆಲ್ ಮುಂಭಾಗದ ರಸ್ತೆಯಿಂದ ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತ, ಅದೇ ರಸ್ತೆಯ ಕೆಳಭಾಗದ ಬರೋಡಾ ಬ್ಯಾಂಕ್‌ವರೆಗೆ ಅಲ್ಲಿಂದ ಶ್ರೀರಾಮ ಮಂದಿರ ದೇವಸ್ಥಾನವರೆಗೆ ಹೀಗೆ ಒಟ್ಟು 4.13 ಎಕರೆ ಜಮೀನು ಇದೀಗ ವಕ್ಫ್ ಆಸ್ತಿಯಾಗಿ ದಾಖಲೆಯಲ್ಲಿ ತೋರಿಸಲಾಗುತ್ತಿದೆ. ವಕ್ಪ್ ಆಸ್ತಿ ಅಂತಾ ದಾಖಲೆ ತೋರಿಸುತ್ತಿರುವ ವ್ಯಾಪ್ತಿಯಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು, ಆಡಳಿತ, ವಿಪಕ್ಷಗಳ ಪ್ರಭಾವಿ ನಾಯಕರು, ಹಾಲಿ ಅಧಿಕಾರಸ್ಥ ರಾಜಕಾರಣಿಗಳ ಮನೆಗಳೂ ಒಳಪಡುತ್ತವೆಂಬುದೇ ಸೋಜಿಗದ ಸಂಗತಿ.

ಯಾರೋ ಅಧಿಕಾರಿ, ನೌಕರರ ಕಣ್ತಪ್ಪಿನಿಂದ ಆದ ಪ್ರಮಾದ ಇದಲ್ಲ. 2015ರಲ್ಲಿ ಮ್ಯೂಟೇಷನ್ ರಿಜಿಸ್ಟರ್‌, ಕೋರ್ಟ್ ಆದೇಶದಂತೆ ಮ್ಯೂಟೇಷನ್ ಅಂತಾ ಉಲ್ಲೇಖವಿದೆ. ಎಂ.ಆರ್. ನಂಬರ್‌ ಅದಲು ಬದಲು ಮಾಡಿ, ಆದೇಶ ಮಾಡಲಾಗಿದೆ. ಇಡೀ ಪಿ.ಜೆ. ಬಡಾವಣೆಯ ಒಂದು ಇಡೀ ಪೂರ್ತಿ ಪ್ರದೇಶವೇ ವಕ್ಫ್ ಆಸ್ತಿ ಅಂತಾ ದಾಖಲೆ ಈಗ ಸದ್ದು ಮಾಡುತ್ತಿದೆ. ನಗರಸಭೆಯಿಂದಲೇ ಈಗ್ಗೆ 84 ವರ್ಷದ ಹಿಂದೆ ಮಂಜೂರಾದ, ಸರ್ಕಾರವೇ ಹಂಚಿಕೆ ಮಾಡಿದ ಜಾಗ ಇವು. ಕೆಎಂಎಫ್ 24 ರಿಜಿಸ್ಟರ್‌, ಆಸ್ತಿ ಅಲಾಟ್‌ಮೆಂಟ್‌ ರಿಜಿಸ್ಟರ್‌, ಎಂಎಆರ್‌-19 ಎಲ್ಲವೂ ಜನರಿಗೆ ಹಂಚಿಕೆಯಾಗಿದ್ದ ನಿವೇಶನಗಳು. ಈಗ ಅದೇ ಪ್ರದೇಶದ ವಿಚಾರ ಬಿರುಗಾಳಿ ಎಬ್ಬಿಸಿರುವುದು ಸುಳ್ಳಲ್ಲ.

ನಗರಸಭೆ ಇದ್ದಾಗ 1940ರಲ್ಲಿ ಅಲಾಟ್ ಮೆಂಟ್‌ ಮಾಡಿದ್ದ ಜಾಗದಲ್ಲಿ ಇದ್ದಕ್ಕಿದ್ದಂತೆ 2014-15ರಲ್ಲಿ ರಿ.ಸ.ನಂ.53ರ ಪಹಣಿಯಲ್ಲಿ ವಕ್ಫ್ ಹೆಸರು ಕಂಡುಬಂದಿದೆ. ಖಬರಸ್ಥಾನ ಸುನ್ನಿ ವಕ್ಫ್‌ ಸಂಸ್ಥೆಯ ಹೆಸರಿನಲ್ಲಿ ಉಪವಿಭಾಗಾಧಿಕಾರಿಗಳ ಆದೇಶದಂತೆ ನೋಂದಣಿಯಾಗಿದೆ ಎನ್ನಲಾಗುತ್ತಿದೆ. ಖಾತೆ ಸಂಖ್ಯೆ 510ರಲ್ಲಿ ರಿ.ಸ. ನಂ.53ರಲ್ಲಿ 4.25 ಎಕರೆಯಲ್ಲಿ 4.13 ಎಕರೆ ಸುನ್ನಿ ವಕ್ಫ್ ಮಂಡಳಿ ಹೆಸರಿಗೆ ಇದ್ದರೆ, 12 ಗುಂಟೆ ಹನುಮಂತಪ್ಪ ಬಿನ್ ತಿಮ್ಮಣ್ಣ ಎಂಬುದಾಗಿದೆ. ಇದು 2015ರಿಂದ ಈಚೆಗಿನದ್ದು ತೋರಿಸುತ್ತದೆ. ಹೀಗೆ ಪ್ರತಿಷ್ಟಿತ ಬಡಾವಣೆಯಲ್ಲಿ ವಕ್ಫ್ ಮಂಡಳಿ ಹೆಸರು ಕಂಡುಬಂದಿರುವುದನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರೂ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

- - - ಬಾಕ್ಸ್-1ಇಂತಹ ಹುಚ್ಚಾಟ ಸಹಿಸಲ್ಲ: ಶಿವಶಂಕರ

ಪಿ.ಜೆ. ಬಡಾವಣೆ ವಕ್ಫ್ ಆಸ್ತಿ ಅನ್ನೋದೇ ಬುದ್ಧಿಗೇಡಿತನ. ಅಧಿಕಾರಿಗಳ ಇಂತಹ ಹುಚ್ಚಾಟವನ್ನು ಹೇಳೋರು, ಕೇಳೋರು ಅಂತಾ ಅಂದುಕೊಂಡಿರಬೇಕು. ರಾಜ್ಯದ ಸಾಮರಸ್ಯ, ಶಾಂತ ವಾತಾವರಣ ಕದಡುವ ಕೆಲಸ ಸರ್ಕಾರ ಮಾಡುತ್ತಿದೆ. ತಕ್ಷಣವೇ ಆದ ಪ್ರಮಾದ ಸರಿಪಡಿಸಲಿ ಎಂದು ಜೆಡಿಎಸ್‌ ಮಾಜಿ ಶಾಸಕ ಹಾಗೂ ಪಿ.ಜೆ. ಬಡಾವಣೆ ನಿವಾಸಿ ಎಚ್.ಎಸ್.ಶಿವಶಂಕರ ಪ್ರತಿಕ್ರಿಯಿಸಿದ್ದಾರೆ.

ಇದ್ದಕ್ಕಿದ್ದಂತೆ ಬಂದು ನಮ್ಮ ಆಸ್ತಿ ಅಂದರೆ ಜನ ದಂಗೆ ಏಳುತ್ತಾರಷ್ಟೇ. 80 ವರ್ಷಕ್ಕೂ ಹಳೇ ಆಸ್ತಿ ಇವು. ಭೂ ಸುಧಾರಣೆ, ಕಂದಾಯ ಇಲಾಖೆ ಕಾನೂನು ಬಗ್ಗೆ ತಜ್ಞರ ಜೊತೆ ಚರ್ಚಿಸಿ, ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರದ ನಡೆ ಕೋಮು ಸಂಘರ್ಷಕ್ಕೆ ದಾರಿ ಆಗಬಾರದು. ಸರ್ಕಾರ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕೇ ಹೊರತು, ಜನರ ಶಾಂತಿ, ನೆಮ್ಮದಿ, ಸಾಮರಸ್ಯ ಕದಡುವ ಕೆಲಸ ಮಾಡಬಾರದು. ಈ ಬಗ್ಗೆ ಜಿಲ್ಲಾ ಸಚಿವರು, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು. ಆಗಿರುವ ಪ್ರಮಾದ ಸರಿಪಡಿಸಿ, ಜನರ ಗೊಂದಲ ನಿವಾರಿಸಬೇಕು. ಜನರು ಯಾವುದೇ ಆತಂಕಪಡಬೇಕಿಲ್ಲ. ನಾವು ನಿಮ್ಮಂದಿಗೆ ಇದ್ದೇವೆ ಎಂದಿದ್ದಾರೆ.

- - - ಬಾಕ್ಸ್-2

* ನಮ್ಮ ಆಸ್ತಿ ಅಂದ್ರೆ ಬಿಟ್ಟು ಕೊಡ್ಬೇಕಾ?: ದಿನೇಶ ಶೆಟ್ಟಿ

ದಾವಣಗೆರೆ ಪಿ.ಜೆ. ಬಡಾವಣೆಯಲ್ಲೇ ನನ್ನ ಮನೆಯೂ ಇದೆ. ಇದು ವಕ್ಫ್ ಆಸ್ತಿ ಅಂದ್ರೆ ಬಿಟ್ಟು ಕೊಡಲಾಗುತ್ತದೆಯೇ? ರಿ.ಸ.ನಂ.53ರಲ್ಲಿ ಸಾಕಷ್ಟು ಜನರ ಆಸ್ತಿ ಇವೆ. 1940ರಲ್ಲೇ ನಗರಸಭೆ ಹಂಚಿಕೆ ಮಾಡಿದ್ದ ನಿವೇಶನಗಳು ಇವು. ನಮ್ಮ ಒಂದು ಇಂಚು ಭೂಮಿಯೂ ವಕ್ಫ್ ಮಂಡಳಿಗೆ ಹೋಗುವುದಿಲ್ಲ ಎಂದು ದೂಡಾ ಅಧ್ಯಕ್ಷ ಹಾಗೂ ಪಿ.ಜೆ. ಬಡಾವಣೆ ನಿವಾಸಿ ದಿನೇಶ ಶೆಟ್ಟಿ ಹೇಳಿದ್ದಾರೆ.

ಯಾರೂ ಭಯಪಡಬೇಕಾಗಿಲ್ಲ. ಏನೂ ಆಗುವುದೂ ಇಲ್ಲ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಈ ಬಗ್ಗೆ ಚರ್ಚಿಸಿ, ಆಗಿರುವ ಪ್ರಮಾದವನ್ನು ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸುತ್ತೇವೆ ಎಂದಿದ್ದಾರೆ.

- - - ಬಾಕ್ಸ್-3

* ಜನರ ಆಸ್ತಿ ಹೇಗೆ ವಕ್ಫ್ ಆಸ್ತಿ ಆಗುತ್ತೆ?: ಪ್ರಸನ್ನ

ದಾವಣಗೆರೆ ಪಿ.ಜೆ. ಬಡಾವಣೆಯ 4.13 ಎಕರೆ ವಕ್ಫ್‌ ಮಂಡಳಿ ಆಸ್ತಿಯಾಗಿ 2015ರಿಂದ ನೋಂದಣಿ ಆಗಿರುವುದನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಅವರಿಗೆ ನಾವೆಲ್ಲಾ ಬಿಜೆಪಿ ಸದಸ್ಯರು, ಪಕ್ಷದ ಮುಖಂಡರು ಹೋಗಿ ಮನವಿ ಸಲ್ಲಿಸಲಿದ್ದೇವೆ. ಒಂದು ವೇಳೆ ಜಿಲ್ಲಾಡಳಿತ, ಸರ್ಕಾರ ಸ್ಪಂದಿಸದಿದ್ದರೆ, ರಾಜ್ಯವ್ಯಾಪಿ ವಕ್ಫ್‌ ಮಂಡಳಿ, ರಾಜ್ಯ ಸರ್ಕಾರವು ರೈತರು, ಜನ ಸಾಮಾನ್ಯರು, ಮಠ ಮಂದಿರಗಳ ಆಸ್ತಿ ಕಬಳಿಸುವುದರ ವಿರುದ್ಧ ಹಮ್ಮಿಕೊಂಡಿರುವ ಹೋರಾಟವನ್ನು ಇಲ್ಲೂ ಆರಂಭಿಸುತ್ತೇವೆ ಎಂದು ಬಿಜೆಪಿ ಯುವ ಮುಖಂಡ ಹಾಗೂ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ತಿಳಿಸಿದ್ದಾರೆ.

ಜನರು, ರೈತರು, ಆಸ್ತಿ ಮಾಲೀಕರು, ಸಣ್ಣಪುಟ್ಟ ಆಸ್ತಿ ಮಾಡಿಕೊಂಡ ಜನಪರವಾಗಿ ನಿಂತು, ದಾವಣಗೆರೆಯಲ್ಲೂ ನಮ್ಮ ಹೋರಾಟ ಶುರು ಮಾಡುತ್ತೇವೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ವಿಚಾರ ಓದಿ, ನೋಡಿ ತಿಳಿಯುತ್ತಿದ್ದೆವು. ಈಗ ನಮ್ಮದೇ ಊರಿನ ಹೃದಯ ಭಾಗದ ಪ್ರದೇಶವನ್ನು ವಕ್ಫ್ ಆಸ್ತಿ ಅಂತಾ ಹೇಳಿದರೆ ಸುಮ್ಮನಿಸರು ಸಾಧ್ಯವೇ? ಸಾವಿರಾರು ಜನರ ಬದುಕಿನ ಪ್ರಶ್ನೆ ಇದು. ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

- - - -(ಫೋಟೋಗಳು ಇವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ