4.5 ಲಕ್ಷ ಅಕ್ರಮ ಪಂಪ್‌ಸೆಟ್‌ ಸಕ್ರಮ: ಸಚಿವ ಕೆ.ಜೆ.ಜಾರ್ಜ್

KannadaprabhaNewsNetwork |  
Published : Nov 27, 2025, 02:30 AM IST
26ಎಚ್‌ಪಿಟಿ1- ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಧನ ಇಲಾಖೆ ಕುರಿತು ಸಚಿವ ಕೆ.ಜೆ.ಜಾರ್ಜ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.  | Kannada Prabha

ಸಾರಾಂಶ

ಆದರೆ, ಇದನ್ನು ಇದೇ ರೀತಿ ಮುಂದುವರಿಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು

ಹೊಸಪೇಟೆ: 4.5 ಲಕ್ಷ ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮವಾಗಿ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ಜೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆದರೆ, ಇದನ್ನು ಇದೇ ರೀತಿ ಮುಂದುವರಿಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ವಿದ್ಯುತ್ ಕಂಬದಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ 500 ಮೀಟರ್‌ಗಿಂತ ಹೆಚ್ಚು ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್ ಬಿ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.30 ಮತ್ತು ರಾಜ್ಯ ಸರ್ಕಾರದ ಶೇ.50 ಸಬ್ಸಿಡಿಯೊಂದಿಗೆ ಸೋಲಾರ್ ವಿದ್ಯುತ್ ಕಲ್ಪಿಸಲಾಗುತ್ತದೆ. ಸೋಲಾರ್ ಪಂಪ್‌ನಿಂದ ಸಾವಿರ ಅಡಿ ವರೆಗೆ ಪಂಪ್ ಮಾಡುವ ಸಾಮರ್ಥ್ಯವಿರುತ್ತದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ಟಿಸಿ ತರಲು ರೈತರಿಂದ ವಾಹನ ತರಿಸುವಂತಿಲ್ಲ:

ರಾಜ್ಯದಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗಾಗಿ ಟಿಸಿ ಬ್ಯಾಂಕ್ ಮತ್ತು ದುರಸ್ತಿ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಸೆಂಟರ್‌ಗಳಿಗೆ ತರುವಾಗ ಹೆಸ್ಕಾಂಗಳಿಂದಲೇ ವಾಹನದ ವ್ಯವಸ್ಥೆ ಮಾಡಿ ಟಿಸಿಯನ್ನು ರೈತರ ಜಮೀನಿನಿಂದ ದುರಸ್ತಿ ಸೆಂಟರ್‌ಗಳಿಗೆ ತರಬೇಕು. ಆದರೆ ಯಾವುದೇ ಕಾರಣಕ್ಕೂ ರೈತರೇ ವಾಹನ ತೆಗೆದುಕೊಂಡು ಹೋಗಿ ದುರಸ್ತಿ ಕೇಂದ್ರಕ್ಕೆ ಟಿಸಿ ತರುವ ಪದ್ಧತಿ ಅನುಸರಿಸಬಾರದು. ಇಂತಹ ಕ್ರಮಗಳು ಕಂಡಬಂದಲ್ಲಿ ಅಂತಹ ಸಿಬ್ಬಂದಿ ಮತ್ತು ಎಂಜಿನಿಯರ್‌ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದರು.

ಹಂಪಿ ವಿವಿಯಲ್ಲಿ ಸೋಲಾರ್:

ಹಂಪಿ ಕನ್ನಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 750 ಎಕರೆ ಜಮೀನು ಇದೆ. ಇಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶವಿದೆ. ಇದರಿಂದ ವಿಶ್ವವಿದ್ಯಾನಿಲಯಕ್ಕೆ ಆದಾಯ ಬರಲಿದೆ. ಇಲ್ಲಿ ಸೋಲಾರ್ ಅಳವಡಿಕೆ ಬಗ್ಗೆ ಕುಲಪತಿ ಚರ್ಚಿಸಿದ್ದಾರೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಕೆಪಿಟಿಸಿಎಲ್ ತಾಂತ್ರಿಕ ತಂಡದವರು ಪರಿಶೀಲನೆ ನಡೆಸುವರು. 25 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 100 ಎಕರೆ ಜಾಗ ಬೇಕಾಗುತ್ತದೆ. ಬಾಡಿಗೆಯಾಗಿ ಪ್ರತಿ ಎಕರೆಗೆ ₹30 ಸಾವಿರ ನೀಡಲು ಅವಕಾಶವಿದೆ ಎಂದರು.

ಕುಸುಮ್ ಸಿ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ‘ಕುಸುಮ್ ಸಿ’ ಯೋಜನೆಯಡಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮತ್ತು ಕಂದಾಯ ಭೂಮಿಯಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸುವುದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಸಂಸದ ಈ.ತುಕಾರಾಂ, ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್‌, ಎಂ.ಪಿ. ಲತಾ, ಕೃಷ್ಣನಾಯ್ಕ, ಗು.ವಿ.ಸ.ಕಂ.ನಿ. ಕಲಬುರಗಿ ಅಧ್ಯಕ್ಷ ಪ್ರವೀಣಕುಮಾರ್ ಹರವಾಳ, ಕ.ವಿ.ಪ್ರ.ನಿ.ನಿ. ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ ಪಾಂಡೆ, ಕ.ವಿ.ಪ್ರ.ನಿ.ನಿ. ಕಲಬುರಗಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜ್ಪೆ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಅಕ್ರಮ ಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ