ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆ ಹಾಗೂ ಅಧೀನ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ 4 ಜೋಡಿಗಳು ಜುಲೈ 13 ರಂದು ನಡೆದ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪುನರ್ಮಿಲನ ಮಾಡಲಾಯಿತು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಅಜಯಕುಮಾರ ಲಮಾಣಿ ಹಾಗೂ ಕಾಜೋಲ ದಂಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಅವರನ್ನು ಜಿಲ್ಲಾ ಕುಟುಂಬ ನ್ಯಾಯಾಲಯದಲ್ಲಿ ಒಂದು ಮಾಡಲಾಯಿತು. ಒಂದಾದ ಜೋಡಿಗಳಿಂದ ಪರಸ್ಪರ ಹಾರ ಹಾಕಿಸಿ ಸಿಹಿ ಪರಸ್ಪರ ತಿನ್ನಿಸಲಾಯಿತು. ಅಜಯಕುಮಾರ ಪರ ರಿಯಾನಾ ಕುಂಟೋಜಿ ವಕೀಲರು ಹಾಗೂ ಕಾಜೋಲ ಪರ ವಕೀಲರಾದ ಜಿ.ಎಸ್.ರಾಠೋಡ ವಕಾಲತು ವಹಿಸಿದ್ದರು. ಬನಹಟ್ಟಿ, ಮುಧೋಳ ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ ತಲಾ ಒಂದು ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಗಳನ್ನು ಒಂದು ಮಾಡಲಾಯಿತು.
ಎಲ್ಲೆಲ್ಲೆ ಎಷ್ಟು ಪ್ರಕರಣ ಇತ್ಯರ್ಥ:ಜಿಲ್ಲಾ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ 7984 ಪೈಕಿ 5815 ಹಾಗೂ ವಾಜ್ಯ ಪೂರ್ವ ಪ್ರಕರಣಗಳಾದ 20,028 ಪೈಕಿ 17,555 ಪ್ರಕರಣ ಸೇರಿ ಒಟ್ಟು 23,370 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು. ಈ ಮೂಲಕ ಒಟ್ಟು ₹ 32.05 ಕೋಟಿ ಪ್ರಕರಣದ ಮೊತ್ತವಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 2288 ಪ್ರಕರಣಗಳ ಪೈಕಿ 1739, ಬೀಳಗಿ ನ್ಯಾಯಾಲಯದಲ್ಲಿ 277 ಪೈಕಿ 229, ಮುಧೋಳ ನ್ಯಾಯಾಲಯದಲ್ಲಿ 692 ಪೈಕಿ 519, ಬನಹಟ್ಟಿ ನ್ಯಾಯಾಲಯದಲ್ಲಿ 1429 ಪೈಕಿ 1004, ಹುನಗುಂದ ನ್ಯಾಯಾಲಯದಲ್ಲಿ 476 ಪೈಕಿ 327, ಇಳಕಲ್ಲ ನ್ಯಾಯಾಲಯದಲ್ಲಿ 501 ಪೈಕಿ 358, ಬಾದಾಮಿ ನ್ಯಾಯಾಲಯದಲ್ಲಿ 1267 ಪೈಕಿ 870 ಹಾಗೂ ಜಮಖಂಡಿ ನ್ಯಾಯಾಲಯದಲ್ಲಿ 1227 ಪೈಕಿ 741 ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಯಿತು.
ಲೋಕ ಅದಾಲತ್‌ನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ರೆಹಮಾನ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮೂಲಿಮನಿ, ಜಿಲ್ಲಾ ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, 1ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಸೇರಿದಂತೆ ನ್ಯಾಯವಾದಿಗಳು ಭಾಗವಹಿಸಿದ್ದರು.ಬಗೆಹರಿಯದ ಪ್ರಕರಣಗಳು ಇತ್ಯರ್ಥ:
ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ಕಳೆದ 12 ವರ್ಷಗಳಿಂದ ಇತ್ಯರ್ಥವಾಗದ ಪ್ರಕರಣವನ್ನು ಬನಹಟ್ಟಿ ತಾಲೂಕು ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಯಿತು. ಸೋರೆಗೊಪ್ಪ ಗ್ರಾಮದ ರಿಸ.ನಂ.20ರಲ್ಲಿ ಒಟ್ಟು ಕ್ಷೇತ್ರದ ಪೈಕಿ ಬಾಕಿ ಉಳಿದ 2.32 ಎಕರೆ ಜಮೀನ ಪೈಕಿ ತಲಾ 1.16 ಎಕರೆ, ರಿ.ಸಂ.186/13ರಲ್ಲಿ 2 ಗುಂಟೆ ಜಮೀನ ಪೈಕಿ ತಲಾ 1 ಗುಂಟೆ, ರಿಸನಂ.443/3ಎರಲ್ಲಿ 3.38 ಎಕರೆ ಪೈಕಿ 1.39 ಎಕರೆಯಂತೆ ಹಂಚಿಕೆ ಮಾಡಿ ಪ್ರಕರಣ ಇತ್ಯರ್ಥಪಡಿಸಲಾಯಿತು. ಜಮಖಂಡಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ 2009ನೇ ವರ್ಷದ ಹಾಗೂ ಮುಧೋಳ ನ್ಯಾಯಾಲಯದಲ್ಲಿ 2010ರಿಂದ ಉಳಿದುಕೊಂಡಿದ್ದ ಪ್ರಕರಣಗಳು ಸಹ ಇತ್ಯರ್ಥಗೊಂಡಿವೆ.-------------------------------------
ಬಾಕ್ಸ್ಪ್ರಕರಣಗಳ ಸೆಟಲ್ಮೆಂಟ್
ಇನ್ನು,ಬ್ಯಾಂಕ್ ಹಾಗೂ ವಿದ್ಯುತ್ ಕಾಯ್ದೆಗೆ ಸಂಬಂಧಿಸಿದ 201 ಪ್ರಕರಣಗಳ ಮೊತ್ತ ₹ 7.8 ಲಕ್ಷ ಹೊಂದಾಣಿಕೆಗೆ ಇತ್ಯರ್ಥಗೊಂಡಿವೆ. ನೀರಿನ ಕರಕ್ಕೆ ಸಂಬಂಧಿಸಿದ 643 ಪೈಕಿ 273ಕ್ಕೆ ₹ 4.02 ಲಕ್ಷ, ಕಂದಾಯ ಇಲಾಖೆಗೆ ಸಂಬಂಧಿಸಿದ 649 ಪೈಕಿ 599 ಪ್ರಕರಣ, ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 11,143 ಪೈಕಿ 11,143ಗಳಿಂದ ₹ 32.84 ಲಕ್ಷ , ಆಸ್ತಿ ತೆರಿಗೆ ಸಂಬಂಧಿಸಿದಂತೆ 5077 ಪೈಕಿ 5077 ಪ್ರಕರಣಗಳಿಂದ ₹4.2 ಕೋಟಿಗೆ ಇತ್ಯರ್ಥಪಡಿಸಲಾಗಿದೆ. ಸಾಲ ವ್ಯವಹಾರಕ್ಕೆ ಸಂಬಂಧಿಸಿದ 672 ಪ್ರಕರಣ ಪೈಕಿ 156 ಪ್ರಕರಣಕ್ಕೆ ₹ 4.82 ಕೋಟಿಗೆ ಸೆಟೆಲ್ಮೆಂಟ್ ಮಾಡಲಾಯಿತು. ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ 1239 ಪೈಕಿ 1120 ಪ್ರಕರಣಕ್ಕೆ ₹ 2.1 ಲಕ್ಷಕ್ಕೆ ಇತ್ಯರ್ಥ ಪಡಿಸಲಾಗಿದೆ.