ಕನ್ನಡಪ್ರಭ ವಾರ್ತ ಬಾಗಲಕೋಟೆ
ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ಶಿಬಿರದಲ್ಲಿ ಜಿಲ್ಲಾ ಕೌಂಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಬಯಸಿದ್ದ 4 ಜೋಡಿಗಳು ಮತ್ತೆ ಒಂದಾಗುವ ಮೂಲಕ ಹೊಸ ಜೀವನ ಆರಂಭಿಸಲು ಅಣಿಯಾದರು.ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇನದಂತೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳು ತಮ್ಮ ವಾಜ್ಯ ಬಗೆಹರಿಸಿಕೊಂಡು ಮತ್ತೆ ಸತಿಪತಿಗಳಾಗಿ ಹೊಸ ಜೀವನ ಶುರು ಮಾಡುವುದಾಗಿ ನಿರ್ಧರಿಸಿದರು. ಜಿಲ್ಲಾ ನ್ಯಾಯಾಲಯದ ವಿವಿಧ ಅಧೀನ ನ್ಯಾಯಾಲಯದಲ್ಲಿಯೂ ಸಹ ವಿಚ್ಛೇದನ ಕೋರಿದ್ದ 5 ಜೋಡಿಗಳು ಸಹ ಒಂದಾಗಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ. ವಿಜಯಅವರ ನೇತೃತ್ವದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಬಾಕಿ ಇರುವ 8253 ಪೈಕಿ 4430 ಹಾಗೂ ವಾಜ್ಯ ಪೂರ್ವ ಪ್ರಕರಣಗಳಲ್ಲಿ 24187 ಪೈಕಿ 22646 ಪ್ರಕರಣ ಸೇರಿ ಒಟ್ಟು 27076 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು. ಅದಾಲತ್ ನಲ್ಲಿ ಒಟ್ಟು ₹64.02 ಕೋಟಿಗಳ ಪ್ರಕರಣದ ಮೊತ್ತವಾಗಿತ್ತು.ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 3420 ಪ್ರಕರಣಗಳ ಪೈಕಿ 1637, ಬೀಳಗಿ ನ್ಯಾಯಾಲಯದಲ್ಲಿ 126 ಪೈಕಿ 83, ಮುಧೋಳ ನ್ಯಾಯಾಲಯದಲ್ಲಿ 542 ಪೈಕಿ 510, ಬನಹಟ್ಟಿ ನ್ಯಾಯಾಲಯದಲ್ಲಿ 1269 ಪೈಕಿ 858, ಹುನಗುಂದ ನ್ಯಾಯಾಲಯದಲ್ಲಿ 341 ಪೈಕಿ 266, ಇಲಕಲ್ಲ ನ್ಯಾಯಾಲಯದಲ್ಲಿ 402 ಪೈಕಿ 319, ಬಾದಾಮಿ ನ್ಯಾಯಾಲಯದಲ್ಲಿ 762 ಪೈಕಿ 474, ಜಮಖಂಡಿ ನ್ಯಾಯಾಲಯದಲ್ಲಿ 975 ಪೈಕಿ 276 ಹಾಗೂ ಎಫ್.ಟಿ.ಎಸ್.ಸಿ ಕೋರ್ಟ್‌ನಲ್ಲಿ 416 ಪೈಕಿ 11 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಬ್ಯಾಂಕಿಗೆ ಸಂಬಂಧಿಸಿದ 1572 ಪೈಕಿ 151 ಪ್ರಕರಣಗಳಿಗೆ ಒಟ್ಟು ₹2.90ಕೋಟಿಗಳಿಗೆ ಇತ್ಯರ್ಥಗೊಂಡರೆ, ವಿದ್ಯುತ್ ಬಿಲ್ ಗೆ ಸಂಬಂಧಿಸಿದ 204 ಪೈಕಿ 204 ಇತ್ಯರ್ಥಗೊಂಡು ₹4.17 ಲಕ್ಷ, ನೀರಿನ ಕರಕ್ಕೆ ಸಂಬಂಧಿಸಿದ 4272 ಪೈಕಿ 4272ಕ್ಕೆ ₹1.91 ಕೋಟಿ ಸಂಚಾರಿ ಉಲ್ಲಂಘನೆಗೆ ಸಂಬಂಧಿಸಿದ 10358 ಪೈಕಿ 10358ಕ್ಕೆ ₹2.11ಕೋಟಿ ಆಸ್ತಿ ತೆರಿಗೆ ಸಂಬಂಧಿಸಿದಂತೆ 7102 ಪೈಕಿ 7102 ಪ್ರಕರಣಗಳನ್ನು ₹ 5.62ಕೋಟಿಗಳಿಗೆ ಇತ್ಯರ್ಥಪಡಿಸಲಾಯಿತು.ಲೋಕ ಅದಾಲತ್ ಶಿಬಿರದಲ್ಲಿ ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶೆ ಹೇಮಾ ಪಸ್ತಾಪೂರ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಮಹೇಶ ಪಾಟೀಲ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ರೆಹಮಾನ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ. ಮೂಲಿಮನಿ, ಮುಖ್ಯ ಪ್ರಧಾನ ನ್ಯಾಯಾಧೀಶ, ಕುಟುಂಬ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, 2ನೇ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ಪ್ರಧಾನ ದಿವಾಣಿ ನ್ಯಾಯಾಧೀಶ ಮುರಘೇಂದ್ರ ತುಬಾಕೆ, ಹೆಚ್ಚುವರಿ ದಿವಾನಿ ನ್ಯಾಯಾಧೀಶ ಪ್ರಶಾಂತ ಚಟ್ನಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.