ಶೌಚಾಲಯ ಹಗರಣ ತನಿಖೆಗೆ 4 ದಿನ ಗಡುವು

KannadaprabhaNewsNetwork |  
Published : Nov 04, 2025, 12:30 AM IST
ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಮನವೊಲಿಸಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ. | Kannada Prabha

ಸಾರಾಂಶ

ಭ್ರಷ್ಟಾಚಾರಕ್ಕೆ ಕಾರಣರಾದ ಪಿಡಿಒ ಹಾಗೂ ಗ್ರಾಪಂ ಆಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ದಿನಗಳ ಕಾಲಮಿತಿ ನೀಡಲಾಗಿದೆ. ಒಂದೂವರೆ ವರ್ಷದಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ.

ಕುಂದಗೋಳ:

ಮೂರು ವರ್ಷಗಳಿಂದ ಭೂ ತರ್ಲಘಟ್ಟ ಗ್ರಾಪಂನಲ್ಲಿ ಗ್ರಾಮಸಭೆ, ವಾರ್ಡ್ ಸಭೆ ನಡೆಸದೆ 600ಕ್ಕೂ ಅಧಿಕ ಶೌಚಾಲಯಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಮದ ನಿವಾಸಿ ಮಂಜುನಾಥ ಮೊರಬದ ತಾಲೂಕು ಪಂಚಾಯಿತಿ ಕಚೇರಿ ಎದುರು ಆರಂಭಿಸಿದ್ದ ಅಹೋರಾತ್ರಿ ಆಮರಣ ಉಪವಾಸ ಸತ್ಯಾಗ್ರಹವನ್ನು ಕಾಂಗ್ರೆಸ್ ಮುಖಂಡರ ಮಧ್ಯಸ್ಥಿಕೆ ಬಳಿಕ ಹಿಂಪಡೆದಿದ್ದಾರೆ.

ಈ ಭ್ರಷ್ಟಾಚಾರಕ್ಕೆ ಕಾರಣರಾದ ಪಿಡಿಒ ಹಾಗೂ ಗ್ರಾಪಂ ಆಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ದಿನಗಳ ಕಾಲಮಿತಿ ನೀಡಲಾಗಿದೆ. ಒಂದೂವರೆ ವರ್ಷದಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಕಳೆದ ತಿಂಗಳು ಧರಣಿ ನಡೆಸಿದ ವೇಳೆ ಭರವಸೆ ಮೇರೆಗೆ ಧರಣಿ ಹಿಂಪಡೆಯಲಾಗಿತ್ತು. ಈ ವರೆಗೂ ಅಧಿಕಾರಿಗಳಿಂದ ಸ್ಪಂದನೆ ದೊರೆಯದ ಹಿನ್ನೆಲೆ ಸೋಮವಾರ ಬೆಳಗ್ಗೆಯಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸ್ಥಳಕ್ಕೆ ಆಗಮಿಸಿದ ಸಿಪಿಐ ಮತ್ತು ಪಿಎಸ್‌ಐ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಅದು ವಿಫಲವಾಯಿತು.

ಭರವಸೆ ಬಳಿಕ ಸತ್ಯಾಗ್ರಹ ಅಂತ್ಯ:

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹಾಗೂ ಗ್ಯಾರಂಟಿ ಯೋಜನಾ ತಾಲೂಕು ಅಧ್ಯಕ್ಷ ಸತೀಶ ಕೊಬ್ಬಯ್ಯನವರ ಪ್ರತಿಭಟನಾ ನಿರತನ ಮನವೊಲಿಕೆಗೆ ಮುಂದಾದರು. ಧರಣಿ ನಿರತ ಮಂಜುನಾಥನ ಬೇಡಿಕೆ ಸ್ವೀಕರಿಸಿ, 4 ದಿನದಲ್ಲಿ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ನಾವು ಸಹ ನಿಮ್ಮೊಟ್ಟಿಗೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ತಕ್ಷಣವೇ ಪಿಡಿಒ ಅವರಿಗೆ ಫೋನ್ ಮೂಲಕ ಸರಿಯಾಗಿ ಕೆಲಸ ನಿರ್ವಹಿಸಲು ಸೂಚನೆ ನೀಡಿದರು ಹಾಗೂ ಇಒ ಅವರಿಗೆ ಈ ಕುರಿತು ಕ್ರಮವಹಿಸಲು ಸೂಚಿಸಿದ ನಂತರ ಮಂಜುನಾಥ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ