ರಾಗಿ ಖರೀದಿ ಕೇಂದ್ರದಲ್ಲಿ 4 ಕೆಜಿ ಗೋಲ್‌ಮಾಲ್‌ !

KannadaprabhaNewsNetwork |  
Published : Mar 07, 2025, 12:50 AM IST
ಖರೀದಿ ಕೇಂದ್ರಕ್ಕೆ ಆಗಮಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ, ತಾ.ಕಾರ್ಯಾಧ್ಯಕ್ಷ ತೋಂಟಾರಾಧ್ಯ, ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಕಾರ್ಯದರ್ಶಿ ಬಾಳೇಗೌಡ ಹಾಗೂ  ರೈತರು | Kannada Prabha

ಸಾರಾಂಶ

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಸರಕಾರಿ ಸಿಬ್ಬಂದಿ ರೈತರಿಂದ ಹೆಚ್ಚುವರಿಯಾಗಿ 4 ಕೆ.ಜಿ ರಾಗಿಯನ್ನು ಪಡೆಯುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕಹಳ್ಳಿ

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಸರಕಾರಿ ಸಿಬ್ಬಂದಿ ರೈತರಿಂದ ಹೆಚ್ಚುವರಿಯಾಗಿ 4 ಕೆ.ಜಿ ರಾಗಿಯನ್ನು ಪಡೆಯುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಆರೋಪ ಮಾಡಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ, ಕಾರ್ಯಾಧ್ಯಕ್ಷ ತೋಂಟಾರಾಧ್ಯ, ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಕಾರ್ಯದರ್ಶಿ ಬಾಳೇಗೌಡ ನೇತೃತ್ವದಲ್ಲಿ ಖರೀದಿ ಕೇಂದ್ರಕ್ಕೆ ಆಗಮಿಸಿದ ಅನೇಕ ರೈತರು ಅಕ್ರಮಗಳ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಮಾತನಾಡಿದ ಮುಖಂಡರು, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ಬೆಂಬಲ ಬೆಲೆ ಘೋಷಿಸಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಖರೀದಿ ಕೇಂದ್ರ ಸ್ಥಾಪಿಸಿ ರಾಗಿ ಖರೀದಿ ಮಾಡುತ್ತಿದೆ. ಆದರೆ ಸಿಬ್ಬಂದಿ ಹೆಚ್ಚುವರಿ ರಾಗಿ ವಸೂಲು ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರ ಮೇಲೆ ಅನಗತ್ಯ ಹೊರೆ ಹೊರಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಜಿಲ್ಲಾಧ್ಯಕ್ಷ ಧನಂಜಯಾರಾಧ್ಯ ಮಾತನಾಡಿ 50 ಕೆ.ಜಿ. ರಾಗಿ ಮೂಟೆ ಖರೀದಿ ವೇಳೆ ಚೀಲದ ತೂಕ 650 ಗ್ರಾಂ ರಾಗಿಯನ್ನು ಹೆಚ್ಚುವರಿಯಾಗಿ ಪಡೆಯಬೇಕು ಎಂದು ಸರಕಾರಿ ಆದೇಶದಲ್ಲಿ ಸೂಚಿಸಲಾಗಿದೆ. ಆದರೆ ಖರೀದಿ ಕೇಂದ್ರದಲ್ಲಿ ಸಿಬ್ಬಂದಿ ಪ್ರತಿ ಮೂಟೆಯಲ್ಲಿ 52 ಕೆ.ಜಿ. ರಾಗಿ ತುಂಬಿರಬೇಕು ಎಂದು ರೈತರಿಗೆ ತಾಕೀತು ಮಾಡುತ್ತಿದ್ದಾರೆ. ಅಂದರೆ ರೈತರು 100 ಕೆ.ಜಿ. ತೂಕದ ರಾಗಿ ಮಾರಿದ್ದಲ್ಲಿ 4 ಕೆ.ಜಿ. ಹೆಚ್ಚುವರಿಯಾಗಿ ನೀಡಬೇಕಿದೆ. ಕೆ.ಜಿ. ಗೆ 42.90 ರೂ ನಂತೆ ಲೆಕ್ಕ ಹಾಕಿದರೆ 172 ರು. ಗಳನ್ನು ರೈತರು ಹೆಚ್ಚುವರಿಯಾಗಿ ತೆರಬೇಕಾಗುತ್ತಿದೆ. ಇದಲ್ಲದೆ ಹಮಾಲಿ ಚಾರ್ಜ್ ನೆಪದಲ್ಲಿ ಕ್ವಿಂಟಾಲ್ 40 ರು. ಪಡೆಯುತ್ತಿದ್ದಾರೆ. ಎಂದು ಆರೋಪಿಸಿದರು.

ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ ಸರಕಾರಕ್ಕೆ ರೈತರ ಸಮಸ್ಯೆ ಆಲಿಸಿ ಬಗೆಹರಿಸುವ ವ್ಯವಧಾನವಿಲ್ಲ. ಈ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಮುಂದಾಗಬೇಕು. ಸಮಸ್ಯೆ ಬಗೆಹರಿಯದಿದ್ದಲ್ಲಿ ಸಂಘಟನೆಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್‌ ಪುರಂದರ , ಕೇಂದ್ರದಲ್ಲಿ ಹೆಚ್ಚುವರಿ ರಾಗಿ ಪಡೆಯುವುದು, ಹಮಾಲಿ ಚಾರ್ಜ್ ಹೆಸರಿನಲ್ಲಿ ಹಣ ವಸೂಲಿ ಮಾಡುವ ದೂರುಗಳು ಬಂದರೆ ಕೃಷಿ ಅಧಿಕಾರಿ, ಆಹಾರ ಇಲಾಖೆಯವರೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌