ಮಿಮ್ಸ್‌ ಆಸ್ಪತ್ರೆಯಲ್ಲಿ ಹೊಸ ೪ ಶಸ್ತ್ರಚಿಕಿತ್ಸಾ ಕೊಠಡಿಗಳು ಸಿದ್ಧ

KannadaprabhaNewsNetwork |  
Published : Jul 16, 2024, 12:32 AM IST
15ಕೆಎಂಎನ್‌ಡಿ-6ಡಾ.ನರಸಿಂಹಸ್ವಾಮಿ | Kannada Prabha

ಸಾರಾಂಶ

ಮಿಮ್ಸ್ ಆಸ್ಪತ್ರೆಯಲ್ಲಿ ಯೂರಾಲಜಿ, ಗ್ಯಾಸ್ಟ್ರೋಸರ್ಜರಿ, ನ್ಯೂರೋ ಸರ್ಜರಿ, ಒಂದು ಮತ್ತು ಎರಡನೇ ಹಂತದ ಕ್ಯಾನ್ಸರ್ ಸರ್ಜರಿ, ಕಣ್ಣಿನ ಶಸ್ತ್ರಚಿಕಿತ್ಸೆ, ಜನರಲ್ ಸರ್ಜರಿ, ಸ್ತ್ರೀರೋಗ ಮತ್ತು ಗರ್ಭಿಣಿಯರ ಶಸ್ತ್ರಚಿಕಿತ್ಸೆ ಒಟ್ಟು ೧೪ ಶಸ್ತ್ರಚಿಕಿತ್ಸಾ ಕೊಠಡಿಗಳ ಪೈಕಿ ೧೦ ಕೊಠಡಿಗಳು ಕಾರ್ಯಾಚರಣೆಯಲ್ಲಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆಯಲ್ಲಿ ಹೊಸದಾಗಿ ೪ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಕಾರ್ಯನಿರ್ವಹಣೆಗೆ ಸಿದ್ಧಪಡಿಸಲಾಗಿದೆ. ಹಳೆಯ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನವೀಕರಣಗೊಳಿಸಲಾಗುತ್ತಿದ್ದು, ಇವುಗಳ ಶೀಘ್ರ ಆರಂಭಕ್ಕೆ ಸಜ್ಜುಗೊಳಿಸಲಾಗಿದೆ.

ಹೊಸ ಶಸ್ತ್ರಚಿಕಿತ್ಸಾ ಕೊಠಡಿಗಳ ಪೈಕಿ ಎರಡು ಆರ್ಥೋಪೆಡಿಕ್ಸ್, ಸೂಪರ್ ಸ್ಪೆಷಾಲಿಟಿ ಹಾಗೂ ಲ್ಯಾಪ್ರೋಸ್ಕೋಪಿಗೆ ತಲಾ ಒಂದೊಂದು ಕೊಠಡಿಯನ್ನು ಮೀಸಲಿಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ (ಡಿಎಂಇ) ಮೂಲಕ ಈ ಹೊಸ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಮಿಮ್ಸ್ ಆಸ್ಪತ್ರೆಯಲ್ಲಿ ಯೂರಾಲಜಿ, ಗ್ಯಾಸ್ಟ್ರೋಸರ್ಜರಿ, ನ್ಯೂರೋ ಸರ್ಜರಿ, ಒಂದು ಮತ್ತು ಎರಡನೇ ಹಂತದ ಕ್ಯಾನ್ಸರ್ ಸರ್ಜರಿ, ಕಣ್ಣಿನ ಶಸ್ತ್ರಚಿಕಿತ್ಸೆ, ಜನರಲ್ ಸರ್ಜರಿ, ಸ್ತ್ರೀರೋಗ ಮತ್ತು ಗರ್ಭಿಣಿಯರ ಶಸ್ತ್ರಚಿಕಿತ್ಸೆ ಒಟ್ಟು ೧೪ ಶಸ್ತ್ರಚಿಕಿತ್ಸಾ ಕೊಠಡಿಗಳ ಪೈಕಿ ೧೦ ಕೊಠಡಿಗಳು ಕಾರ್ಯಾಚರಣೆಯಲ್ಲಿವೆ. ಹಳೆಯ ಶಸ್ತ್ರಚಿಕಿತ್ಸಾ ಕೊಠಡಿಗಳ ಪೈಕಿ ಎರಡು ಕೊಠಡಿಗಳನ್ನು ನವೀಕರಿಸಲಾಗುತ್ತಿದೆ. ಸೋಂಕು ತಡೆಗಟ್ಟುವ ಸಲುವಾಗಿ ಒಂದು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಮಾಡೆಲರ್ ಶಸ್ತ್ರಚಿಕಿತ್ಸಾ ಕೊಠಡಿಯನ್ನಾಗಿ ರೂಪಾಂತರಿಸಲಾಗಿದೆ.

ಹಳೆಯ ಕಟ್ಟಡದಲ್ಲಿರುವ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ ಮೀಸಲಿಡಲಾಗಿದೆ. ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಅಳವಡಿಸಿ ಹಲವು ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಇನ್ನು ಮುಂದೆ ಸಮಸ್ಯೆಗಳು ಎದುರಾಗುವುದಿಲ್ಲ. ಹೆರಿಗೆ ವಿಭಾಗದಲ್ಲಿ ವೈದ್ಯರು, ನರ್ಸ್‌ಗಳು ಬೇಡಿಕೆಗೆ ತಕ್ಕಂತೆ ಇಲ್ಲದಿರುವುದು ಸಮಸ್ಯೆಯಾಗಿದೆ.

ಸಿದ್ಧಗೊಂಡಿರುವ ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಸಿಬ್ಬಂದಿ ನೇಮಕವಾಗಬೇಕಿದೆ. ಅವಶ್ಯವಿರುವ ಕೆಲವೊಂದು ಯಂತ್ರೋಪಕರಣಗಳು ಬರಬೇಕಿದ್ದು, ಅವೆಲ್ಲವೂ ಬಂದ ನಂತರ ಉದ್ಘಾಟನೆಗೆ ಸಜ್ಜುಗೊಳಿಸಲು ವೈದ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.

ಮಿಮ್ಸ್ ಆಸ್ಪತ್ರೆ ೮೫೦ ಹಾಸಿಗೆಯುಳ್ಳ ಆಸ್ಪತ್ರೆಯಾಗಿದ್ದು, ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನೂ ಹೆಚ್ಚಿಸಲಾಗುತ್ತಿದೆ. ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಸಿಮ್ಯುಲೇಷನ್ ವರ್ಚುವಲ್ ಲ್ಯಾಬ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ಹೊಸ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ನವೀಕರಿಸಿದ್ದು, ಉತ್ತಮ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಗುತ್ತಿದೆ. ಹೊಸದಾಗಿ ಕ್ರಿಟಿಕಲ್ ಕೇರ್‌ಸೆಂಟರ್‌ನ್ನು ತೆರೆಯಲು ಸಿದ್ಧತೆ ಮಾಡಲಾಗುತ್ತಿದೆ.

- ಡಾ.ನರಸಿಂಹಸ್ವಾಮಿ, ನಿರ್ದೇಶಕರು, ಮಿಮ್ಸ್

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ