ಮುಸ್ಲಿಮರಿಗೆ ಶೇ.೪ ಮೀಸಲಾತಿ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

KannadaprabhaNewsNetwork | Published : Mar 27, 2025 1:00 AM

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯವನ್ನು ಓಲೈಸಲು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ ಘೋಷಣೆ, ಬೆಲೆ ಏರಿಕೆ ಮತ್ತು ಬಿಜೆಪಿಯ ೧೮ ಶಾಸಕರ ಅಮಾನತು ಮಾಡಿದ ನಿಲುವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯವನ್ನು ಓಲೈಸಲು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ ಘೋಷಣೆ, ಬೆಲೆ ಏರಿಕೆ ಮತ್ತು ಬಿಜೆಪಿಯ ೧೮ ಶಾಸಕರ ಅಮಾನತು ಮಾಡಿದ ನಿಲುವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಓಲೈಸಿಕೊಳ್ಳಲು ಹಾಗೂ ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ತನ್ನ ಹಳೆ ಚಾಳಿಯನ್ನು ಕಾಂಗ್ರೆಸ್ ಪಕ್ಷವು ಮುಂದುವರಿಸಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದು, ವಿದ್ಯಾಭ್ಯಾಸಕ್ಕಾಗಿ ಹೊರ ದೇಶಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ೨೦ ಲಕ್ಷದಿಂದ ೩೦ ಲಕ್ಷ ಗಳಿಗೆ ಹೆಚ್ಚಳ ಮಾಡುವುದು, ಶಾದಿ ಭಾಗ್ಯಕ್ಕೆ ಮತ್ತಷ್ಟು ಪೋತ್ಸಾಹ, ಮುಸ್ಲಿಂ ಹೆಣ್ಣುಮಕ್ಕಳ ಆತ್ಮರಕ್ಷಣೆಗಾಗಿ ವಿಶೇಷ ಅನುದಾನ ನೀಡುವುದು, ಇವುಗಳು ಕಾಂಗ್ರೆಸ್ ನ ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ವಿಧಾನಸಭಾ ಸ್ಪೀಕರ್, ಬಿಜೆಪಿಯ ೧೮ ಶಾಸಕರನ್ನು ೬ ತಿಂಗಳ ಕಾಲ ಅಮಾನತು ಮಾಡಿರುವುದು ಕಾನೂನು ಬಾಹಿರವಾಗಿದ್ದು, ಅಸಂವಿಧಾನಾತ್ಮಕ, ಏಕಪಕ್ಷೀಯ ತೀರ್ಮಾನವಾಗಿದ್ದು, ಜನರಿಂದ ಆಯ್ಕೆಯಾದ ಶಾಸಕರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನ ಆಗಿದ್ದು, ಇದನ್ನು ಬಿಜೆಪಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದರು.

ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ, ಆದರೂ ಕಾಂಗ್ರೆಸ್ ಸರ್ಕಾರದ ಜಾತಿ ಆಧಾರಿತ ನಿರ್ಧಾರಗಳು ಸಂವಿಧಾನಕ್ಕೆ ಮಾಡಿದ ಅವಮಾನವಾಗಿವೆ. ಸರ್ಕಾರ ಜನ ವಿರೋಧಿ ನಿರ್ಧಾರಗಳನ್ನು ಹಿಂದಕ್ಕೆ ಪಡೆಯದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕರಾದ ವೈ.ಸಂಪಂಗಿ ಹಾಗೂ ಬಿ.ಪಿ.ವೆಂಕಟ ಮುನಿಯಪ್ಪ ಮಾತನಾಡಿದರು. ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ ಮಹೇಶ್, ಅಪ್ಪಿರಾಜು, ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೊಮ್ಮನಹಳ್ಳಿ ಆನಂದ್, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಅರುಣಮ್ಮ, ಮಮತಮ್ಮ, ಚಿನ್ನಸ್ವಾಮಿಗೌಡ, ಪಿ.ಎಸ್.ಸತ್ಯನಾರಾಯಣರಾವ್, ವಿಜಯಕುಮಾರ್, ನಾಮಾಲ್ ಮಂಜು, ಸೀಗೆನಹಳ್ಳಿ ಸುಂದರ್ ಇದ್ದರು.

ಸಿಎಂ ಪ್ರತಿಕೃತಿ ದಹನಕ್ಕೆ ಪೊಲೀಸರಿಂದ ಅಡ್ಡಿ, ಮಾತಿನ ಚಕಮಕಿ:

ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರು ಸಿಎಂ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಲು ಮುಂದಾದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಸಿದ್ದರಾಮಯ್ಯ ಪ್ರತಿಕೃತಿಗೆ ಬೆಂಕಿಯಿಡಲು ಮುಂದಾದ ವೇಳೆ ಪೊಲೀಸರು ಅಡ್ಡಿಪಡಿಸಿ ಪ್ರತಿಕೃತಿ ಹೊತ್ತೊಯ್ದರು. ಪ್ರತಿಕೃತಿ ಕಿತ್ತು ಹಾಕಿದ್ದಕ್ಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು, ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಅಲ್ಲದೆ ಇದೇ ವೇಳೆ ನಗರ ಪೊಲೀಸ್ ಠಾಣೆ ಪಿಎಸ್‌ಐ ಖಾಸಿಂ ಸಾಬ್ ಹಾಗೂ ಪೊಲೀಸ್ ಸಿಬ್ಬಂದಿಯು ಪ್ರತಿಭಟನಾಕಾರರನ್ನು ಕುರಿತು, ಪ್ರತಿಭಟನಾಕಾರರು ೨೦೦- ೩೦೦ ರುಪಾಯಿ ತೆಗೆದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆಂದು ನಿಂದಿಸಿದ್ದರೆಂದು ಪೊಲೀಸರೊಂದಿಗೆ ಬಿಜೆಪಿ ಮುಖಂಡರು ಕೆಲಕಾಲ ವಾಗ್ವಾದ ನಡೆಸಿದರು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರು ಪೊಲೀಸರ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದಾಗ ಪೊಲೀಸರು ಅಧಿಕಾರಿಗಳು, ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

.

Share this article