4 ಕಳ್ಳರ ಬಂಧಿಸಿ 1.28 ಕೋಟಿ ಚಿನ್ನ ಜಪ್ತಿ

KannadaprabhaNewsNetwork |  
Published : Jul 29, 2026, 03:45 AM IST
ಆವಲಹಳ್ಳಿ ಠಾಣೆ ಪೊಲೀಸರು | Kannada Prabha

ಸಾರಾಂಶ

ಕಲ್ಯಾಣ ಮಂಟಪಗಳು ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖಾಸಗಿ ಬ್ಯಾಂಕ್ ಮಾಜಿ ನೌಕರ ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ಪಾರ್ತೆ ಬೆಂಗಳೂರು

ಕಲ್ಯಾಣ ಮಂಟಪಗಳು ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖಾಸಗಿ ಬ್ಯಾಂಕ್ ಮಾಜಿ ನೌಕರ ಸೇರಿದಂತೆ ನಾಲ್ವರನ್ನು ಪ್ರತ್ಯೇಕವಾಗಿ ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಬ್ಬಾಳದ ವಿನಾಯಕ ನಗರ ನಿವಾಸಿ ಶ್ರೀನಿವಾಸ್ ಅಲಿಯಾಸ್ ಕರಾಟೆ ಸೀನ, ಮುತ್ತುರಾಯಸ್ವಾಮಿ ಲೇಔಟ್‌ನ ಜಿ.ಎ.ಶ್ರೀನಿವಾಸ್, ಸಂಜಯನಗರದ ಪ್ರದೀಪ್ ಹಾಗೂ ಗೊರವಿಗೆರೆಯ ಬಿ.ಆಸೀಫ್ ಬಂಧಿತರಾಗಿದ್ದು, ಅವರಿಂದ 815 ಗ್ರಾಂ ಚಿನ್ನಾಭರಣ, 9.50 ಲಕ್ಷ ನಗದು, ಕಾರು ಹಾಗೂ 2 ಬೈಕ್‌ಗಳು ಸೇರಿದಂತೆ ಒಟ್ಟು 1.28 ಕೋಟಿ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಹೇಗೆ ಕಳ್ಳತನ:

ಕರಾಟೆ ಸೀನ, ಪ್ರದೀಪ್‌ ಹಾಗೂ ಜಿ.ಎ.ಶ್ರೀನಿವಾಸ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಹಲವು ವರ್ಷಗಳಿಂದ ಅಕ್ರಮ ಚಟುವಟಿಕೆಗಳಲ್ಲಿ ಈ ಮೂವರು ನಿರತರಾಗಿದ್ದಾರೆ. ಈ ಮೂವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ನಗರ ಹಾಗೂ ಹೊರವಲಯಗಳ ವಸತಿ ಪ್ರದೇಶಗಳಲ್ಲಿ ಮನೆಗಳ್ಳತನ ಕೃತ್ಯಕ್ಕೆ ತ್ರಿಮೂರ್ತಿಗಳು ಕುಖ್ಯಾತರಾಗಿದ್ದಾರೆ. ಹಲವು ಬಾರಿ ಜೈಲೂಟ ಸಹ ಅ‍ವರು ಸವಿದಿದ್ದಾರೆ. ಆದರೆ ಕಳ್ಳತನ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಬಂದು ಮತ್ತೆ ತಮ್ಮ ದುಷ್ಕೃತ್ಯಗಳನ್ನು ಆರೋಪಿಗಳು ಮುಂದುವರೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚಿಗೆ ಮನೆಯೊಂದಕ್ಕೆ ಆರೋಪಿಗಳು ಕನ್ನ ಹಾಕಿದ್ದರು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಖದೀಮರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಬಂಧಿತರಿಂದ 475 ಗ್ರಾಂ ಚಿನ್ನಾಭರಣ, 9.5 ಲಕ್ಷ ರು ನಗದು ಹಾಗೂ 3 ಬೈಕ್‌ಗಳನ್ನು ಸೇರಿದಂತೆ 81 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖದೀಮನಾದ ಬ್ಯಾಂಕ್ ನೌಕರ:

ಆನ್‌ಲೈನ್‌ ಬೆಟ್ಟಿಂಗ್ ವ್ಯಸನದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಕಲ್ಯಾಣ ಮಂಟಪಗಳಲ್ಲಿ ಚಿನ್ನಾಭರಣ ಕದ್ದು ಖಾಸಗಿ ಬ್ಯಾಂಕ್‌ನ ಮಾಜಿ ನೌಕರನೊಬ್ಬ ಈಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದಾನೆ.

ಗೊರವಿಗೆರೆಯ ಬಿ.ಆಸೀಫ್ ಬಂಧಿತರಾಗಿದ್ದು, ಆರೋಪಿಯಿಂದ 340 ಗ್ರಾಂ ಚಿನ್ನಾಭರಣ ಹಾಗೂ ಕಾರು ಸೇರಿದಂತೆ 47 ಬೆಲೆಯ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಬೂದಿಗೆರೆ ಕ್ರಾಸ್ ಸಮೀಪದ ಫಾರ್ಮ್‌ಹೌಸ್‌ನ ಕಲ್ಯಾಣ ಮಂಟಪದಲ್ಲಿ ಅನುಮಾನಾಸ್ಪವಾಗಿ ಆರೋಪಿ ಓಡಾಡುತ್ತಿದ್ದ. ಆಗ ಆತನನ್ನು ಹಿಡಿದು ಆವಲಹಳ್ಳಿ ಠಾಣೆ ಪೊಲೀಸರಿಗೆ ಮದುವೆಗೆ ಬಂದಿದ್ದ ಸಾರ್ವಜನಿಕರು ಕೊಟ್ಟಿದ್ದರು. ಬಳಿಕ ಆಸಿಫ್‌ನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತನ್ನ ಕುಟುಂಬದ ಜತೆ ನೆಲೆಸಿದ್ದ ಆರೋಪಿ, ಖಾಸಗಿ ಬ್ಯಾಂಕ್‌ನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದ. ಆದರೆ ಆನ್‌ಲೈನ್‌ ಬೆಟ್ಟಿಂಗ್ ಚಟಕ್ಕೆ ಬಿದ್ದ ಆತ, ಇದಕ್ಕೆ ಬ್ಯಾಂಕ್‌ನಲ್ಲಿ ಹಣಕಾಸು ವ್ಯವಹಾರದಲ್ಲಿ ಆಶಿಸ್ತು ತೋರಿದ್ದ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಸಿದರೂ ಆಸಿಫ್ ಬದಲಾಗಲಿಲ್ಲ. ಕೊನೆಗೆ ಕೆಲಸದಿಂದ ಆತನನ್ನು ಬ್ಯಾಂಕ್ ಆಡಳಿತ ಮಂಡಳಿ ವಜಾಗೊಳಿಸಿತು. ಆಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಆರೋಪಿ, ಸುಲಭವಾಗಿ ಹಣ ಸಂಪಾದನೆಗೆ ಕಳ್ಳತಕ್ಕಿಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮದುವೆ ಕಾರ್ಯಕ್ರಮಗಳಿಗೆ ಆತಿಥಿ ಸೋಗಿನಲ್ಲಿ ತೆರಳಿ ವಧು-ವರರ ಕೊಠಡಿಗಳಲ್ಲಿ ಆತ ಚಿನ್ನಾಭರಣ ಕಳವು ಮಾಡುತ್ತಿದ್ದ. ಹೀಗೆ ಕದ್ದ ಆಭರಣಗಳನ್ನು ಮಾರಾಟ ಮಾಡಿ ಮತ್ತೆ ಆನ್‌ಲೈನ್‌ನಲ್ಲಿ ಆರೋಪಿ ಜೂಜಾಡುತ್ತಿದ್ದ. ಇತ್ತೀಚಿಗೆ ಬೂದಿಗೆರೆ ಕ್ರಾಸ್‌ನಲ್ಲಿ ಮದುವೆ ಮನೆಯಲ್ಲಿ ಕಳ್ಳತನಕ್ಕೆ ಆರೋಪಿ ಹೊಂಚು ಹಾಕಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ.1ರಿಂದ ಫುಟ್ಪಾತ್‌ ಮೇಲಿನಬೆಸ್ಕಾಂ ಸಾಮಗ್ರಿ ತೆರವು: ಕೃಷ್ಣ
ಬಿಎಂಟಿಸಿ ಬಸ್ಸಲ್ಲಿ ಕನ್ನಡಿಗ ಸ್ಟಿಕ್ಕರ್‌ತೆಗೆಸಿದ ಡಿಪೋ ವ್ಯವಸ್ಥಾಪಕ: ಕಿಡಿ