ತುಮಕೂರು ಬೆಂಗಳೂರು ನಡುವೆ 4 ಪಥ ರೈಲು

KannadaprabhaNewsNetwork |  
Published : Aug 24, 2025, 02:00 AM IST
ಸೋಮಣ್ಣ | Kannada Prabha

ಸಾರಾಂಶ

ಚನ್ನೈ- ಬೆಂಗಳೂರು ರೋಡ್ ಕಾರಿಡಾರ್‌ನಂತೆ ತುಮಕೂರು-ಬೆಂಗಳೂರು ರೈಲ್ವೆ ಕಾರಿಡಾರ್ ಸಹ ಕೈಗೊಳ್ಳಲಾಗುತ್ತದೆ. ಈಗಾಗಲೇ ತುಮಕೂರು-ಬೆಂಗಳೂರು ನಡುವೆ 4 ಪಥದ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಆಗಿದ್ದು, ಡಿಪಿಆರ್ ಆಗಬೇಕಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಚನ್ನೈ- ಬೆಂಗಳೂರು ರೋಡ್ ಕಾರಿಡಾರ್‌ನಂತೆ ತುಮಕೂರು-ಬೆಂಗಳೂರು ರೈಲ್ವೆ ಕಾರಿಡಾರ್ ಸಹ ಕೈಗೊಳ್ಳಲಾಗುತ್ತದೆ. ಈಗಾಗಲೇ ತುಮಕೂರು-ಬೆಂಗಳೂರು ನಡುವೆ 4 ಪಥದ ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಆಗಿದ್ದು, ಡಿಪಿಆರ್ ಆಗಬೇಕಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರವಲಯದ ತಿಮ್ಮರಾಜನಹಳ್ಳಿ ಬಳಿ ಬೃಹತ್ ರೈಲ್ವೆ ಗೋಡೌನ್ ನಿರ್ಮಾಣ ಸಂಬಂಧ ಕೆಐಎಡಿಬಿ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಪಾವಗಡ-ಮಡಕಶಿರಾ-ಮಧುಗಿರಿ ಮಾರ್ಗದ ರೈಲು ಮಾರ್ಗದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಹಾಗೆಯೇ ತುಮಕೂರು-ಊರುಕೆರೆ, ಸಿರಾ-ತಾವರೆಕೆರೆ ಮಾರ್ಗದ ರೈಲು ಮಾರ್ಗ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ ಎಂದರು. ಮುಂದಿನ 10-15 ವರ್ಷಗಳಲ್ಲಿ ತುಮಕೂರು ಬೆಂಗಳೂರಿಗೆ ಸರಿ ಸಮನಾಗಿ ಬೆಳವಣಿಗೆಯಾಗುತ್ತದೆ. ಇದಕ್ಕೆ ಅಗತ್ಯ ಇರುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಬಳಿ ಪಿಎಂ ಕಿಸಾನ್ ಯೋಜನೆಯಡಿ ಬೃಹತ್ ಚೆಕ್ ಡ್ಯಾಂ ನಿರ್ಮಾಣ ಕಾರ್ಯವನ್ನು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನಗರದ ಮರಳೂರಿನಲ್ಲಿರುವ ತುಮಕೂರು ಮಹಾನಗರ ಪಾಲಿಕೆಯ ಮಾಲೀಕತ್ವದ 2 ಎಕರೆ ಜಾಗವನ್ನು ಕಾಂಗ್ರೆಸ್ ಪಕ್ಷದ ಭವನ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕಾಂಗ್ರೆಸ್ ಭವನ ಟ್ರಸ್ಟ್‌ ಗೆ ನೀಡಿರುವ ಕಾರ್ಯ ಖಂಡನೀಯ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಜಾಗವನ್ನು ವಾಪಸ್ ಮಹಾನಗರ ಪಾಲಿಕೆಗೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.ಮಹಾನಗರ ಪಾಲಿಕೆಯ ಜಾಗವನ್ನು ಕಾಂಗ್ರೆಸ್ ಪಕ್ಷಕ್ಕೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಈ ಜಮೀನಿನ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳಿಂದಲೂ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿದ್ದೇನೆ. ಕೂಡಲೇ ಕಾಂಗ್ರೆಸ್ ಪಕ್ಷ ಈ ಜಾಗವನ್ನು ಪಾಲಿಕೆಗೆ ವಾಪಸ್ ನೀಡಬೇಕು ಎಂದರು.ತುಮಕೂರು ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು 45 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಮಹಾನಗರ ಪಾಲಿಕೆಯ ಮಾಲೀಕತ್ವದ ಜಾಗವನ್ನು ಯಾವ ಉದ್ದೇಶಕ್ಕೆ ಬಳಸುತ್ತಿದ್ದರೋ ಅದೇ ಉದ್ದೇಶಕ್ಕೆ ಬಳಸಲು ಅನುವು ಮಾಡಿಕೊಡಬೇಕು ಎಂದರು.ಸದರಿ ಜಾಗವನ್ನು ನಗರದ ಕಸ ವಿಲೇವಾರಿ ಮಾಡಲು ಬಳಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಸದ್ಯ ಅಜ್ಜಗೊಂಡನಹಳ್ಳಿ ಬಳಿ ಕಸ ವಿಲೇವಾರಿ ಮಾಡುತ್ತಿರುವುದರಿಂದ ಈ ಜಮೀನು ಖಾಲಿ ಇತ್ತು. ಈ ಜಾಗವನ್ನು ಸಚಿವರು ರಾಜೀವ ಗಾಂಧಿ ಅರ್ಬನ್ ಡೆವಲಪ್‌ಮೆಂಟ್ ಸಂಸ್ಥೆಗೆ ಕಾನೂನಿನ್ವಯ ನೀಡಲು ಸೂಚಿಸಿದ್ದಾರೆ ಎಂದ ಅವರು, ರಾಜ್ಯ ಸರ್ಕಾರ ಕಳೆದ ಮೇ 27 ರಂದು ಆದೇಶ ಹೊರಡಿಸಿ, ಸದರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ ಹಂಚಿಕೆ ಮಾಡಿದೆ. ಇದರ ಎಸ್.ಆರ್. ವ್ಯಾಲ್ಯೂ ಶೇ. 5 ರಷ್ಟು ನಿಗದಿಪಡಿಸಿದೆ ಎಂದು ಹೇಳಿದರು.ಸದರಿ ಜಮೀನಿನ ಸರ್ಕಾರಿ ದರವನ್ನು ಪ್ರತಿ ಎಕರೆಗೆ 1.7 ಕೋಟಿ ರೂ. (2 ಎಕರೆಗೆ 3.4 ಕೋಟಿ) ನಿಗದಿಪಡಿಸಿದ್ದಾರೆ. ಆದರೆ ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ 21 ಕೋಟಿ ರು. ಎಂದು ಅಂದಾಜಿಸಬಹುದಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ಪ್ರಶ್ನಿಸಲು ಹೋದ ಬಿಜೆಪಿ ಕಾರ್ಯಕರ್ತರೊಂದಿಗೆ ಪೊಲೀಸರು ನಡೆದುಕೊಂಡಿರುವ ರೀತಿ ಸಾಧುವಲ್ಲ. ಪೊಲೀಸರು ಯಾವುದೇ ಪಕ್ಷದ ಬಾಲಗೋಂಚಿಯಾಗಬಾರದು. ಮುಂದಿನ ದಿನಗಳಲ್ಲಿ ಇದಕ್ಕೆ ಪೊಲೀಸರೇ ಬಲಿಪಶುಗಳಾಗುತ್ತಾರೆ ಎಂಬುದನ್ನು ಮರೆಯಬಾರದು. ತಮ್ಮ ಕರ್ತವ್ಯವನ್ನು ಕಾನೂನು ಪ್ರಕಾರ ನಿರ್ವಹಿಸಬೇಕು. ಯಾರಿಗೂ ಅಗೌರವ ತೋರುವ ಕೆಲಸ ಮಾಡಬಾರದು ಎಂದು ಸಚಿವ ಸೋಮಣ್ಣ ಹೇಳಿದರು. ಮಹಾನಗರ ಪಾಲಿಕೆಯ ಜಾಗವನ್ನು ಕಾಂಗ್ರೆಸ್ ಭವನಕ್ಕೆ ಅಕ್ರಮವಾಗಿ ನೋಂದಣಿ ಮತ್ತು ಖಾತೆ ಮಾಡಿಕೊಟ್ಟಿರುವುದನ್ನು ಯಾರು ಬೇಕಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆ ಕಾಲ ಸದ್ಯದಲ್ಲೇ ಬರಬಹುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮುಖಂಡರಾದ ಎಸ್. ಶಿವಪ್ರಸಾದ್, ವೈ.ಹೆಚ್. ಹುಚ್ಚಯ್ಯ, ಬ್ಯಾಟರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!