- ನೇಪಾಳದಿಂದ ಬಂದು ಮನೆ ಕೆಲಸಕ್ಕೆ ಸೇರಿದ್ದರು । ಮಹಾರಾಷ್ಟ್ರದ ಪೊಲೀಸರ ಸಹಕಾರದಿಂದ ಆರೋಪಿಗಳ ಬಂಧನ
ಮಣಿಪುರ ಎಸ್ಟೇಟ್ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಕೈಲಾಲಿ ಜಿಲ್ಲೆಯ ರಾಜೇಂದ್ರ ಶೇರ್ ಭಾಯ್, ಏಕೇಂದ್ರ ಕುಟಲ್ ಬದ್ವಾಲ್, ಕರಂ ಸಿಂಗ್ ಬಹದ್ದೂರು ಎಂಬುವರನ್ನು ಬಂಧಿಸಲಾಗಿದೆ. ಆರೋಪಿತರಿಂದ ₹1.50 ಕೋಟಿ ಮೌಲ್ಯದ ಚಿನ್ನ, ಒಂದು ಕೆಜಿ 200 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ₹25 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ ನಲ್ಲಿ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಕ್ರಮ ಕೈಗೊಳ್ಳ ಲಾಗಿದೆ ಎಂದು ಮಾಹಿತಿ ನೀಡಿದರು.ಮಣಿಪುರ ಎಸ್ಟೇಟ್ ಮಾಲೀಕ ವೆಂಕಟೇಶ್ ಮನೆಯಲ್ಲಿ ಆ. 21ರಂದು ಬೆಳಗಿನ ಜಾವ ₹6 ಲಕ್ಷ ನಗದು ಹಾಗೂ ₹37.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ಕಳುವು ಮಾಡಿರುವ ಸಂಬಂಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಹಾಗೂ ಚಿಕ್ಕಮಗಳೂರು ಸಿಇಎನ್ ಡಿವೈಎಸ್ ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡಗಳು ಪ್ರಕರಣ ನಡೆದ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಸೇರಿ ಇನ್ನೂ 2 ತಂಡ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಅವರ ಬಂಧನಕ್ಕೆ ಈಗಾಗಲೇ ಬಲೆ ಬೀಸಲಾಗಿದೆ. ನಮ್ಮ ಪೊಲೀಸ್ ತಂಡಗಳು ಉತ್ತರ ಭಾರತ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದು ಎಲ್ಲಾ ಕಳ್ಳರನ್ನು ಬಂಧಿಸುವುದಾಗಿ ತಿಳಿಸಿದರು.
- ಬಾಕ್ಸ್ ---ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆ ಕೊಲೆ ಮಾಡಿದ ಸೊಸೆಚಿಕ್ಕಮಗಳೂರು: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯೊಬ್ಬಳು ಅತ್ತೆಗೆ ಮುದ್ದೆಯಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟು ಕೊಲೆ ಮಾಡಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೆ ಹಾಗೂ ಆಕೆ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಡಾ. ವಿಕ್ರಂ ಅಮಟೆ ತಿಳಿಸಿದರು.
ಗ್ರಾಮದ ಆಂಜನೇಯ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಶ್ವಿನಿ ತನ್ನ ಅತ್ತೆಯ ಬೀರುವಿನಲ್ಲಿದ್ದ ಬಂಗಾರ ಹಾಗೂ ನಗದನ್ನು ಆತನಿಗೆ ನೀಡಿದ್ದರು. ಬೀರುವಿನಲ್ಲಿದ್ದ ಬಂಗಾರ-ನಗದು ಕಡಿಮೆಯಾಗುತ್ತಿರುವುದು ದೇವಿರಮ್ಮ ಅವರ ಗಮನಕ್ಕೆ ಬಂದಿತ್ತು. ಈ ವಿಷಯ ಹೊರ ಬಂದರೆ ಕಷ್ಟ ಎಂದು ಅಶ್ವಿನಿ ತನ್ನ ಪ್ರಿಯಕರನೊಂದಿಗೆ ಸೇರಿ ಆ. 10ರಂದು ರಾತ್ರಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ಅತ್ತೆಯ ಕೊಲೆಗೆ ಯತ್ನಿಸಿದ್ದರು ಎಂದು ಮಾಹಿತಿ ನೀಡಿದರು.
ಮೃತರ ಮಗಳು ತನ್ನ ತಾಯಿ ಬಿರುವಿನಲ್ಲಿದ್ದ ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹65 ಸಾವಿರ ನಗದು ಕಳವಾಗಿರುವ ಬಗ್ಗೆ ಅಜ್ಜಂಪುರ ಠಾಣೆಯಲ್ಲಿ ಆ. 20ರಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ವೇಳೆ ಅಶ್ವಿನಿಯೇ ತನ್ನ ಪ್ರಿಯಕರ ಆಂಜನೇಯನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.
ಆ. 10ರಂದು ಕಳಸ ಪಿಎಸ್ಐ ಬಲಿಗೆ ಚೆಕ್ ಪೋಸ್ಟ್ ಬಳಿ ಕ್ಸೈಲೋ ಕಾರಿನಲ್ಲಿ ನಾಲ್ಕು ದನಗಳನ್ನು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕಾಗಮಿಸಿ ವಾಹನ ತಡೆಯಲು ಯತ್ನಿಸಿದಾಗ ಕಾರನ್ನು ನಿಲ್ಲಿಸದೆ ಆರೋಪಿಗಳು ವೇಗವಾಗಿ ಹೋಗಿದ್ದರು. ಪೊಲೀಸರು ಕಾರನ್ನು ಹಿಂಬಾಲಿಸಿದಾಗ ದನ ಗಳ್ಳರು ಕಾರನ್ನು ಸ್ವಲ್ಪ ದೂರ ದಲ್ಲಿಯೇ ಬಿಟ್ಟು ಓಡಿ ಹೋಗಿದ್ದರು.
ಭದ್ರಾವತಿ ತಾಲೂಕಿನ ಸಲ್ಮಾನ್ ಖಾನ್, ಸಾಹಿಲ್, ಸೈಯದ್ ತೌಫಿಕ್, ಅಬ್ದುಲ್ ಅಜೀಜ್, ಅಬ್ದುಲ್ ಜಾವೇದ್ ಎಂಬುವರನ್ನು ಬಂಧಿಸಲಾಗಿದೆ. ಇವರು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ದನಗಳ್ಳತ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
---------------------------------------------