ದಾಬಸ್‍ಪೇಟೆ: ಪಿಯುಸಿ ವ್ಯಾಸಂಗ ವಿದ್ಯಾರ್ಥಿ ಬದುಕಿಗೆ ಬುನಾದಿ ಹಾಕುವ ಹಂತ, ವಿದ್ಯಾರ್ಥಿಗಳು ಕಷ್ಟಪಟ್ಟರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಜ್ಞಾನಸಂಗಮ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಜ್ಞಾನ ತರಂಗ-2026ರ ಕಾಲೇಜು ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಮಾಜದಲ್ಲಿ ಬದುಕುವ ಹಾದಿಯನ್ನು ಕಲಿಯುವುದು ಮುಖ್ಯ. ತಮ್ಮ ಏಕಾಗ್ರತೆಗೆ ಅಡ್ಡಿಯಾಗುವ ಎಲ್ಲ ಆಕರ್ಷಣೆಗಳನ್ನು ಮೀರಿ ಗುರಿ ಸಾಧಿಸಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಪ್ರಸುತ್ತ ದಿನಗಳಲ್ಲಿ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದೇ ಒಂದು ಸವಾಲಾಗಿರುವಾಗ ಪ್ರತಿಕ್ಷಣಕ್ಕೂ ಆಗುತ್ತಿರುವ ಬದಲಾವಣೆಗಳ ನಡುವೆ ನಮ್ಮ ಶಿಕ್ಷಣ ಕೇವಲ ಅಂಕ ಹಾಗೂ ಗ್ರೇಡ್‍ಗಳಿಗೆ ಸೀಮಿತವಾಗಬಾರದು ಎಂದು ಹೇಳಿದರು.ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಜ್ಞಾನ ಎಂದರೆ ತಿಳಿಯುವುದು, ಸಂಗಮ ಅಂದರೆ ಸೇರುವುದು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೆಡೆ ಸೇರಿ ಕಲಿಯಲಿ ಎಂದು ಜ್ಞಾನಸಂಗಮ ಎಂದು ಕಾಲೇಜಿಗೆ ಹೆಸರಿಡಲಾಗಿದೆ. ಪಿಯುಸಿ ಹಂತ ಜೀವನದ ದಿಕ್ಕನ್ನು ಬದಲಾಯಿಸುವ ಹಂತ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಸಾಮಥ್ರ್ಯವಿದ್ದು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಗಳಿಸಲು ಸಾಧ್ಯ ಎಂದರು.
ವಿವೇಕಾನಂದ ವಿದ್ಯಾಮಂದಿರ ಶಾಲಾ ಸಂಸ್ಥಾಪಕ ವಿರುಪಾಕ್ಷಯ್ಯ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪದವಿ ಗಳಿಸಿದ ಬಳಿಕ ಕೆಲಸ ಮಾಡುವ ಪರಿಸರಕ್ಕೆ ಹೊಂದಿಕೊಂಡು ಕಾರ್ಯನಿರ್ವಹಿಸುವ ಚಾಕಚಕ್ಯತೆ ರೂಢಿಸಿಕೊಂಡು ಸೇವೆ ಸಲ್ಲಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಾಗರಾಜು, ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಯ್ಯ ಚಿಕ್ಕಮಾರನಹಳ್ಳಿ, ವಿಕೇರ್ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕ ರಾಜಶೇಖರ್, ಜ್ಞಾನಸಂಗಮ ಎಜುಕೇಷನಲ್ ಟ್ರಸ್ಟ್ ಉಪಾಧ್ಯಕ್ಷ ಜಗದೀಶ್, ಪ್ರಾಂಶುಪಾಲ ಪುನೀತ್ ಕುಮಾರ್, ಆಡಳಿತಾಧಿಕಾರಿ ದಕ್ಷಿಣಮೂರ್ತಿ, ಪತ್ರಕರ್ತರಾದ ಪ್ರದೀಪ್ ಎಡೇಹಳ್ಳಿ, ರುದ್ರೇಶ್ ಹೊನ್ನೇನಹಳ್ಳಿ ಇತರರು ಉಪಸ್ಥಿತರಿದ್ದರು.
ಪೋಟೋ 1 :
ದಾಬಸ್‍ಪೇಟೆಯ ಜ್ಞಾನಸಂಗಮ ಪದವಿ ಪೂರ್ವ ಕಾಲೇಜಲ್ಲಿ ಹಮ್ಮಿಕೊಂಡಿದ್ದ ಜ್ಞಾನ ತರಂಗ-2026 ಕಾಲೇಜು ಸ್ವಾಗತ ಸಮಾರಂಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಸನ್ಮಾನಿಸಿದರು.