ಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಹಾರ, ತುರಾಯಿ, ಶಾಲು ಬದಲಾಗಿ ಅಭಿಮಾನಿಗಳು ಉಡುಗೊರೆಯಾಗಿ 40 ಸಾವಿರ ನೋಟ್ ಬುಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶಾಸಕ ಶರತ್ ಬಚ್ಚೇಗೌಡರು ಕೆಲ ವರ್ಷಗಳಿಂದ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹಾರ, ಶಾಲು, ಹೂಗುಚ್ಛ ನೀಡುವ ಬದಲಾಗಿ ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಪೂರಕವಾಗುವ ನೋಟ್ ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ತಂದು ಕೊಡುವ ಸಂಪ್ರದಾಯವನ್ನು ಪ್ರಾರಂಭಿಸಿದ್ದರು. ಅದರಂತೆ ಈ ಬಾರಿಯೂ ಸಹ ಅಭಿಮಾನಿಗಳು 40 ಸಾವಿರದಷ್ಟು ನೋಟ್ ಬುಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.ತಾಲೂಕಿನ ಬೆಂಡಿಗಾನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಾಂಕೇತಿಕವಾಗಿ ನೋಟ್ ಬುಕ್‌ಗಳನ್ನ ವಿತರಿಸಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನನ್ನ ಮನವಿಗೆ ಮನ್ನಣೆ ನೀಡಿ ಅಭಿಮಾನಿಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಹಾರ, ಪೇಟ ಶಾಲು ಬದಲಾಗಿ ನೋಟ್ ಬುಕ್‌ಗಳನ್ನು ವಿತರಿಸಿ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಿದ್ದು, ಅದರಂತೆ ವಿದ್ಯಾರ್ಥಿಗಳು ಕೂಡ ದಾನಿಗಳ ನೆರವನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂದು ಹೇಳಿದರು.
ಬಮೂಲ್ ನಿರ್ದೇಶಕ ಬಿವಿ.ಸತೀಶ್‌ಗೌಡ ಮಾತನಾಡಿ, ಸುಮಾರು 40 ಸಾವಿರ ನೋಟ್ ಬುಕ್‌ಗಳು ಸಂಗ್ರಹ ಆಗಿದ್ದು ಅದನ್ನು ತಾಲೂಕಿನ 22 ಕ್ಲಸ್ಟರ್ ಶಾಲಾ ಮಕ್ಕಳಿಗೆ ಹಂಚಲಾಗುವುದು. ಪ್ರಥಮವಾಗಿ ಬೆಂಡಿಗಾನಹಳ್ಳಿ ಸರ್ಕಾರಿ ಶಾಲೆಗೆ ವಿತರಣೆ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸಪ್ಪ, ಸಿಆರ್‌ಪಿ ಮಂಜುನಾಥ್, ಯುವ ಮುಖಂಡ ರುತ್ವಿಕ್ ಗೌಡ ಹಾಜರಿದ್ದರು.ಫೋಟೋ : 4 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ಶಾಲೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಿದರು.