- ವಿವಿಧೆಡೆ ಮರ ಬಿದ್ದು ಮನೆಗಳಿಗೆ ಹಾನಿ । ನಿಲ್ಲದ ಗಾಳಿಯ ಮಳೆ ಅಬ್ಬರಕ್ಕೆ ಕೆಲವೆಡೆ ವಿದ್ಯುತ್, ಸಂಚಾರ ವ್ಯತ್ಯಯ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುಬಾಳೆಹೊನ್ನೂರು ಪಟ್ಟಣ ಸೇರಿದಂತೆ ಹೋಬಳಿ ವಿವಿಧೆಡೆ ಗಾಳಿ ಅಬ್ಬರದೊಂದಿಗೆ ಶುಕ್ರವಾರವೂ ಪುಷ್ಯ ಮಳೆಯ ಆರ್ಭಟಕ್ಕೆ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ನಂತರದಲ್ಲಿ 40 ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕದಲ್ಲಿ ತೀವ್ರ ವ್ಯತ್ಯಯವಾಗಿದೆ.
ಪಟ್ಟಣದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಮಸೀದಿಕೆರೆ ಹಾಗೂ ರಂಭಾಪುರಿ ಪೀಠದ ಮಾರ್ಗದಲ್ಲಿ 30 ವಿದ್ಯುತ್ ಕಂಬಗಳು ಸಾಲಾಗಿ ಉರುಳಿ ಬಿದ್ದಿವೆ. ಮಠದ ರಸ್ತೆಯ ರಾಮಣ್ಣ ಹೆಗ್ಡೆ ಅವರ ಮನೆ ಮುಂಭಾಗದ ಸಾಗುವಾನಿ ಮರ ಹಾಗೂ ಎದುರಲ್ಲಿ ಬೃಹತ್ ಒಣಗಿದ ಮರ ಉರುಳಿದ ಪರಿಣಾಮ ಹಲವು ವಿದ್ಯುತ್ ಕಂಬಗಳು ತುಂಡಾಗಿವೆ.ರಂಭಾಪುರಿ ಪೀಠ ಸಮೀಪದಲ್ಲಿ ನಂದಿ ಮರವೊಂದು ಉರುಳಿ ಮುಖ್ಯರಸ್ತೆಯ ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ತುಂಡಾಗಿವೆ. ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಬನ್ನೂರು, ಮಾಗುಂಡಿ, ಗಡಿಗೇಶ್ವರ ವ್ಯಾಪ್ತಿಯಲ್ಲೂ ಭಾರೀ ಗಾಳಿಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ. ಈ ಭಾರಿ ಮಳೆಗೆ ಜು.25ರ ಗುರುವಾರದವರೆಗೆ 180 ವಿದ್ಯುತ್ ಕಂಬಗಳು ವಿವಿಧೆಡೆ ಹಾನಿಯಾಗಿದ್ದವು. ಈಗ ಅವುಗಳನ್ನು ಸರಿಪಡಿಸಲಾಗಿದೆ. ಮತ್ತೆ ಶುಕ್ರವಾರ ಬೆಳಗಿನ ವೇಳೆಗೆ 40 ವಿದ್ಯುತ್ ಕಂಬಗಳು ತುಂಡಾಗಿವೆ. ಇದರ ದುರಸ್ತಿಗೆ 3-4 ದಿನಗಳ ಸಮಯಾವಕಾಶ ಬೇಕು ಎಂದು ಮೆಸ್ಕಾಂ ಜೆಇ ಗಣೇಶ್ ಪತ್ರಿಕೆಗೆ ತಿಳಿಸಿದ್ದಾರೆ.
ಅಲ್ಲದೇ ವಿವಿಧೆಡೆ ಜಲಜೀವನ್ ಕಾಮಗಾರಿಯಿಂದ ಪೈಪ್ ಲೈನ್‌ಗೆ ಗುಂಡಿ, ಕೆಲವು ಕಡೆಗಳಲ್ಲಿ ರಸ್ತೆ ಅಗಲೀಕರಣಕ್ಕೆ ಮಣ್ಣನ್ನು ಅಗೆಯಲಾಗಿದೆ. ಇದರಿಂದ ಹೆಚ್ಚು ವಿದ್ಯುತ್ ಕಂಬಗಳು ಈ ಬಾರಿ ಧರೆಗುರುಳಿವೆ.ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯಲ್ಲಿ 7 ಫೀಡರ್‌ಗಳಿದ್ದು, ಕೇವಲ 16 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಪೀಡರ್‌ಗೆ ಕನಿಷ್ಠ 3-4 ಸಿಬ್ಬಂದಿ ಇದ್ದರೆ ಕಾರ್ಯನಿರ್ವಹಣೆ ಚುರುಕಾಗಲಿದೆ. ಅತಿಯಾದ ಗಾಳಿಯಿಂದ ಪದೇ ಪದೇ ವಿದ್ಯುತ್ ಲೈನ್‌ನಲ್ಲಿ ಸಮಸ್ಯೆ ಬರುತ್ತಿದ್ದು, ಇದರಿಂದ ಸಮರ್ಪಕ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ಗುಣ ಮಟ್ಟದ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಮೆಸ್ಕಾಂ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದರೂ ತಾಂತ್ರಿಕ, ಪ್ರಾಕೃತಿಕ ಸಮಸ್ಯೆಯಿಂದ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ತಿಳಿಸಿದ್ದಾರೆ.
ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಅರಳೀಕೊಪ್ಪದ ಆಶಾ ಲೋಬೋ ಎಂಬುವರ ಮನೆ ಹಾಗೂ ಕಾರಿನ ಮೇಲೆ ಮರ ಉರುಳಿ ಹಾನಿಯಾಗಿದೆ. ಇದೇ ಗ್ರಾಮದ ಮುಖ್ಯರಸ್ತೆಯಲ್ಲಿ ಮರವೊಂದು ಉರುಳಿ ಕೆಲಕಾಲ ಸಂಚಾರ ಬಂದ್ ಆಗಿತ್ತು. ಬಾಳೆ ಹೊನ್ನೂರಿನಿಂದ ಹಲಸೂರು ಮೂಲಕ ಮಹಲ್ಗೋಡು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮೇಲೆ ಮರ ಬಿದ್ದು ಕೆಲ ಕಾಲ ಸಂಚಾರ ಕಡಿತಗೊಂಡಿತ್ತು.ಹಲಸೂರು ಗ್ರಾಮದ ಸೇತುವೆ ಮೇಲೆ ನೀರು ಉಕ್ಕಿ ಹರಿದು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಬಳಿಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಸೇತುವೆ ಕೆಳಭಾಗದ ಕಸ ಕಡ್ಡಿಗಳನ್ನು ತೆರವು ಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿದರು.
ಕೆಲವು ಕಡೆ ಮುಖ್ಯ ರಸ್ತೆಯಂಚಲ್ಲಿ ಸಣ್ಣಪುಟ್ಟ ಮರದ ಕೊಂಬೆ ಮುರಿದು ಬಿದ್ದಿದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳು ಅದನ್ನು ತೆರವುಗೊಳಿಸಲು ಮುಂದಾಗಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಚಾಲಕರು ದೂರಿದ್ದಾರೆ.೨೬ಬಿಹೆಚ್‌ಆರ್ ೧ಬಾಳೆಹೊನ್ನೂರಿನ ಮಸೀದಿಕೆರೆಯಿಂದ ರಂಭಾಪುರಿ ಪೀಠದ ಮುಖ್ಯರಸ್ತೆಯಲ್ಲಿ ವಿದ್ಯುತ್ ಲೈನ್, ಕಂಬ ತುಂಡಾಗಿ ಬಿದ್ದಿರುವುದು.
----೨೬ಬಿಹೆಚ್‌ಆರ್ ೨
ಬಾಳೆಹೊನ್ನೂರಿನಿಂದ ರಂಭಾಪುರಿ ಪೀಠಕ್ಕೆ ತೆರಳುವ ರಸ್ತೆಯ ಮೇಲೆ ಮರ ಬಿದ್ದಿರುವುದು.-----
೨೬ಬಿಹೆಚ್‌ಆರ್ ೩ಬಾಳೆಹೊನ್ನೂರು ಸಮೀಪದ ಅರಳೀಕೊಪ್ಪದಲ್ಲಿ ಮರ ಉರುಳಿ ಕಾರಿಗೆ ಹಾನಿಯಾಗಿರುವುದು.
----೨೬ಬಿಹೆಚ್‌ಆರ್ ೪
ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದಲ್ಲಿ ಹಳ್ಳದ ನೀರು ರಸ್ತೆಯ ಮೇಲೆ ಹರಿಯುತ್ತಿರುವುದು.----
೨೬ಬಿಹೆಚ್‌ಆರ್ ೫ಬಾಳೆಹೊನ್ನೂರಿನಿಂದ ಹಲಸೂರು ಮೂಲಕ ಮಹಲ್ಗೋಡು ಸಂಪರ್ಕಿಸುವ ರಸ್ತೆ ಮೇಲೆ ಮರ ಬಿದ್ದು ಸಂಚಾರ ಬಂದ್ ಆಗಿರುವುದು.