ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಚೈತಾಲಿ ಕಿರಣಗಿ ಭೀಕರವಾಗಿ ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಆಗ್ರಹಿಸಿ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿ ಗ್ರಾಮದ ಮಹಾವೀರ ವೃತದಲ್ಲಿ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ರಶ್ಮಿ ಜಕಾತಿ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮುಖಂಡ ಶೀತಲಗೌಡ ಪಾಟೀಲ ಮಾತನಾಡಿದ ಅವರು, ನಮ್ಮ ಗ್ರಾಮದ ಅಮಾಯಕ ಗರ್ಭಿಣಿ ಹೆಣ್ಣುಗಳನ್ನು ಆಕೆಯ ಪತಿ ಪ್ರದೀಪ ಕಿರಣಗಿ ಹಾಗೂ ಸಹಚರರು ಭೀಕರವಾಗಿ ಹತ್ಯೆ ಮಾಡಿ ಅಪಘಾತ ಎಂಬಂತೆ ನಾಟಕವಾಡುತ್ತಿದ್ದನು. ಆದರೆ, ಕಾಗವಾಡ ಠಾಣೆ ಪೊಲೀಸ್‌ರ ಚಾಣಾಕ್ಷ ನಡೆಯಿಂದ ಕೊಲೆಗಾರರು ಇಂದು ಕಂಬಿ ಹಿಂದೆ ಇದ್ದಾರೆ. ಇದರಲ್ಲಿ ಇನ್ನು ಯಾರ್‍ಯಾರು ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಅಮಾಯಕ ಜೀವ ತೆಗೆದುಕೊಂಡ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಪೊಲೀಸರು ಸಮಗ್ರ ತನಿಖೆ ಮಾಡಿ ಮೃತ ಚೈತಾಲಿ ಆತ್ಮಕ್ಕೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಮೃತ ಚೈತಾಲಿ ತಂದೆ ಅಣ್ಣಾಸಾಬ ಮಾಳಿ ಮಾತನಾಡಿ, ನಮ್ಮ ಮಗಳು ಪ್ರದೀಪ ಕಿರಣಗಿ ಇತನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ, ಅವಳಿಗೆ ಗಂಡನ ಮನೆಯಲ್ಲಿ ಬಹಳ ಕ್ರೂರವಾಗಿ ನಡೆಸಿಕೊಂಡಿದ್ದರು. ಈ ಬಗ್ಗೆ ಅವರ ತಾಯಿ ಬಳಿ ಮಗಳು ಹೇಳಿಕೊಂಡಿದ್ದಳು. ನನ್ನ ಮಗಳ ಕೊಲೆಯಲ್ಲಿ ಪ್ರದೀಪ ಕಿರಣಗಿ ನ್ಯಾಯವಾದಿ ಆಗಿದ್ದು, ಅವನಿಗೆ ಇನ್ನೊಬ್ಬ ಮಹಿಳಾ ನ್ಯಾಯವಾದಿ ಜೊತೆ ಅನೈತಿಕ ಸಂಬಂಧವಿದ್ದು, ಆ ಮಹಿಳೆ ಮತ್ತು ಪ್ರದೀಪ ಇಬ್ಬರು ಸೇರಿ ಇನ್ಸೂರೆನ್ಸ್ ಹಣ ಹಾಗೂ ಆಸ್ತಿ ಸಲುವಾಗಿ ಕೊಲೆ ಮಾಡಿದ್ದು, ಕೂಡಲೇ ಆ ಮಹಿಳಾ ನ್ಯಾಯವಾದಿಯನ್ನು ಬಂಧಿಸಿ ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾಗವಾಡ ನ್ಯಾಯವಾದಿಗಳ ಸಂಘದ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿದರು. ಮಾಜಿ ಶಾಸಕ ಮೋಹನರಾವ್ ಶಹಾ, ಮುಖಂಡರಾದ ವಸಂತ ಖೋತ, ಅಮೀನ್ ಶೇಖ, ಬಾಬು ಅಕಿವಾಟೆ, ವಜ್ರಕುಮಾರ ಮಗದುಮ್ಮ, ಶೀತಲ ಕುಂಬಾರ, ಸಚಿನ ಪೂಜಾರಿ, ಅಣ್ಣಾಸಾಬ ಖೋತ, ಶೀತಲ ಕುಂಬಾರ, ಪಿಂಟು ಸಮಗಾರ, ಮುರಗೇಶ ಕುಂಬಾರ, ಸಂದೀಪ ಖೋತ ಸೇರಿದಂತೆ ನೂರಾರು ಜನ ಮಹಿಳೆಯರು ಭಾಗವಹಿಸಿದ್ದರು.