ಲಕ್ಷ್ಮೇಶ್ವರ: ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಹೃದಯ ಭಗವಂತನಿಗಿರುವ ಗುಡಿ. ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.ಮಂಗಳವಾರ ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮ ನಿಜವಾದ ಸಂಪತ್ತು. ದೇವರಿಲ್ಲದ ಜಾಗ ಎಲ್ಲಿಯೂ ಇಲ್ಲ. ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಬೀಜ ಬಿತ್ತಿ ಮಾಧುರ್ಯದ ಫಲಗಳನ್ನು ಪಡೆದುಕೊಳ್ಳಬೇಕು. ಆಸೆ, ಆಮಿಷ ಅಳಿದು ಎಚ್ಚರದಿಂದ ಈ ಭವಸಾಗರ ದಾಟಬೇಕಾಗಿದೆ. ದುಷ್ಟ ಜನರ ಸಹವಾಸ ಬಿಟ್ಟು ಭವಬಂಧನ ಬಿಡಿಸುವ ಗುರುವನ್ನು ಕೂಡಿ ಬಾಳೋ ಎಂದು ಮಹಾನುಭಾವರು ಎಚ್ಚರಿಸಿದ್ದಾರೆ ಎಂದರು.

ಸಮಾರಂಭ ಉದ್ಘಾಟಿಸಿದ ಶಾಸಕ ಚಂದ್ರು ಲಮಾಣಿ ಮಾತನಾಡಿ, ಗುರಿಯೆಡೆಗೆ ಸಾಗುವಾಗ ಸಾವಿರ ಸಂಕಷ್ಟಗಳು ಬಂದರೂ ಕುಗ್ಗದೇ ಮುನ್ನಡೆಯಬೇಕು. ಜಗದೊಡೆಯನ ಧ್ಯಾನ ಮಾಡಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಶ್ರಮಿಸುವೆ ಎಂದರು.

ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೃತ್ಯು ಮಾನವರಿಗಷ್ಟೇ ಅಲ್ಲ. ಮಹಾತ್ಮರಿಗೂ ಬಿಟ್ಟಿಲ್ಲ. ಶಿವಮಂತ್ರ ಕೊಟ್ಟ ಗುರುವನ್ನು ಮರೆಯಬೇಡ. ಶ್ರದ್ಧೆ, ನಿಷ್ಠೆ ಅನುಭಾವದಿಂದ ಬದುಕು ನಿರಾಳ. ಜೀವನದ ಶ್ರೇಯಸ್ಸಿಗೆ ಪರಿಶ್ರಮ ಮತ್ತು ಪ್ರಯತ್ನ ಮುಖ್ಯ. ಲಿಂ. ರಂಭಾಪುರಿ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಭಕ್ತರ ಬಾಳಿಗೆ ಅರಿವು ನೀಡಿ ಉದ್ದರಿಸಿದ್ದನ್ನು ಮರೆಯಲಾಗದು ಎಂದರು.

ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವ ಜೀವನ ವೈವಿಧ್ಯಮಯದಿಂದ ಕೂಡಿದೆ. ವಿದ್ಯೆ, ವಿವೇಚನೆ, ಚಿಂತನೆ, ಆತ್ಮ ವಿಶ್ಲೇಷಣೆ, ಸತ್ಯ ಶುದ್ಧ ಧೈರ್ಯ ಜೀವನದ ಶ್ರೇಯಸ್ಸಿಗೆ ಮಟ್ಟಿಲು. ಗುರುವಿನಿಂದ ಅರಿವು ಪಡೆದು ಜೀವನ ಸಾಫಲ್ಯ ಮಾಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಕಲಾದಗಿಯ ಗಂಗಾಧರ ಶ್ರೀಗಳು, ಸುನೀಲ ಮಹಾಂತಶೆಟ್ಟರ, ವೀರೇಶ ಕೂಗೂ, ಸುಳ್ಳದ ಶ್ರೀಗಳು, ಮಳೆ ಮಲ್ಲಿಕಾರ್ಜುನ ಶ್ರಿಗಳು, ಸಿದ್ದರಬೆಟ್ಟದ ಶ್ರೀಗಳು, ಚಂದ್ರು ಬಾಳಿಹಳ್ಳಿಮಠ, ವೀರಣ್ಣ ಪವಾಡದ, ಜಯಶ್ರೀ ಕೋಲಕಾರ, ಸೋಮಣ್ಣ ಡಾಣಗಲ್ಲ, ಎಇಇ ಮಲ್ಲಿಕಾರ್ಜುನ ಪಾಟೀಲ ಮತ್ತಿತರರು ಇದ್ದರು. ಗದುಗಿನ ಪಂಡಿತ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಸಂಗಡಿಗರು ಭಕ್ತಿಗೀತೆಗಳನ್ನು ಹಾಡಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.