ರಸ್ತೆ, ಡಿವೈಡರ್ ನಲ್ಲಿ 40 ಪರ್ಸೆಂಟ್ ಲೂಟಿ !

KannadaprabhaNewsNetwork |  
Published : Oct 06, 2024, 01:20 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್ ನಿರ್ಮಾಣದಲ್ಲಿ ಶೇ.40 ರಷ್ಟು ಕಮಿಷನ್ ತಿಂದು ಸರ್ಕಾರಿ ಹಣ ಲೂಟಿ ಮಾಡಲಾಗಿದೆ. ನಗರಸಭೆ ಅನುಮತಿ ಪಡೆಯದೇ ಎಲ್ಲವನ್ನೂ ನಿರ್ವಹಿಸಲಾಗಿದೆ ಎಂಬ ಸಂಗತಿ ಶನಿವಾರ ನಡೆದ ಚಿತ್ರದುರ್ಗ ನಗರಸಭೆ ಅಧಿವೇಶನದಲ್ಲಿ ಮಾರ್ದನಿಸಿತು. ಅರ್ಧ ತಾಸಿಗೂ ಹೆಚ್ಚುವ ಸಮಯವನ್ನು ಈ ವಿಚಾರವೇ ನುಂಗಿ ಹಾಕಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್ ನಿರ್ಮಾಣದಲ್ಲಿ ಶೇ.40 ರಷ್ಟು ಕಮಿಷನ್ ತಿಂದು ಸರ್ಕಾರಿ ಹಣ ಲೂಟಿ ಮಾಡಲಾಗಿದೆ. ನಗರಸಭೆ ಅನುಮತಿ ಪಡೆಯದೇ ಎಲ್ಲವನ್ನೂ ನಿರ್ವಹಿಸಲಾಗಿದೆ ಎಂಬ ಸಂಗತಿ ಶನಿವಾರ ನಡೆದ ಚಿತ್ರದುರ್ಗ ನಗರಸಭೆ ಅಧಿವೇಶನದಲ್ಲಿ ಮಾರ್ದನಿಸಿತು. ಅರ್ಧ ತಾಸಿಗೂ ಹೆಚ್ಚುವ ಸಮಯವನ್ನು ಈ ವಿಚಾರವೇ ನುಂಗಿ ಹಾಕಿತು.

ಸಭೆಯ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮಂಜುನಾಥ ಗೊಪ್ಪೆ, ಸಿಸಿ ರಸ್ತೆ ಹಾಗೂ ಡಿವೈಡರ್ ನಿರ್ಮಾಣ ಮಾಡುವಾಗ ನಗರಸಭೆ ಅನುಮತಿ ಪಡೆಯಲಾಗಿದೆಯೇ, ನಿಯಮಾವಳಿ ಪಾಲನೆ ಮಾಡಲಾಗಿದೆಯೇ ಎಂಬಿತ್ಯಾದಿ ಪ್ರಶ್ನೆ ಮುಂದಿಟ್ಟರು. ಡಿವೈಡರ್ ನಿಂದ ಯಾರಿಗೂ ಉಪಯೋಗವಿಲ್ಲ. ಹಣ ಲೂಟಿ ಮಾಡಲೆಂದೇ ನಿರ್ಮಾಣ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಾತಿಗೆ ದನಿಗೂಡಿಸಿದ ಅಧ್ಯಕ್ಷೆ ಸುಮಿತ ರಾಘು, ಡಿವೈಡರ್ ಗಳಿಂದಾಗಿ ನಮ್ ವಾರ್ಡಿನ ನಾಲ್ವರು ಮೃತಪಟ್ಟಿದ್ದಾರೆ. ಇಂತಹ ನಿರ್ಮಾಣ ಮಾಡುವಾಗ ಇಂಜಿನಿಯರ್ ಗಳು ಯೋಚಿಸಲಿಲ್ಲವೇ ಎಂದು ಪ್ರಶ್ನಿಸಿದರು.

ಸದಸ್ಯ ಸೈಯದ್ ನಸರುಲ್ಲಾ ಮಾತನಾಡಿ, ಚಿತ್ರದುರ್ಗದಲ್ಲಿ ಇರುವ ಡಿವೈಡರ್ ಗಳು ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಪತ್ರಿಕೆಗಳಲ್ಲಿ ಸರಣಿ ವರದಿಗಳು ಬಂದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲವೆಂದು ಆರೋಪಿಸಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚಂದ್ರಪ್ಪ, ಸಿಸಿ ರಸ್ತೆ ಹಾಗೂ ಡಿವೈಡರ್ ನಿರ್ಮಾಣ ಮಾಡುವಾಗ ನಗರಸಭೆ ಅನುಮತಿ ಪಡೆಯಲಾಗಿಲ್ಲ. ಚಳ್ಳಕೆರೆ ಟೋಲ್ ಗೇಟ್ ನಿಂದ ಪ್ರವಾಸಿ ಮಂದಿರ, ಗಾಂಧಿ ವೃತ್ತ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕವರೆಗೆ ಸಿಸಿ ರಸ್ತೆ, ಡಿವೈಡರ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಇದು ಹಳೇ ಲೋಕೋಪಯೋಗಿ ಇಲಾಖೆ ರಸ್ತೆಯಾಗಿರುವುದರಿಂದ ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯಲಾಗಿಲ್ಲ. ಐಆರ್ ಸಿ(ಇಂಡಿಯನ್ ರೋಡ್ ಕಾಂಗ್ರೆಸ್) ಪ್ರಕಾರ ಐದುವರೆ ಮೀಟರ್ ರಸ್ತೆ ಇದ್ದರೆ ಡಿವೈಡರ್ ಹಾಕಬೇಕು ಎಂದಿದೆ. ಇದರ ಅನುಸಾರವೇ ಚಿತ್ರದುರ್ಗದಲ್ಲಿ ಡಿವೈಡರ್ ನಿರ್ಮಿಸಲಾಗಿದೆ ಎಂದರು.

ಈ ಮಾತಿಗೆ ಕೆರಳಿದ ಸದಸ್ಯ ಮಂಜುನಾಥ ಗೊಪ್ಪೆ ಹಾಗೂ ನಸರುಲ್ಲಾ, ಓಡಾಡಲು ಪುಟ್ ಪಾತ್ , ಚರಂಡಿಗಳೇ ಇಲ್ಲ. ಡಿವೈಡರ್ ಹಾಕಿದರೆ ಹೇಗೆ? ಒಂದರ ಪಕ್ಕ ಮತ್ತೊಂದು ಕಾರು ಹೋಗುವಷ್ಟ ಜಾಗವಿಲ್ಲ. ಡಿವೈಡರ್ ನಿರ್ಮಿಸುವಾಗ ನಗರಸಭೆಯಿಂದ ಅನುಮತಿ ಪಡೆದಿಲ್ಲವೆಂದಾದಲ್ಲಿ ಅದನ್ನು ಏಕೆ ಹಸ್ತಾಂತರಿಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗ ನಗರದಲ್ಲಿ ಡಿವೈಡರ್ ಗಳಲ್ಲಿರುವ ವಿದ್ಯುತ್ ಕಂಬಗಳಿಗೆ ಸಂಪರ್ಕ ಕಲ್ಪಿಸುವ ಸಂಬಂಧ ಸಿಸಿ ರಸ್ತೆಗಳ ಅಗೆಯಲಾಗುತ್ತಿದೆ. ಡಿವೈಡರ್ ನಿರ್ಮಿಸುವಾಗ ಪರಿಜ್ಞಾನ ಇರಲಿಲ್ಲವೇ? ರಸ್ತೆ ಮಾಡಿ ಮತ್ತೆ ಅಗೆಯುವುದು ಏಕೆ? ಎಂದು ಸದಸ್ಯ ಮಂಜುನಾಥ ಗೊಪ್ಪೆ ಪ್ರಶ್ನಿಸಿದರು.

ಬಹುತೇಕ ಕಡೆ ಡಿವೈಡರ್ ಗಳಲ್ಲಿರುವ ವಿದ್ಯುತ್ ಕಂಬಗಳಲ್ಲಿ ದೀಪ ಉರಿಯುತ್ತಿಲ್ಲ, ಕತ್ತಲಾಗಿದೆ ಎಂದು ನಸರುಲ್ಲಾ ಅಸಮಧಾನ ಹೊರ ಹಾಕಿದರು.

ನಗರಸಭೆ ವಿದ್ಯುತ್ ಬಿಲ್ ಕಟ್ಟಬೇಕಿರುವುದರಿಂದ ಮೀಟರ್ ಹಾಕಬೇಕಿದೆ. ಮೀಟರ್ ಹಾಕದೇ ಇರುವುದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಹಿಂದೂ ಮಹಾಗಣಪತಿ ಶೋಭಾಯಾತ್ರೆ ಇದ್ದುದರಿಂದ ತಾತ್ಕಾಲಿಕವಾಗಿ ಎಲ್ಲ ಕಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತೆಂದು ಪಿಡಬ್ಲ್ಯುಡಿ ಇಂಜಿನಿಯರ್ ಚಂದ್ರಪ್ಪ ಹೇಳಿದರು.

ಶನಿವಾರ, ಶುಕ್ರವಾರ ಸಭೆ ಬೇಡ

ಶನಿವಾರ ಹಿಂದೂಗಳಿಗೆ ಪವಿತ್ರವಾದ ದಿನ. ಹಾಗೆಯೇ ಶುಕ್ರವಾರ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ತೊಡಗಿರುತ್ತಾರೆ. ಇವೆರಡು ದಿನಗಳ ಬಿಟ್ಟು ನಗರಸಭೆ ಸಾಮಾನ್ಯ ಸಭೆ ಕರೆಯುವಂತೆ ಸದಸ್ಯ ಶ್ರೀನಿವಾಸ್ ಆಗ್ರಹಿಸಿದರು. ಜೆಜೆ ಹಟ್ಟಿ ವಾರ್ಡ್ ನಲ್ಲಿ ಯಾವುದೇ ಕೆಲಸಗಳಾಗಿಲ್ಲ. ಕುಡಿವ ನೀರಿನ ಕೊಳವೆ ಬಾವಿಗಳಿಗೆ ಮೋಟರ್ ಇಳಿಬಿಟ್ಟಿಲ್ಲವೆಂದು ಸದಸ್ಯ ಜೈಲುದ್ದೀನ್ ಸಭೆ ಗಮನಕ್ಕೆ ತಂದರು. ಸಮಸ್ಯೆಗಳ ಪಟ್ಟಿ ಮಾಡಿ ಕೊಟ್ಟಲ್ಲಿ ಆದ್ಯತೆ ಮೇರೆಗೆ ಪರಿಗಣಿಸುವುದಾಗಿ ಪೌರಾಯಕ್ತೆ ರೇಣುಕಾ ಹೇಳಿದರು. ನಾಲ್ಕು ದಿನದ ಹಿಂದೆ ಕರೆಯಲಾದ ಸಭೆಯಲ್ಲಿ ಸದಸ್ಯ ಶ್ರೀನಿವಾಸ್ ಅಧ್ಯಕ್ಷರಿಗೆ ಅವಮಾನ ಮಾಡಿದ್ದಾರೆಂಬ ಸಂಗತಿ ಕೆಲಕಾಲ ಚರ್ಚೆಗೆ ಗ್ರಾಸವಾಗಿತ್ತು. ಬಹುತೇಕ ಸದಸ್ಯರು ಶ್ರೀನಿವಾಸ್ ಮೇಲೆ ಮುಗಿ ಬಿದ್ದರು. ಒಂದು ಹಂತದಲ್ಲಿ ಸದಸ್ಯರ ಹೊರ ಹಾಕುವ ಅಧಿಕಾರ ಅಧ್ಯಕ್ಷರಿಗಿದೆ. ಅವರು ತೀರ್ಮಾನ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ