ಹಗರಿಬೊಮ್ಮನಹಳ್ಳಿ ಕ್ಷೇತ್ರ ಅಭಿವೃದ್ಧಿಗೆ ₹400 ಕೋಟಿ ಅನುದಾನ

KannadaprabhaNewsNetwork |  
Published : Jun 14, 2025, 01:20 AM IST
ಫೋಟೋವಿವರ- (12ಎಂಎಂಎಚ್‌1) ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡಿನಲ್ಲಿ ಗುರುವಾರ ಅಲ್ಪಸಂಖ್ಯಾತರ ಅಭಿವೃದ್ದಿ ಯೋಜನೆಯಡಿಯಲ್ಲಿ 1 ಕೋಟಿ ರೂ.ಗಳ ರಸ್ತೆ ಕಾಮಗಾರಿಗೆ ಶಾಸಕ ಕೆ. ನೇಮಿರಾಜ್‌ ನಾಯ್ಕ ಭೂಮಿ ಪೂಜೆ ನೆರವೇರಿಸಿದರು | Kannada Prabha

ಸಾರಾಂಶ

ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 12ನೇ ವಾರ್ಡಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ₹1 ಕೋಟಿಗಳ ರಸ್ತೆ ಕಾಮಗಾರಿಗೆ ಶಾಸಕ ನೇಮರಾಜ ನಾಯ್ಕ ಭೂಮಿಪೂಜೆ ನೆರವೇರಿಸಿದರು.

ಮರಿಯಮ್ಮನಹಳ್ಳಿ: ಮುಂದಿನ ಒಂದು ತಿಂಗಳ ಒಳಗಾಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಂದಾಜು ₹400 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮರಾಜ್ ನಾಯ್ಕ ಹೇಳಿದರು.

ಪಟ್ಟಣದ 12ನೇ ವಾರ್ಡಿನಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ₹1 ಕೋಟಿಗಳ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ಈಗ ₹4 ಕೋಟಿಗಳಲ್ಲಿ ಮರಿಯಮ್ಮನಹಳ್ಳಿಯ 12ನೇ ವಾರ್ಡಿನಲ್ಲಿ ವಿವಿಧ ಕಾಮಗಾರಿ ನಡೆಸಲಾಗುವುದು. ₹1 ಕೋಟಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಉಳಿದ ₹3 ಕೋಟಿಗಳಲ್ಲಿ ತಬ್ರಹಳ್ಳಿ, ಸಿಗನಹಳ್ಳಿ ಊರುಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.

ಒಂದೂವರೆ ವರ್ಷದಲ್ಲಿ ಮರಿಯಮ್ಮನಹಳ್ಳಿಯ ಎಲ್ಲ 18 ವಾರ್ಡ್‌ಗಳ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಚರಂಡಿ, ವಿದ್ಯುತ್‌ ದೀಪಗಳನ್ನು ಅ‍ಳವಡಿಸಲಾಗುವುದು. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ಯೋಜನೆ ಅಮೃತ್‌-2 ಯೋಜನೆಯಲ್ಲಿ ತುಂಗಭದ್ರಾ ಜಲಾಶಯದಿಂದ ಮರಿಯಮ್ಮನಹಳ್ಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ನಿರಂತರ ನೀರು ಸರಬರಾಜಿಗೆ ಅಗತ್ಯವಿರುವ ವಿದ್ಯುತ್ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಮರಿಯಮ್ಮನಹಳ್ಳಿಗೆ ದಿನದ 24 ತಾಸು ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರು, ಸಿಬ್ಬಂದಿ ನಿಯೋಜನೆಗೊಳಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಹಗರಿಬೊಮ್ಮನಹಳ್ಳಿಗೆ ಸಕ್ಕರೆ ಕಾರ್ಖಾನೆಯ ಅಗತ್ಯವಿದೆ. ಹಗರಿಬೊಮ್ಮನಹಳ್ಳಿ ಹೊರವಲಯದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣವಾದರೆ ಎಲ್ಲ ರೈತರಿಗೆ ಅನುಕೂಲವಾಗಲಿದೆ ಎಂದು ನೇಮರಾಜ ನಾಯ್ಕ ಹೇಳಿದರು.

ಸ್ಥಳೀಯ ಪಪಂ ಸದಸ್ಯರಾದ ಬೆಣಕಲ್ ಬಾಷಾ, ಎಸ್. ಮಹಮ್ಮದ್, ಪಪಂ. ಜೆಇ ಟಿ.ಎಸ್‌. ಹನುಮಂತಪ್ಪ, ಆರೋಗ್ಯ ನಿರೀಕ್ಷಕ ಹೇಮಂತ್ ರಾಜ್‌ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ